ಬೆಂಗಳೂರು : ಕೆಲಸ ಮಾಡುತ್ತಿದ್ದ ಜ್ಯುವೆಲ್ಲರಿ ಮಳಿಗೆಯಲ್ಲಿ ಕೊಟ್ಟಿದ್ದ ಎಂಟು ಲಕ್ಷ ರೂ. ಪೈಕಿ ನಾಲ್ಕು ಲಕ್ಷ ರೂ. ದರೋಡೆಕೋರರು ಕಣ್ಣಿಗೆ ಖಾರದ ಪುಡಿ ಎರಚಿ ದರೋಡೆ ಮಾಡಿದ್ದಾರೆ ಎಂದು ಕಥೆ ಸೃಷ್ಟಿಸಿದ್ದ ಜ್ಯುವೆಲ್ಲರಿ ಮಳಿಗೆಯ ಮಾರಾಟ ಪ್ರತಿನಿಧಿ ಯೊಬ್ಬ ಬ್ಯಾಟರಾಯನಪುರ ಪೊಲೀಸರ ಅತಿಥಿಯಾಗಿದ್ದಾನೆ.
ಜೆ.ಪಿ.ನಗರದ ನಿವಾಸಿ ಅರುಣ್(26) ಬಂಧಿತ. ಆರೋಪಿ ಶಿವಾಜಿನಗರ ದಲ್ಲಿರುವ ಅಟ್ಟಿಕಾಗೋಲ್ಡ್ ಕಂಪನಿಯಲ್ಲಿ ಎರಡು ತಿಂಗಳಿಂದ ಮಾರಾಟ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದಾನೆ. ಬುಧವಾರ ಬೆಳಗ್ಗೆ ಶಿವಾಜಿನಗರದಲ್ಲಿರುವ ಕೇಂದ್ರ ಕಚೇರಿಯಿಂದ ಶಾಖೆಯಿಂದ ಪಡೆದ 8 ಲಕ್ಷ ರೂ. ಅನ್ನು ಬಾಪೂಜಿನಗರ ಮತ್ತು ಕೆಂಗೇರಿಯಲ್ಲಿರುವ ಶಾಖೆಗೆ ಕೊಡಬೇಕಿತ್ತು. ಆದರೆ, ಆರೋಪಿ ಎಂಟು ಲಕ್ಷ ರೂ. ಅನ್ನು ಕೊಂಡು ನೇರವಾಗಿ ಮನೆಗೆ ಹೋಗಿ, ನಾಲ್ಕು ಲಕ್ಷ ರೂ. ಇಟ್ಟಿದ್ದಾನೆ. ಬಳಿಕ ನಾಯಂಡಹಳ್ಳಿ ಮೇಲು ಸೇತುವೆ ಮೇಲೆ ಹೋಗುವಾಗ ಬೈಕ್ ನಿಲ್ಲಿಸಿ ತಾನೇ ಮುಖಕ್ಕೆ ಖಾರದ ಪುಡಿ ಎರಚಿಕೊಂಡು, ದರೋಡೆಯಾಗಿದೆ ಎಂದು ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನು ಅಡ್ಡಗಟ್ಟಿ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾನೆ. ಆಗ ಲಗೇಜ್ ಆಟೋ ಚಾಲಕನೊಬ್ಬ ನೀರು ಕೊಟ್ಟು ಸಹಾಯ ಮಾಡಿದ್ದಾನೆ ಎಂದು ಪೊಲೀಸರು ಹೇಳಿದರು.
