Advertisement

Bengaluru Crime: ಅತಿಯಾಗಿ ಮೊಬೈಲ್‌ ಬಳಸಿದಕ್ಕೆ ಪ್ರೇಯಸಿ ಹತ್ಯೆ?

10:11 AM Nov 30, 2024 | Team Udayavani |

ಬೆಂಗಳೂರು: ಕಳೆದ 4 ದಿನಗಳ ಹಿಂದೆ ಬೆಂಗಳೂರಿನ ಸರ್ವಿಸ್‌ ಅಪಾರ್ಟಮೆಂಟ್‌ನಲ್ಲಿ ಪ್ರೇಯಸಿ ಅಸ್ಸಾಂನ ಗುವಾಹಟಿ ಮೂಲದ ಮಾಯಾ ಗೊಗೋಯ್‌ (19) ಎಂಬಾಕೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಕೇರಳ ಮೂಲದ ಆರೋಪಿ ಆರವ್‌ ಹನೋಯ್‌ನನ್ನು ದೇವನಹಳ್ಳಿಯ ಬಳಿ ಇಂದಿರಾನಗರದ ಪೊಲೀಸರು ಬಂಧಿಸಿದ್ದಾರೆ. ವೈಯಕ್ತಿಕ ಕಾರಣದಿಂದ ಇಬ್ಬರ ನಡುವೆ ಜಗಳ ಉಂಟಾಗಿ ಆರೋಪಿ ಕೊಲೆ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.

Advertisement

ಅತಿಯಾಗಿ ಮೊಬೈಲ್‌ ಬಳಸಿದ್ದಕ್ಕೆ ಹತ್ಯೆ?: ಪ್ರೇಯಸಿ ಮಾಯಾ ಗೊಗೋಯ್‌ ಮೊಬೈಲ್‌ನಲ್ಲಿ ಹೆಚ್ಚಾಗಿ ಕಳೆಯುತ್ತಿದ್ದ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ ಎನ್ನಲಾಗುತ್ತಿದೆ. ಮಾಯಾ ತನ್ನೊಂದಿಗೆ ಹೆಚ್ಚು ಮಾತನಾಡದೇ ಅತೀಯಾದ ಮೊಬೈಲ್‌ ಬಳಕೆ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಪ್ರಿಯಕರ ಆರವ್‌ ಹನೋಯ್‌ ಆಕ್ರೋಶಗೊಂಡಿದ್ದ ಎನ್ನಲಾಗಿದೆ.

ನ.23 ರಂದು ಇಂದಿರಾನಗರ 2ನೇ ಹಂತದಲ್ಲಿರುವ ದಿ ರಾಯಲ್‌ ಲಿವಿಂಗ್‌ ಅಪಾರ್ಟ್‌ಮೆಂಟ್‌ಗೆ ಪ್ರೇಯಸಿ ಮಾಯಾಳನ್ನು ಆರೋಪಿ ಆರವ್‌ ಹನೋಯ್‌ ಕರೆ ತಂದಿದ್ದ. ಇದಾದ ಬಳಿಕ ವೈಯಕ್ತಿಕ ಕಾರಣಕ್ಕೆ ಇಬ್ಬರ ನಡುವೆ ಜಗಳವಾಗಿತ್ತು. ಇದರಿಂದ ಆಕ್ರೋಶಗೊಂಡ ಆರೋಪಿಯು ಆಕೆಯನ್ನು ಕೊಲೆ ಮಾಡಲೆಂದು ಆ್ಯಪ್‌ವೊಂದರ ಮೂಲಕ ಚಾಕು ಹಾಗೂ ಹಗ್ಗವನ್ನು ಆರ್ಡರ್‌ ಮಾಡಿಕೊಂಡು ತಾನಿದ್ದ ಅಪಾರ್ಟ್‌ಮೆಂಟ್‌ಗೆ ತರಿಸಿಕೊಂಡಿದ್ದ. ನಂತರ ಆಕೆಯನ್ನು ಕೊಲೆ ಮಾಡಿದ್ದ. ಬಳಿಕ ಮರು ದಿನ ಬೆಳಗ್ಗೆ ಕ್ಯಾಬ್‌ ಬುಕ್‌ ಮಾಡಿಕೊಂಡು ಅಪಾರ್ಟ್‌ಮೆಂಟ್‌ನಿಂದ ಮೆಜೆಸ್ಟಿಕ್‌ ರೈಲ್ವೆ ನಿಲ್ದಾಣಕ್ಕೆ ತೆರಳಿ ಮೊಬೈಲ್‌ ಸ್ವಿಚ್ಡ್‌ಆಫ್ ಮಾಡಿಕೊಂಡಿದ್ದ. ಅಲ್ಲಿಂದ ರೈಲಿನಲ್ಲಿ ಮಧ್ಯಪ್ರದೇಶ, ಉತ್ತರ ಪ್ರದೇಶ ಹಾಗೂ ವಾರಾಣಸಿಗೆ ಹೋಗಿದ್ದ.

