ಬೆಂಗಳೂರು: ನಗರದಲ್ಲಿ ಒಮಿಕ್ರಾನ್ ಸೋಂಕಿತ 46 ವರ್ಷದ ವ್ಯಕ್ತಿಯಲ್ಲಿ ಮಂಗಳವಾರ ಮತ್ತೆ ಕೋವಿಡ್-19 ಸೋಂಕು ತಗುಲಿದ್ದು, ಇದು ಮತ್ತಷ್ಟು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ವೃತ್ತಿಯಲ್ಲಿ ವೈದ್ಯರಾದ 46 ವರ್ಷದ ಈ ವ್ಯಕ್ತಿ ಸೋಂಕಿನಿಂದ ಚೇತರಿಸಿಕೊಂಡರು ಎನ್ನುವಷ್ಟರಲ್ಲಿ ಮತ್ತೆ ಪಾಸಿಟಿವ್ ಬಂದಿದೆ. ಡಿಸೆಂಬರ್ 2ರಂದು ರಾಜ್ಯದಲ್ಲಿ ಇಬ್ಬರಿಗೆ ಒಮಿಕ್ರಾನ್ ತಗುಲಿಲಿರುವುದು ದೃಢಪಟ್ಟಿತ್ತು. ಆ ಪೈಕಿ ಇವರೂ ಒಬ್ಬರಾಗಿದ್ದಾರೆ.
ಯಾವುದೇ ವಿದೇಶಿ ಪ್ರಯಾಣ ಮಾಡಿರದ ಈ ವೈದ್ಯ ನಗರದಲ್ಲಿ ನ. 18ರಂದು ನಡೆದ ವೈದ್ಯರ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಇದಾದ ನಂತರ ನ. 22ರಂದು ಅವರಲ್ಲಿ ಕೋವಿಡ್ ಸೋಂಕು ದೃಢಪಟ್ಟಿತ್ತು. ಪರೀಕ್ಷೆ ವೇಳೆ ಸಿಟಿ ವ್ಯಾಲ್ಯು (CT value) ಕಡಿಮೆ ಇದ್ದುದರಿಂದ ಜಿನೋಮಿಕ್ ಸಿಕ್ವೆನ್ಸಿಂಗ್ ಕಳುಹಿಸಲಾಗಿತ್ತು. ಆಗ, ರೂಪಾಂತರಿ ತಳಿ ದೃಢಪಟ್ಟಿತ್ತು.
ಇದನ್ನೂ ಓದಿ:ಬಿಜೆಪಿ ಸರಕಾರ ಬಂದ ಬಳಿಕ ಗೋ ಕಳ್ಳತನ ಪ್ರಕರಣ ಹೆಚ್ಚು: ಶಾಸಕ ಖಾದರ್ ಆರೋಪ
ಸೋಂಕು ದೃಢಪಟ್ಟ ದಿನದಿಂದ ಅಂದರೆ ನ. 22ರಿಂದ ಡಿ. 5ಕ್ಕೆ ಈ ವ್ಯಕ್ತಿಯ ಹದಿನಾಲ್ಕು ದಿನಗಳು ಪೂರ್ಣಗೊಳ್ಳುತ್ತವೆ. ಈ ಮಧ್ಯೆ ಇವರೊಂದಿಗೆ ಪ್ರಥಮ ಮತ್ತು ದ್ವಿತೀಯ ಸಂಪರ್ಕ ಹೊಂದಿದ್ದ ಐವರು ಕೋವಿಡ್ ಸಂಪರ್ಕಿತರಾಗಿದ್ದರು. ಇದರಲ್ಲಿ ಮೂವರು ಮಂಗಳವಾರ ನೆಗೆಟಿವ್ ಆಗಿದ್ದಾರೆ. ಉಳಿದವರಿಬ್ಬರ ವರದಿ ಬರಬೇಕಿದೆ. ಇನ್ನು ಈ ಐದೂ ಜನರ ಮಾದರಿಗಳನ್ನು ಜಿನೋಮಿಕ್ ಸಿಕ್ವೆನ್ಸಿಂಗ್ ಗೆ ಕಳುಹಿಸಲಾಗಿದ್ದು, ಬುಧವಾರ ವರದಿ ಬರುವ ಸಾಧ್ಯತೆ ಇದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಆಫ್ರಿಕ ವ್ಯಕ್ತಿ ವಿರುದ್ಧ ದೂರು: ಈ ಮಧ್ಯೆ ದಕ್ಷಿಣ ಆಫ್ರಿಕದಿಂದ ಬಂದಿದ್ದ 66 ವರ್ಷದ ವ್ಯಕ್ತಿ ಕೋವಿಡ್ ನಿಯಮ ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಆ ವ್ಯಕ್ತಿ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಕ್ವಾರಂಟೈನ್ ನಲ್ಲಿದ್ದ ದಕ್ಷಿಣ ಆಫ್ರಿಕದ ಈ ವ್ಯಕ್ತಿ ಸಂಬಂಧಪಟ್ಟವರಿಗೆ ಯಾವುದೇ ಅನುಮತಿ ಪಡೆಯದೆ ದುಬೈಗೆ ಹಾರಿದ್ದಾರೆ ಎನ್ನಲಾಗಿದೆ.