ಬೆಂಗಳೂರು: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಇದೀಗ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಹೊಸ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ನಿರ್ಮಿಸಿದೆ. ಇದು ಕೆಲವೇ ದಿನಗಳಲ್ಲಿ ಉದ್ಘಾಟನೆಯಾಗಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.
ಸದ್ಯ ಇರುವ ಎನ್ ಸಿಎ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂಗೆ ತಾಗಿಕೊಂಡಿದೆ. ಇದೀಗ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರ ಇರುವಂತೆ ಹೊಸ ಎನ್ ಸಿಎ ನಿರ್ಮಿಸಲಾಗಿದೆ. ಇದು ವಿಶಾಲವಾಗಿದ್ದು, ಎಲ್ಲಾ ಸೌಕರ್ಯಗಳು ಇರಲಿದೆ. ನೂತನ ಎನ್‌ಸಿಎ ಪ್ರತ್ಯೇಕವಾಗಿ ವಿಸ್ತಾರ ಸಂಕೀರ್ಣದಲ್ಲಿ ಇರಲಿದೆ.
ಶನಿವಾರ (ಆ 03) ಈ ಬಗ್ಗೆ ಟ್ವೀಟ್ ಮಾಡಿರುವ ಜಯ್ ಶಾ, “ಬೆಂಗಳೂರಿನಲ್ಲಿ ನೂತನ ರಾಷ್ಟ್ರೀಯ ಅಕಾಡೆಮಿ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರವೇ ಉದ್ಘಾಟನೆ ನಡೆಯಲಿದೆ ಎಂದು ತಿಳಿಸಲು ಉತ್ಸಾಹಿತನಾಗಿದ್ದೇನೆ. ಹೊಸ ಎನ್‌ಸಿಎಯಲ್ಲಿ ವಿಶ್ವ ದರ್ಜೆಯ ಮೈದಾನಗಳು, 45 ಪ್ರ್ಯಾಕ್ಟೀಸ್ ಪಿಚ್‌ಗಳು, ಇಂಡೋರ್ ಕ್ರಿಕೆಟ್ ಪಿಚ್‌ಗಳು, ಒಲಿಂಪಿಕ್ ಗಾತ್ರದ ಈಜುಕೊಳಗಳು, ಸ್ಟೇಟ್ ಆಫ್ ಆರ್ಟ್ ಟ್ರೇನಿಂಗ್, ಪುನಶ್ಚೇತನ, ಕ್ರೀಡಾ ವಿಜ್ಞಾನಕ್ಕೆ ಸಂಬಂಧಿಸಿ ಸೌಲಭ್ಯಗಳು ಇರಲಿವೆ” ಎಂದು ಬರೆದುಕೊಂಡಿದ್ದಾರೆ.
ಬಿಸಿಸಿಐ ಕಾರ್ಯದರ್ಶಿಯಾಗಿ ಜಯ್ ಶಾ ಜವಾಬ್ದಾರಿ ಹೊತ್ತುಕೊಂಡ ಬಳಿಕ ಕ್ರಿಕೆಟ್‌ನಲ್ಲಿ ಕೆಲವೊಂದು ಸಕಾರಾತ್ಮಕ ಬದಲಾವಣೆಗಳಾಗಿವೆ. ಮಾಜಿ ಆಟಗಾರರು, ಮಾಜಿ ಅಂಪೈರ್ ಗಳ ಪಿಂಚಣಿಯನ್ನು ಹೆಚ್ಚಿಸಲಾಗಿದೆ. ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್) ಆರಂಭವಾಗಿದ್ದರಲ್ಲೂ ಜಯ್ ಶಾ ಪಾತ್ರವಿದೆ.
ದೇಶದಾದ್ಯಂತ ಹಲವಾರು ಕ್ರಿಕೆಟಿಗರನ್ನು ಬೆಳೆಸುವಲ್ಲಿ ಎನ್ ಸಿಎ ಪ್ರಮುಖ ಪಾತ್ರ ವಹಿಸಿದೆ. ಗಾಯಗಳಿಂದ ಚೇತರಿಸಿಕೊಳ್ಳುವ ರಾಷ್ಟ್ರೀಯ ಆಟಗಾರರಿಗೆ ಇದು ಪ್ರಮುಖ ಸ್ಥಳವಾಗಿ ಕಾರ್ಯನಿರ್ವಹಿಸುತ್ತದೆ. ಪುನರ್ವಸತಿ ಮತ್ತು ಅವರ ಫಾರ್ಮ್ ಅನ್ನು ಮರಳಿ ಪಡೆಯಲು ಅಭ್ಯಾಸ ಆಟಗಳಲ್ಲಿ ತೊಡಗಿಸಿಕೊಳ್ಳಲು ಆಟಗಾರರಿಗೆ ಎನ್ ಸಿಎ ಅವಕಾಶವನ್ನು ನೀಡುತ್ತದೆ. ಜಸ್ಪ್ರೀತ್ ಬುಮ್ರಾ (ಬೆನ್ನುನೋವು) ಮತ್ತು ರಿಷಭ್ ಪಂತ್ (ಕಾರು ಅಪಘಾತ) ಅವರು ಇತ್ತೀಚಿನ ದಿನಗಳಲ್ಲಿ ಎನ್‌ಸಿಎಯಲ್ಲಿ ಚೇತರಿಕೆಗೆ ಒಳಗಾದ ಪ್ರಮುಖ ಆಟಗಾರರು.
ಹೆಚ್ಚುವರಿಯಾಗಿ, ಎನ್‌ಸಿಎ ಅಂತಾರಾಷ್ಟ್ರೀಯ ಪ್ರವಾಸಗಳಿಗೆ ಮುನ್ನ ಟೀಮ್ ಇಂಡಿಯಾಕ್ಕೆ ತರಬೇತಿ ಶಿಬಿರಗಳನ್ನು ಆಯೋಜಿಸುತ್ತದೆ; ಶ್ರೀಲಂಕಾದ ಸೀಮಿತ ಓವರ್‌ಗಳ ಪ್ರವಾಸದ ಮೊದಲು, ಭಾರತೀಯ ಆಟಗಾರರು ಬೆಂಗಳೂರಿನಲ್ಲಿ ಒಟ್ಟುಗೂಡಿ ತರಬೇತಿ ಪಡೆದರು.
ಸದ್ಯ ವಿವಿಎಸ್ ಲಕ್ಷ್ಮಣ್ ಅವರು ಎನ್ ಸಿಎ ಅಧ್ಯಕ್ಷರಾಗಿದ್ದಾರೆ. ಅವರ ಅಧಿಕಾರವಧಿ ಶೀಘ್ರದಲ್ಲಿ ಅಂತ್ಯವಾಗಲಿದೆ. ಭಾರತದ ಮಾಜಿ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಅವರು ಮುಂದಿನ ಎನ್ ಸಿಎ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಬಹುದು ಎಂದು ಹೇಳಲಾಗುತ್ತಿದೆ.