ಉತ್ತರ ಭಾರತದಲ್ಲಿ ಖಾಕಿ ಶೋಧ: ಇತ್ತ ಆರೋಪಿಯ ಬಂಧನಕ್ಕೆ ಪೂರ್ವ ವಿಭಾಗದ ಪೊಲೀಸರು 2 ತಂಡ ರಚಿಸಿದ್ದರು. ಅಪಾರ್ಟ್‌ಮೆಂಟ್‌ನ ಸಿಸಿ ಕ್ಯಾಮೆರಾದಲ್ಲಿ ಆರೋಪಿ ಹಾಗೂ ಯುವತಿ ತಮ್ಮ ಹೆಸರು ನೋಂದಾಯಿಸಿ ಒಳಗೆ ಹೋಗಿರುವುದು ಸೆರೆಯಾಗಿತ್ತು. ಇದನ್ನು ಆಧರಿಸಿ ಆರೋಪಿಯ ಬೆನ್ನು ಬಿದ್ದ ಪೊಲೀಸರು ಕೇರಳ ಹಾಗೂ ಉತ್ತರ ಭಾರತದಲ್ಲಿ ಆತನಿಗಾಗಿ ಹುಡುಕಾಟ ನಡೆಸಿದ್ದರು. ಉತ್ತರ ಭಾರತದ ಹಲವು ನಗರಗಳನ್ನು ಸುತ್ತಿದ ಆರೋಪಿಯು ಶುಕ್ರವಾರ ದೇವನಹಳ್ಳಿ ಬಳಿ ಬಂದಿರುವ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿತ್ತು. ಕೂಡಲೇ ಆತನನ್ನು ದೇವನಹಳ್ಳಿ ಬಳಿ ಬಂಧಿಸಿದ್ದಾರೆ.

ಡೇಟಿಂಗ್‌ ಆ್ಯಪ್‌ ಮೂಲಕ ಪರಿಚಯ

Advertisement

ಕೇರಳ ಮೂಲದ ಆರೋಪಿ ಆರವ್‌ ಹನೋಯ್‌ 6 ತಿಂಗಳ ಹಿಂದೆ ಬೆಂಗಳೂರಿಗೆ ಬಂದು ಇಲ್ಲಿನ ಖಾಸಗಿ ಕಂಪನಿಯೊಂದರಲ್ಲಿ ಇಂಟರ್ನ್ಶಿಪ್‌ ಮಾಡುತ್ತಿದ್ದ. ತಿಂಗಳಿಗೆ 15 ಸಾವಿರ ರೂ. ವೇತನ ಪಡೆಯುತ್ತಿದ್ದ. ಹತ್ಯೆಯಾದ ಮಾಯಾ ಗೊಗೋಯ್‌ ಜಯನಗರ ಹಾಗೂ ಎಚ್‌ಎಸ್‌ ಆರ್‌ ಬಡಾವಣೆಯಲ್ಲಿರುವ ಕೌನ್ಸೆಲಿಂಗ್‌ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದಳು. 6 ತಿಂಗಳ ಹಿಂದೆ ಡೇಟಿಂಗ್‌ ಆ್ಯಪ್‌ ಮೂಲಕ ಇಬ್ಬರಿಗೂ ಪರಿಚಯವಾಗಿತ್ತು. ಇಬ್ಬರೂ ತಮ್ಮ ಮೊಬೈಲ್‌ ನಂಬರ್‌ ವಿನಿಮಯ ಮಾಡಿಕೊಂಡು ಆತ್ಮೀಯತೆ ಬೆಳೆದಿತ್ತು. ನಂತರ ಇಬ್ಬರು ನ.23ರಂದು ಅಪಾರ್ಟ್‌ಮೆಂಟ್‌ಗೆ ಬಂದಿದ್ದರು. ಇನ್ನು ಕೊಲೆಯಾದ ಮಾಯಳ ಸಹೋದರಿ ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ವಾಸವಿದ್ದು, ಶುಕ್ರವಾರ ಆಕೆಗೆ ಕರೆ ಮಾಡಿದ್ದ ಮಾಯಾ ಆಫೀಸ್‌ ಪಾರ್ಟಿ ಇದೆ. ರಾತ್ರಿ ಬರುವುದಿಲ್ಲ ಎಂದು ತಿಳಿಸಿದ್ದಳು.

Advertisement

Udayavani is now on Telegram. Click here to join our channel and stay updated with the latest news.

Next