ಬೆಂಗಳೂರು: ಜಾತಿ ನಿಂದನೆ ಮತ್ತು ಹನಿಟ್ರ್ಯಾಪ್ ಪ್ರಕರಣದಲ್ಲಿ ಸಿಲುಕಿರುವ ಶಾಸಕ ಮುನಿರತ್ನ ತನ್ನ ಕುಟುಂಬವನ್ನು ಹನಿಟ್ರ್ಯಾಪ್ ಮಾಡಲು ಯತ್ನಿಸಿದಲ್ಲದೆ, ಹತ್ಯೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಬಿಬಿಎಂಪಿ ಮಾಜಿ ಸದಸ್ಯೆ ಮಂಜುಳಾ ಪತಿ ಲಗ್ಗೆರೆ ನಾರಾಯಣಸ್ವಾಮಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ನಾರಾಯಣಸ್ವಾಮಿ ನೀಡಿದ ದೂರಿನ ಮೇರೆಗೆ ಶಾಸಕ ಮುನಿರತ್ನ, ಸುನಂದಮ್ಮ ವೆಂಕಟೇಶ್, ಲಕ್ಷ್ಮಮ್ಮ, ಜಯಮ್ಮ, ಲತಾ ಹಾಗೂ ಇತರರ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಸಕ ಮುನಿರತ್ನ ಮತ್ತು ಆತನ ಬೆಂಬಲಿಗರು ಕಳೆದ 8 ವರ್ಷಗಳಿಂದ ನನ್ನ ಮತ್ತು ನನ್ನ ಪತ್ನಿಯ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ನಮ್ಮ ಖಾಸಗಿ ವಿಡಿಯೋ ರೆಕಾರ್ಡ್ ಮಾಡಲು ಸುಪಾರಿ ನೀಡಿದ್ದಾರೆ. ಜತೆಗೆ ನನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿ, ರೌಡಿಪಟ್ಟಿ ತೆರೆಸಿ ಕಿರುಕುಳ ನೀಡಿದ್ದಾರೆ. ಅಲ್ಲದೆ, ನಮ್ಮನ್ನು ಹತ್ಯೆ ಮಾಡಲು ಹಲವು ಬಾರಿ ಯತ್ನಿಸಿದ್ದಾರೆ.
ಒಮ್ಮೆ ಪತ್ನಿ ಜತೆ ಮನೆ ದೇವರು ಕದಿರಿ ನರಸಿಂಹಸ್ವಾಮಿ ದೇವರ ದರ್ಶನಕ್ಕೆ ತೆರಳುವಾಗ ಮಾರ್ಗ ಮಧ್ಯೆ ನಮ್ಮನ್ನು ಹತ್ಯೆಗೆ ಸಂಚು ರೂಪಿಸಿದ್ದರು. ಅದಕ್ಕೆ ಅಂದಿನ ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಸಿದ್ದೇ ಗೌಡನನ್ನು ನಿಯೋಜಿಸಿದ್ದರು. ಇನ್ ಸ್ಪೆಕ್ಟರ್ ಐಯ್ಯಣ್ಣ ರೆಡ್ಡಿ ನನ್ನ ಪ್ರವಾಸದ ಮಾಹಿತಿ ಪಡೆದು ಸಂತೋಷ್‌ಗೆ ನೀಡಿ ದ್ದರು. ಈ ವಿಚಾರವಾಗಿ ಸಂತೋಷ್ ತಂದೆ ಸಿದ್ದೇಗೌಡ ಮುನಿರತ್ನ ಜತೆ ಜಗಳವಾಡಿದ್ದರು, ಇಂತಹ ಕೃತ್ಯಗಳಿಗೆ ಮಗನನ್ನು ಬಳಸಿಕೊಳ್ಳಬೇಡಿ ಎಂದಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. 2013ರ ಡಿಸೆಂಬರ್‌ನಲ್ಲಿ ನನ್ನ ವಿರುದ್ಧ ಸುಳ್ಳ ಪ್ರಕರಣ ದಾಖಲಿಸಿ, ಜೈಲಿಗೆ ಕಳುಹಿಸಿದ್ದರು. ಶಾಸಕರ ಸೂಚನೆಯಂತೆ ಪೊಲೀಸ್ ಸಿಬ್ಬಂದಿ ನನ್ನನ್ನು ಥಳಿಸಿ, ವಿವಸ್ತ್ರಗೊಳಿಸಿದ್ದರು. ಹೀಗಾಗಿ ಈ ಸುಳ್ಳು ಪ್ರಕರಣ ಬಗ್ಗೆ ತನಿಖೆ ನಡೆಸಬೇಕು ಎಂದು ನಾರಾಯಣಸ್ವಾಮಿ ಕೋರಿದ್ದಾರೆ.