ಕಥೆ ಕಟ್ಟಿ ಸಿಕ್ಕಿ ಬಿದ್ದ!: ಕಣ್ಣಿಗೆ ಖಾರದ ಪುಡಿ ಎರಚಿರುವ ಬಗ್ಗೆ ಆಟೋ ಚಾಲಕನಿಗೆ ಮೊಬೈಲ್ ಕೊಟ್ಟು ವಿಡಿಯೋ ಮಾಡಿಸಿದ್ದಾನೆ. ಬಳಿಕ ಮಾಲೀಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಆಗ ಮಾಲೀಕರು, ಕೂಡಲೇ ಪೊಲೀಸರಿಗೆ ದೂರು ನೀಡುವಂತೆ ಸಲಹೆ ನೀಡಿದ್ದಾರೆ. ನಂತರ 112ಗೆ ಕರೆ ಮಾಡಿದ ಆರೋಪಿ, ಮೇಲು ಸೇತುವೆಯಲ್ಲಿ ನಡೆದು ಹೋಗುತ್ತಿದ್ದ ಇಬ್ಬರು ಮುಖಕ್ಕೆ ಖಾರದ ಪುಡಿ ಎರಚಿ ನಾಲ್ಕು ಲಕ್ಷ ರೂ. ದರೋಡೆ ಮಾಡಿಪರಾರಿಯಾಗಿದ್ದಾರೆ ಎಂದು ದೂರು ನೀಡಿದ್ದ. ಈ ವಿಚಾರ ತಿಳಿಯುತ್ತಿದ್ದಂತೆ ಬ್ಯಾಟರಾಯನಪುರ ಠಾಣೆ ಇನ್‌ಸ್ಪೆಕ್ಟರ್ ಜಿ.ಕೆ. ಶಂಕರ್ ನಾಯಕ್ ಮತ್ತು ತಂಡ ಸ್ಥಳಕ್ಕೆ ದೌಡಾಯಿಸಿದರು.
ಇದನ್ನೂ ಓದಿ : ಇದು ತಾತ್ಕಾಲಿಕ ಸ್ಥಗಿತವಷ್ಟೇ.. ಮತ್ತೆ ರಾಮನಗರದಿಂದಲೇ ಪಾದಯಾತ್ರೆ ಮುಂದುವರಿಸುತ್ತೇವೆ
ಈ ವೇಳೆ ಇನ್‌ಸ್ಪೆಕ್ಟರ್‌ಗೆ ಬಿಳಿ ಬಣ್ಣದ ವಾಹನದಲ್ಲಿ ಬಂದ ಇಬ್ಬರು ಕಣ್ಣಿಗೆ ಖಾರದ ಪುಡಿ ಎರಚಿ ದರೋಡೆ ಮಾಡಿ ಪರಾರಿಯಾಗಿದ್ದಾರೆ ಎಂದು ಕಥೆ ಕಟ್ಟಿದ್ದಾನೆ. ಬಳಿಕ ಇನ್‌ಸೆಕ್ಟರ್ ಕೂಡಲೇ 112ಗೆ ಕರೆ ಮಾಡಿ, ಯಾವ ರೀತಿ ದೂರು ನೀಡಿದ್ದಾನೆ ಎಂಬ ಮಾಹಿತಿ ಪಡೆದುಕೊಂಡಿದ್ದು, ಅನುಮಾನಗೊಂಡು ಕೂಡಲೇ ನೇತ್ರತಜ್ಞರ ಬಳಿ ಕರೆದೊಯ್ದಾಗ ಕಣ್ಣಿಗೆ ಯಾವುದೇ ಹಾನಿಯಾಗಿಲ್ಲ ಎಂದು ದೃಢಪಡಿಸಿದ್ದರು. ಹೀಗಾಗಿ ಆತನನ್ನು ಠಾಣೆಗೆ ಕರೆದೊಯ್ದು ತೀವ್ರ ರೀತಿಯಲ್ಲಿ ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.
ಸಹೋದರಿ ಕುಟುಂಬಕ್ಕಾಗಿ ಕಳ್ಳತನ
ಆರೋಪಿ ಅರುಣ್ ಸಹೋದರಿಗೆ ಈಗಾಗಲೇ ಆಂಧ್ರಪ್ರದೇಶದ ಯುವಕನಿಗೆ ಕೊಟ್ಟು ಮದುವೆ ಮಾಡಲಾಗಿದೆ. ಆದರೆ, ಅವರ ಕುಟುಂಬದಲ್ಲಿ ಸಮಸ್ಯೆ ಇದೆ. ಹೀಗಾಗಿ ಹಣ ಕಳವು ಮಾಡಿದ್ದೇನೆ. ಬೇರೆ ಯಾವುದೇ ಉದ್ದೇಶವಿಲ್ಲ. ಕಂಪನಿಯ ಮಾಲೀಕರಿಗೆ ಹಣ ಕೇಳಿದಾಗ ಕೊಡಲಿಲ್ಲ. ಹೀಗಾಗಿ ಸಂಚು ರೂಪಿಸಿ ಹಣ ಕಳವು ಮಾಡಿ, ದರೋಡೆ ಕಥೆ ಕಟ್ಟಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.