ಮುಂಬಯಿ:ವಿದೇಶಿ ಬಂಡವಾಳದ ಒಳಹರಿವಿನ ಪರಿಣಾಮ ಮುಂಬಯಿ ಷೇರುಪೇಟೆಯ ಮೇಲೆ ಬೀರಿದ್ದು ಸಂವೇದಿ ಸೂಚ್ಯಂಕ 228 ಅಂಕಗಳ ಏರಿಕೆಯೊಂದಿಗೆ ಸೋಮವಾರ(ಜೂನ್ 07) ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿದೆ.
ಇದನ್ನೂ ಓದಿ:ಟೀಂ ಇಂಡಿಯಾದ ಬೌಲಿಂಗ್ ವಿಭಾಗ ಶ್ರೇಷ್ಠ ಮಟ್ಟದಲ್ಲಿದೆ: ಕಿವೀಸ್ ನಾಯಕ ವಿಲಿಯಮ್ಸನ್
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 228.46 ಅಂಕಗಳೊಂದಿಗೆ ಏರಿಕೆಯಾಗಿದ್ದು, 52,328.51ರ ಗಡಿ ದಾಟುವ ಮೂಲಕ ದಿನಾಂತ್ಯದ ವಹಿವಾಟು ಕೊನೆಗೊಳಿಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 81.40 ಅಂಕಗಳ ಏರಿಕೆಯೊಂದಿಗೆ 15,751.65ರ ಗಡಿ ತಲುಪಿದೆ.
ಸೆನ್ಸೆಕ್ಸ್ ಏರಿಕೆಯೊಂದಿಗೆ ಪವರ್ ಗ್ರಿಡ್, ಎನ್ ಟಿಪಿಸಿ, ಆಲ್ಟ್ರಾ ಟೆಕ್ ಸಿಮೆಂಟ್, ಟೆಕ್ ಮಹೀಂದ್ರಾ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಇಂಡಸ್ ಇಂಡ್ ಬ್ಯಾಂಕ್ ಷೇರುಗಳು ಲಾಭಗಳಿಸಿವೆ. ಮತ್ತೊಂದೆಡೆ ಬಜಾಜ್ ಫೈನಾನ್ಸ್, ಬಜಾಜ್ ಫಿನ್ ಸರ್ವ್, ಎಚ್ ಡಿಎಫ್ ಸಿ ಮತ್ತು ಡಾ.ರೆಡ್ಡೀಸ್ ಷೇರುಗಳು ನಷ್ಟ ಅನುಭವಿಸಿದೆ.
ದೇಶದಲ್ಲಿ ಕೋವಿಡ್ 19 ಸೋಂಕು ಪ್ರಕರಣ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಮತ್ತು ಕೆಲವು ರಾಜ್ಯಗಳಲ್ಲಿ ಲಾಕ್ ಡೌನ್ ನಿರ್ಬಂಧ ತೆರವುಗೊಳಿಸುತ್ತಿರುವುದು ಹೂಡಿಕೆದಾರರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇದರಿಂದ ಉತ್ತಮ ವಹಿವಾಟು ನಡೆದಿರುವುದಾಗಿ ರಿಲಯನ್ಸ್ ಸೆಕ್ಯುರಿಟೀಸ್ ಸ್ಟ್ರೆಟಜಿ ಹೆಡ್ ಬಿನೋದ್ ಮೋದಿ ತಿಳಿಸಿದ್ದಾರೆ.