ನವದೆಹೆಲಿ: ಇಂಗ್ಲೆಂಡ್ ತಂಡದ ಸ್ಟಾರ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ತಮ್ಮ ಏಕದಿನ ಕ್ರಿಕೆಟ್ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ.
ತಮ್ಮ ಟ್ವಿಟರ್ ಖಾತೆಯಲ್ಲಿ ಅಧಿಕೃತವಾಗಿ ನಿವೃತ್ತಿಯ ವಿಚಾರವನ್ನು ಬಹಿರಂಗ ಪಡಿಸಿರುವ ಅವರು, ನಾನು ಮಂಗಳವಾರ ಇಂಗ್ಲೆಂಡ್ ಪರ ಡೆರ್ಹಾಮ್ ನಲ್ಲಿ ನನ್ನ ಕೊನೆಯ ಏಕದಿನ ಪಂದ್ಯವನ್ನು ಆಡಲಿದ್ದೇನೆ. ಏಕದಿನ ಕ್ರಿಕೆಟ್ ನಿಂದ ನಿವೃತ್ತಿಯಾಗಲು ನಿರ್ಧರಿಸಿದ್ದೇನೆ. ಇದೊಂದು ಕಷ್ಟಕರ ನಿರ್ಧಾರ. ಮೂರು ಮಾದರಿಯಲ್ಲಿ ಆಡುವುದು ಕಷ್ಟಕರ, ನನ್ನ ದೇಹ ನಿರೀಕ್ಷೆಯಷ್ಟು ಬೆಂಬಲ ನೀಡುತ್ತಿಲ್ಲ. ನನ್ನ ಸಹ ಆಟಗಾರರೊಂದಿಗೆ ಆಡಿದ ಪ್ರತಿ ನಿಮಿಷವನ್ನೂ ಕೂಡ ನಾನು ಆನಂದಿಂದ ಕಳೆದ. ಈ ಪಯಣ ಅವಿಸ್ಮರಣೀಯವಾಗಿತ್ತು. ಮುಂದೆ ಟಿ-ಟ್ವಿಂಟಿ ಹಾಗೂ ಟೆಸ್ಟ್ ಕ್ರಿಕೆಟ್ ಕಡೆ ಹೆಚ್ಚಿನ ಗಮನ ಕೊಡಲಿದ್ದೇನೆ ಎಂದು ಬರೆದು ಕೊಂಡಿದ್ದಾರೆ.
2011 ರಲ್ಲಿ ಐರ್ಲೆಂಡ್ ವಿರುದ್ಧ ತಮ್ಮ ಏಕದಿನ ಕ್ರಿಕೆಟ್ ಗೆ ಪಾರ್ದಾಪಣೆ ಮಾಡಿದ ಅವರು ಇದುವರೆಗೆ 104 ಪಂದ್ಯವನ್ನು ಆಡಿದ್ದು, 2,919 ರನ್ ಗಳನ್ನು ಗಳಿಸಿ 3 ಶತಕದೊಂದಿಗೆ, 21 ಅರ್ಧ ಶತಕವನ್ನು ಸಿಡಿಸಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ 2019 ರ ವಿಶ್ವಕಪ್ ನ ಮಹತ್ತರ ಪಂದ್ಯದಲ್ಲಿ ಔಟಾಗದೆ 84 ರನ್ ಗಳಿಸಿದ್ದು, ಸ್ಟೋಕ್ಸ್ ಶ್ರೇಷ್ಠ ಸಾಧನೆಗಳಲ್ಲಿ ಒಂದು. ಆಲ್ ರೌಂಡರ್ ಆಗಿರುವ ಸ್ಟೋಕ್ಸ್ ಬೌಲಿಂಗ್ ನಲ್ಲಿ 74 ವಿಕೆಟ್ ಗಳನ್ನು ಪಡೆದಿದ್ದಾರೆ.
ಪಾಕಿಸ್ತಾನ ವಿರುದ್ಧದ ರಾಯಲ್ ಲಂಡನ್ ಸರಣಿಯಲ್ಲಿ ಕಪ್ತಾನನಾಗಿ 3-0 ಯಿಂದ ಸರಣಿಯನ್ನು ಗೆದ್ದು ಏಕದಿನ ತಂಡದ ನಾಯಕನಾಗಿಯೂ ಸೈ ಎನ್ನಿಸಿಕೊಂಡಿದ್ದರು.
ನಿನ್ನೆಯಷ್ಟೇ ಮುಕ್ತಾಯ ಕಂಡ ಭಾರತ ವಿರುದ್ಧದ 3 ಏಕದಿನ ಪಂದ್ಯವನ್ನು ಆಡಿದ ಅವರು ಈ ಸರಣಿಯಲ್ಲಿ 48 ರನ್ ಗಳಿಸಿದ್ದರು. 31 ವರ್ಷದ ಸ್ಟೋಕ್ಸ್ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕನಾಗಿ ಇತ್ತೀಚೆಗೆ ಆಯ್ಕೆಯಾಗಿದ್ದಾರೆ.
ನಾಳೆ ದಕ್ಷಿಣ ಆಫ್ರಿಕಾ ವಿರುದ್ಧ ಅವರು ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಲಿದ್ದಾರೆ.