Advertisement

ಬೆಳ್ತಂಗಡಿ ನಗರಕ್ಕೆ  90 ಲ.ರೂ.ಗಳ ಟ್ರಾನ್ಸ್‌ಫಾರ್ಮರ್‌

04:45 PM Mar 30, 2017 | Team Udayavani |

ಬೆಳ್ತಂಗಡಿ: ನಗರ ಪಂಚಾಯತ್‌ ವ್ಯಾಪ್ತಿಯಲ್ಲಿ 90 ಲಕ್ಷ ರೂ. ವೆಚ್ಚದಲ್ಲಿ 13 ಟ್ರಾನ್ಸ್‌ಫಾರ್ಮರ್‌ಗಳನ್ನು ಅಳವಡಿಸಲಾಗುವುದು ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಮಂಗಳವಾರ ನಗರ ಪಂಚಾಯತ್‌ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಉಪಾಧ್ಯಕ್ಷ ಡಿ.ಜಗದೀಶ್‌  ಅವರು ನಗರದಲ್ಲಿ ಲೋ ವೋಲ್ಟೆàಜ್‌ ಸಮಸ್ಯೆ ಕುರಿತು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮೆಸ್ಕಾಂ ಜೆಇ ಅವರು, ಹೊಸದಾಗಿ 
ಟ್ರಾನ್ಸ್‌ಫಾರ್ಮರ್‌ಗಳನ್ನು ಅಳವಡಿಸುವುದು ಮಾತ್ರ ವಲ್ಲದೆ 35 ಕಡೆಗಳಲ್ಲಿ ಟಿಸಿಗಳ ಬದಲಾವಣೆ ಕೂಡ ನಡೆಯಲಿದೆ. ಸ್ಥಳ ಪರಿಶೀಲನೆ ನಡೆಸಿದ್ದು ಮುಂದಿನ ತಿಂಗಳು ಕಾಮಗಾರಿ ಪ್ರಾರಂಭವಾಗಲಿದೆ ಎಂದು ತಿಳಿಸಿದರು.

ಬಟ್ಟೆ ಬ್ಯಾನರ್‌ಗೆ ಮಾತ್ರ ಅವಕಾಶ
ನಗರದಲ್ಲಿ ಪ್ಲಾಸ್ಟಿಕ್‌ ಬ್ಯಾನರ್‌ ಹಾಕಲು ಅವಕಾಶ ಇಲ್ಲ. ಫ್ಲೆಕ್ಸ್‌ಗಳಿಗೆ ಕಡ್ಡಾಯ ನಿಷೇಧ ಹಾಕಲಾಗಿದೆ. ಬಟ್ಟೆಯ ಬ್ಯಾನರುಗಳನ್ನು ಮಾತ್ರ ಹಾಕಬಹುದು ಎಂದು ಅಧ್ಯಕ್ಷ ಮುಗುಳಿ ನಾರಾಯಣ ರಾವ್‌ ಹೇಳಿದರು. ಪಲ್ಸ್‌ ಪೋಲಿಯೋ ಸೇರಿದಂತೆ ಯಾವುದೇ ಕಾರ್ಯಕ್ರಮದ  ಪ್ಲಾಸ್ಟಿಕ್‌ ಬ್ಯಾನರ್‌ಗಳಿಗೆ ನ.ಪಂ. ವತಿಯಿಂದ ಅವಕಾಶ ನೀಡಲಾಗದು ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿಗಳಿಗೆ ಪತ್ರ
 ಬೆಳ್ತಂಗಡಿ ನಗರದಲ್ಲಿ ಮಕ್ಕಳಿಗೆ ವಾಸ್ತವ್ಯ ಪ್ರಮಾಣಪತ್ರ ನೀಡುವ ವ್ಯವಸ್ಥೆ ಇಲ್ಲ. ವೇಣೂರಿಗೆ ಹೋಗಿ ಪ್ರಮಾಣ ಪತ್ರ ಮಾಡಿಸಬೇಕಾಗಿದೆ. ಪ್ರಮಾಣಪತ್ರಕ್ಕೆ 250 ರೂ. ವೆಚ್ಚವಾಗುತ್ತದೆ ಎಂದು ಉಪಾಧ್ಯಕ್ಷ ಜಗದೀಶ್‌ ಹೇಳಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲು ನಿರ್ಣಯಿಸಲಾಯಿತು. 5 ವರ್ಷದೊಳಗಿನ ಮಕ್ಕಳಿಗೆ ವಾಸ್ತವ್ಯ ಪ್ರಮಾಣ ಪತ್ರ ಕಡ್ಡಾಯ ಮಾಡಬಾರದೆಂದು ವಿನಂತಿಸಲಾಯಿತು.

