ಬೆಂಗಳೂರು: ಮಸಾಜ್ ಮಾಡುವ ಸೋಗಿನಲ್ಲಿ ಇಬ್ಬರು ಮಹಿಳೆಯರು ವೃದ್ಧೆಯೊಬ್ಬರ 2 ಲಕ್ಷ ರೂ. ಮೌಲ್ಯದ ಚಿನ್ನದ ಸರ ಕದ್ದು ಪರಾರಿಯಾಗಿರುವ ಘಟನೆ ವಿಜಯನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿಜಯನಗರದ ನಿವಾಸಿ ಮಾಯಮ್ಮ (65) ಸರ ಕಳೆದುಕೊಂಡವರು. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಯಮ್ಮ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದು, ಮಾ.19ರಂದು ಬೆಳಗ್ಗೆ ಮನೆಗೆ ಬೇಕಾದ ವಸ್ತುಗಳನ್ನು ತರಲು ಅಂಗಡಿಗೆ ಹೋಗಿ, ವಾಪಸ್ ಬರುತ್ತಿದ್ದರು. ವಿಜಯನಗರ 1ನೇ ಮುಖ್ಯ ರಸ್ತೆಯಲ್ಲಿ ಇಬ್ಬರು ಮಹಿಳೆಯರು, ಮಾಯಮ್ಮರನ್ನು ಮಾತನಾಡಿಸಿದ್ದು, “ಹಳೆಯ ನೋವುಗಳಿದ್ದರೆ ನಿಮ್ಮ ಮನೆಗೆ ಬಂದು ಕಡಿಮೆ ಮೊತ್ತಕ್ಕೆ ಮಸಾಜ್ ಮಾಡುತ್ತೇವೆ’ ಎಂದು ನಂಬಿಸಿದ್ದಾರೆ. ಇದೇ ವೇಳೆ ಹಲವು ತಿಂಗಳಿಂದ ಕಾಲು ನೋವಿನಿಂದ ಬಳಲುತ್ತಿದ್ದ ಮಾಯಮ್ಮ ಇಬ್ಬರನ್ನು ಮನೆಗೆ ಕರೆದೊಯ್ದಿದ್ದಾರೆ.
ಇಬ್ಬರು ಮನೆಗೆ ಬಂದು ಮಾಯಮ್ಮ ಕಾಲು ಹಾಗೂ ಬೆನ್ನಿಗೆ ಎಣ್ಣೆ ಹಚ್ಚಿದ್ದರು. ಆ ವೇಳೆ ಕತ್ತಿನಲ್ಲಿರುವ ಚಿನ್ನದ ಸರ ತೆಗೆಯುವಂತೆ ಸೂಚಿಸಿದ್ದರು. ಮಾಯಮ್ಮಾ ಚಿನ್ನದ ಸರ ಬಿಚ್ಚಿ ಮನೆಯ ಹಾಲ್‌ನಲ್ಲಿ ಇಟ್ಟಿದ್ದರು. ನಂತರ ಕಾಲಿಗೆ ಮಸಾಜ್ ಮಾಡಲು ಮತ್ತೂಂದು ಕುರ್ಚಿ ಬೇಕಾಗುತ್ತದೆ ಎಂದು ಆರೋಪಿಗಳು ಹೇಳಿ, ಮನೆಯ ಮತ್ತೂಂದು ಕೊಠಡಿಯಲ್ಲಿದ್ದ ಕುರ್ಚಿ ತರುವುದಾಗಿ ಹೇಳಿ ಹೋದ ಆರೋಪಿಗಳು ಚಿನ್ನದ ಸರದ ಸಮೇತ ಪರಾರಿಯಾಗಿದ್ದಾರೆ. ಈ ಕುರಿತು ಮಾಯಮ್ಮ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಹಿಳೆಯರಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ : ಪರೀಕ್ಷೆ ಬರೆಯಲು ಗ್ರಾಮೀಣ ಮಕ್ಕಳಿಗೆ ಬಸ್ ವ್ಯವಸ್ಥೆ: ಶಿಕ್ಷಣ ಕಾಳಜಿ ಮೆರೆದ ಗ್ರಾಪಂ ಅಧ್ಯಕ್ಷ