ದೇವನಹಳ್ಳಿ: ಮನೆಬಿಟ್ಟು ಬಂದಿದ್ದ ಯುವತಿಯನ್ನು ಪುಸಲಾಯಿಸಿ ಅತ್ಯಾಚಾರವೆಸಗಿ ಅಕ್ರಮವಾಗಿ ದೆಹಲಿಗೆ ಮಾರಾಟ ಮಾಡಲು ಯತ್ನಿಸಿದ ಆರೋಪಿಯನ್ನು ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ಬಂಧಿಸಿದ್ದಾರೆ.
ನಾಗೇಶ್ ಬಂಧಿತ ಆರೋಪಿ. ಮನೆಯಲ್ಲಿ ಜಗಳ ಮಾಡಿಕೊಂಡು ಕೋಲಾರದಿಂದ ಬೆಂಗಳೂರಿಗೆ ಬಂದಿದ್ದ ಯುವತಿಗೆ ಸಹಾಯ ಮಾಡುವುದಾಗಿ ನಂಬಿಸಿ ಮಾರಾಟಕ್ಕೆ ಯತ್ನಿಸಿದ್ದಾನೆ ಎಂಬುದು ಪೊಲೀಸರ ತನಿಖೆಯಲ್ಲಿ ತಿಳಿಸಿದು ಬಂದಿದೆ.
ಕ್ಷುಲ್ಲಕ ವಿಚಾರಕ್ಕೆ ಜಗಳ ಮಾಡಿಕೊಂಡು ಮನೆ ಬಿಟ್ಟು ಕೆಲಸ ಅರಸಿ ಯುವತಿ ಬೆಂಗಳೂರಿಗೆ ಬಂದಿದ್ದು, ಇಲ್ಲಿ ಯಾರು ಪರಿಚಯವಿಲ್ಲದ ಕಾರಣ ಮೆಜೆಸ್ಟಿಕ್‌ನಲ್ಲಿ ಒಬ್ಬಳೇ ಕುಳಿತ್ತಿದ್ದಳು. ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ನಾಗೇಶ್ ಯುವತಿಯನ್ನು ಗಮನಿಸಿ ಆಕೆ ಬಳಿ ಬಂದು ವಿಚಾರಿಸಿದ್ದಾನೆ. ಆಕೆ ನಡೆದ ಎಲ್ಲಾ ವಿಷಯವನ್ನು ಹಂಚಿಕೊಂಡಿದ್ದಾಳೆ. ಬಳಿಕ ಕೆಲಸ
ಕೊಡಿಸುವುದಾಗಿ ನಂಬಿಸಿ ಆಕೆಯನ್ನು ದೇವನಹಳ್ಳಿಗೆ ಕರೆದುಕೊಂಡು ಬಂದು ಅತ್ಯಾಚಾರವೆಸಗಿದ್ದಾನೆ.
ಈ ವಿಷಯ ಎಲ್ಲೂ ಬಾಯಿ ಬಿಡದಂತೆ ಬೆದರಿಸಿ ನಂತರ, ವೇಶ್ಯಾವಾಟಿಕೆ ಅಡ್ಡೆಗೆ ಮಾರಾಟ ಮಾಡಲು ದೆಹಲಿಗೆ ಕರೆದುಕೊಂಡು ಹೋಗುವಾಗ ಏರ್ ಪೋರ್ಟ್ ತಪಾಸಣೆಯಲ್ಲಿ ಆರೋಪಿ ಹಾಗೂ ಯುವತಿಯನ್ನು ಕಂಡು ಅನುಮಾನಗೊಂಡ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ 10 ಸಾವಿರ ರೂಪಾಯಿಗೆ ಮಾರಾಟ ಮಾಡಲು ಯುವತಿಯನ್ನು ದೆಹಲಿಗೆ ಕರೆದೊಯ್ಯುತ್ತಿರುವುದಾಗಿ ಆರೋಪಿ ಬಾಯಿಬಿಟ್ಟಿದ್ದಾನೆ.
ಇದನ್ನೂ ಓದಿ : ಕಲ್ಯಾಣ ಮಂಟಪದಲ್ಲಿ ‘ಜೇಮ್ಸ್’ ಟೀಸರ್ ಪ್ರದರ್ಶನ ಮಾಡಿದ ಅಭಿಮಾನಿಗಳು
ನಾಗೇಶ್ ಈ ಹಿಂದೆಯೂ ಸಹ ಇದೇ ರೀತಿ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ ಕೆಲ ಯುವತಿಯರನ್ನು ನಂಬಿಸಿ ಅತ್ಯಾಚಾರವೆಸಗಿ ದೆಹಲಿಯಲ್ಲಿ ಯುವತಿಯರನ್ನು ಮಾರಾಟ ಮಾಡಿದ್ದ ಎಂಬುದು ವಿಚಾರಣೆಯಲ್ಲಿ ತಿಳಿದು ಬಂದಿದೆ. ಸದ್ಯ ಏರ್‌ಪೋರ್ಟ್ ಪೊಲೀಸರು ಯುವತಿಯನ್ನು ರಕ್ಷಿಸಿ, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.