ಹಣ ವಸೂಲಿ ಆರೋಪ
ಸರಕಾರಿ ಸಮುದಾಯ ಆಸ್ಪತ್ರೆಯಲ್ಲಿ  ಇರುವ ಸ್ಕ್ಯಾನಿಂಗ್‌ ವ್ಯವಸ್ಥೆಯ ಪ್ರಯೋಜನ ಬಡವರಿಗೆ ದೊರೆಯುತ್ತಿಲ್ಲ. ಕೆಲವು ಸೇವೆಗಳಿಗೆ ಹಣ ಪಡೆಯಲಾಗುತ್ತಿದೆ ಎಂದು ಸದಸ್ಯೆ ಕವಿತಾ ಆಪಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವೈದ್ಯಾಧಿಕಾರಿ ಡಾ| ಆದಂ ಅವರು “ಆಸ್ಪತ್ರೆಗೆ ಕೆಲವು ವಸ್ತುಗಳ ಸರಬರಾಜು ಇರುವುದಿಲ್ಲ. ಆ ಸಂದರ್ಭ ಅದನ್ನು ಖರೀದಿ ಮಾಡಿದ ಹಣವನ್ನು ಪಡೆಯಲಾಗುತ್ತದೆ. ಆದರೆ ಬಿಪಿಎಲ್‌ ಕುಟುಂಬಗಳಿಂದ  ಹಣ ಪಡೆಯುತ್ತಿಲ್ಲ. ಎಪಿಎಲ್‌ನವರಿಗೆ ಸರಕಾರ ನಿಗದಿಪಡಿಸಿದ ರಿಯಾಯಿತಿ ದರ ಪಡೆಯಲಾಗುತ್ತದೆ’ ಎಂದರು. ಆಸ್ಪತ್ರೆಯಲ್ಲಿ ನಿಗದಿಪಡಿಸಿದ ದರದ ಪಟ್ಟಿಯನ್ನು ಅಳವಡಿಸಬೇಕು ಎಂದು ಸಲಹೆ ನೀಡಲಾಯಿತು. ರಸ್ತೆ ಬದಿ ಸರಕಾರಿ ಆಸ್ಪತ್ರೆಯ ಫಲಕ ಅಳವಡಿಸಲು ಸೂಚಿಸಲಾಯಿತು.

Advertisement

3.5 ಕೋ.ರೂ. ಮಂಜೂರು
ನಗರೋತ್ಥಾನದಲ್ಲಿ 3.5 ಕೋ.ರೂ. ಮಂಜೂರಾಗಿದ್ದು ಸರಕಾರಿ ಆಸ್ಪತ್ರೆ ಸಂಪರ್ಕಿಸುವ ರಸ್ತೆ, ಸಂತೆಮಾರುಕಟ್ಟೆ ಮೊದಲಾದ ಕಾಮಗಾರಿಗಳಿಗೆ ಈ ಅನುದಾನ ವಿನಿಯೋಗಿಸಲಾಗುವುದು ಎಂದು ಅಧ್ಯಕ್ಷ ಮುಗುಳಿ ನಾರಾಯಣ ರಾವ್‌ ಹೇಳಿದರು. 

ಕೆಲ್ಲಗುತ್ತು ಪರಿಸರದಲ್ಲಿ ಕುಡಿಯುವ ನೀರಿಗೆ ಅಡಚಣೆಯಾದ ಕಾರಣ ಕೊಳವೆ ಬಾವಿ ಕೊರೆಸಲು ನಿರ್ಣಯಿಸಲಾಯಿತು. 
ಸ್ಥಾಯೀ ಸಮಿತಿ ಅಧ್ಯಕ್ಷ ಸಂತೋಷ್‌ಕುಮಾರ್‌ ಜೈನ್‌, ಪ್ರಭಾರ ಮುಖ್ಯಾಧಿಕಾರಿ ವೆಂಕಟರಮಣ ಶರ್ಮ, ಎಂಜಿನಿಯರ್‌ ಮಹಾವೀರ ಆರಿಗ, ತಾಲೂಕು ಆರೋಗ್ಯಾಧಿಕಾರಿ ಡಾ| ಕಲಾಮಧು  ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next