ಮುಂಬಯಿ : ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ವಹಿವಾಟನ್ನು 442.35 ಅಂಕಗಳ ಭರ್ಜರಿ ಜಿಗಿತದೊಂದಿಗೆ 38,694.11 ಅಂಕಗಳ ಹೊಸ ಸಾರ್ವಕಾಲಿಕ ದಾಖಲೆಯ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 134.85 ಅಂಕಗಳ (ಶೇ.1.17) ಏರಿಕೆಯನ್ನು ದಾಖಲಿಸಿ ಹೊಸ ಸಾರ್ವಕಾಲಿಕ ದಾಖಲೆಯ ಎತ್ತರವಾಗಿ 11,691.95ಅಂಕಗಳ ಮಟ್ಟವನ್ನು ತಲುಪುವ ಸಾಧನೆ ಮಾಡಿತು. ಇದಕ್ಕೆ ಮುನ್ನ ವ್ಯವಹಾರದ ನಡುವಿನಲ್ಲಿ ಒಮ್ಮೆ ನಿಫ್ಟಿ ಇದೇ ಮೊದಲ ಬಾರಿಗೆ 11,700 ಅಂಕಗಳ ಮಟ್ಟವನ್ನು ದಾಟಿತ್ತು.
ಈ ವರ್ಷ ಎಪ್ರಿಲ್‌ನಲ್ಲಿ ಸೆನ್ಸೆಕ್ಸ್ 577.73 ಅಂಕಗಳ ಮತ್ತು ನಿಫ್ಟಿ 197.65 ಅಂಕಗಳ ದಾಖಲೆಯ ಜಿಗಿತವನ್ನು ಮಾಡಿತ್ತು. ಆ ಬಳಿಕದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ದಾಖಲಿಸಿರುವ ದೊಡ್ಡ ಜಿಗಿತ ಇಂದಿನದ್ದಾಗಿದೆ.
ಭಾರತೀಯ ಶೇರು ಮಾರುಕಟ್ಟೆಯಲ್ಲಿ ಇಂದಿನ ತೇಜಿಗೆ ಜಾಗತಿಕ ಮಾರುಕಟ್ಟೆಗಳಲ್ಲಿನ ಏರಿಕೆಯೇ ಕಾರಣವಾಗಿತ್ತು. ಮೇಲಾಗಿ ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿ ದರಗಳನ್ನು ತಾನಿನ್ನು ಹಂತ ಹಂತವಾಗಿ ಏರಿಸುವುದಾಗಿ ಹೇಳಿದ್ದುದು ಹೂಡಿಕೆದಾರರಲ್ಲಿ ವಿಶೇಷ ವಿಶ್ವಾಸವನ್ನು ತುಂಬಿತ್ತು.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,934 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; 1,451 ಶೇರುಗಳು ಮುನ್ನಡೆ ಸಾಧಿಸಿದವು; 1,265 ಶೇರುಗಳು ಹಿನ್ನಡೆ ಅನುಭವಿಸಿದವು; 218 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.