Advertisement

ಬೆಳ್ತಂಗಡಿ: ಬೀದಿ ವ್ಯಾಪಾರಕ್ಕೆ ಪ್ರತ್ಯೇಕ ವಲಯ

01:34 AM Jul 04, 2020 | Sriram |

ವಿಶೇಷ ವರದಿ-ಬೆಳ್ತಂಗಡಿ: ಪಟ್ಟಣ ಪಂಚಾಯತ್‌ ವ್ಯಾಪ್ತಿಯಡಿ ಬರುವ ಬೀದಿಬದಿ ವ್ಯಾಪಾರಿಗಳಿಗೆ ಅನುಕೂಲ ವಾಗುವಂತೆ ನಗರ ವ್ಯಾಪ್ತಿಯಲ್ಲಿ ಮಾರಾಟ ಕೇಂದ್ರಿತ ಮೂರು ವಲಯಗಳನ್ನು ಗುರುತಿಸಲಾಗಿದೆ. ಆ ಮೂಲಕ ದಶಕಗಳಿಂದ ಕಗ್ಗಂಟಾಗಿ ಉಳಿದಿದ್ದ ಬೀದಿಬದಿ ವ್ಯಾಪಾರಸ್ಥರ ಸಮಸ್ಯೆಗೆ ಪಂ.ಪಂ. ಮುಕ್ತಿ ನೀಡಿದೆ.

Advertisement

ತನ್ನ ವ್ಯಾಪ್ತಿಗೊಳಪಟ್ಟಂತೆ ನೆಲ ಬಾಡಿಗೆ ನೀಡುತ್ತಿರುವ ಹಾಗೂ ಅನಧಿಕೃತವಾಗಿರುವ 51 ಬೀದಿಬದಿ ಗೂಡಂಗಡಿಗಳನ್ನು ಪ.ಪಂ. ಗುರುತಿಸಿತ್ತು. ಕಳೆದ ಎಪ್ರಿಲ್‌- ಮೇ ತಿಂಗಳ ಲಾಕ್‌ಡೌನ್‌ ಅವಧಿಯಲ್ಲಿ ಹಣ್ಣು ಹಂಪಲು, ತರಕಾರಿ ಮಾರಾಟ ಅಂಗಡಿಗಳ ಹೊರತಾಗಿ ಇತರ ಎಲ್ಲ ಗೂಡಂಗಡಿಗಳನ್ನು ತೆರವುಗೊಳಿಸಿರುವ ವಿಚಾರವಾಗಿ ಮಾಜಿ ಶಾಸಕ ವಸಂತ ಬಂಗೇರ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿತ್ತು.

ಮೂರು ಝೋನ್‌ ಗುರುತು
ಈ ನಿಟ್ಟಿನಲ್ಲಿ ಸೂಕ್ತ ವ್ಯವಸ್ಥೆ ಬೇಡಿಕೆ ಬಂದ ಸಲುವಾಗಿ ಪ.ಪಂ. ವ್ಯಾಪ್ತಿಗೊಳಪಟ್ಟಂತೆ ವಲಯ ನಿರ್ಮಾಣ ಮಾಡಲಾಗಿದೆ. ಈ ಮಧ್ಯೆ ಚರ್ಚ್‌ ಅಡ್ಡ ರಸ್ತೆಯಿಂದ ಎಸ್‌ಸಿಡಿಸಿಸಿ ಬ್ಯಾಂಕ್‌ವರೆಗಿನ ಮುಖ್ಯರಸ್ತೆ ಅಂಚಿನಲ್ಲಿ ಅಂಗಡಿ ತೆರೆಯಲು ಅವಕಾಶ ಇರುವುದರಿಲ್ಲ. ಪರಿಣಾಮ ಬದಲಿ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಮೂರು ಝೋನ್‌ಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಅಂಬೇಡ್ಕರ್‌ ಭವನ ರಸ್ತೆ, ಗುರುನಾರಾಯಣ ವಾಣಿಜ್ಯ ಸಂಕೀರ್ಣ ಹಿಂಭಾಗ ಹಾಗೂ ಬಾರತ್‌ ಟಾಕೀಸ್‌ ಸಂತೆಕಟ್ಟೆ ಸಮೀಪ ಪ್ರತಿ ವ್ಯಾಪಾರಸ್ಥರಿಗೆ 6×6 ಅಳತೆಯ ಸ್ಥಳ ನೀಡಲಾಗಿದೆ. ಉಳಿದಂತೆ ಈಗಾಗಲೇ ಸ್ಥಳ ಬಾಡಿಗೆಯಲ್ಲಿರುವ 6 ಗೂಡಂಗಡಿ ಸೇರಿ ಪ್ರಸಕ್ತ ಒಟ್ಟು 33 ಅಂಗಡಿಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ತರಕಾರಿ, ಜ್ಯೂಸ್‌, ತಿಂಡಿ ತಿನಸು, ಫಾಸ್ಟ್‌ಫುಡ್‌, ತಳ್ಳುಗಾಡಿಗಳು ಸೇರಿವೆ.

ಮುಂಜಾನೆಯಿಂದ ರಾತ್ರಿವರೆಗೆ ಅವಕಾಶ
ಮಳೆಗಾಲವಾದ್ದರಿಂದ ಸದ್ಯ ಶೀಟ್‌ ಅಳವಡಿಕೆಗೆ ಅವಕಾಶ ನೀಡಲಾಗಿದ್ದು, ಬೆಳಗ್ಗಿನಿಂದ ರಾತ್ರಿ ನಿಗದಿತ ಸಮಯದವರೆಗಷ್ಟೆ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಇದಕ್ಕಾಗಿ ಮೊಬೈಲ್‌ ವಾಹನಗಳು ಹಾಗೂ ತಳ್ಳುಗಾಡಿಗಳನ್ನು ಬಳಸುವಂತೆಯೂ ಪ.ಪಂ. ವತಿಯಿಂದ ವ್ಯಾಪಾರಿಗಳಿಗೆ ಸೂಚನೆ ನೀಡಲಾಗಿದೆ. ಕೆಲ ಸೀಸನ್‌ ಅವಧಿಯಲ್ಲಿ ಮಾರಾಟ ಮಾಡುವ ಅಂಗಡಿಗಳು ಒಳ ರಸ್ತೆಗಳಲ್ಲಷ್ಟೆ ಮಾರಾಟಕ್ಕೆ ಅವಕಾಶವಿರಲಿದೆ.

10 ಸಾವಿರ ರೂ. ಸಾಲ ಸೌಲಭ್ಯ
ಸರಕಾರದ ಆತ್ಮನಿರ್ಭರ ಯೋಜನೆಯಡಿ ಪ.ಪಂ. ವತಿಯಿಂದ ಬೀದಿಬದಿ ವ್ಯಾಪಾರಿಗಳಿಗೆ ವ್ಯಾಪಾರ ಆರಂಭಿಸಲು ಬ್ಯಾಂಕ್‌ ಮೂಲಕ 10 ಸಾವಿರ ರೂಪಾಯಿ ಸಾಲ ಒದಗಿಸಲು ಚಿಂತನೆ ನಡೆಸಿದೆ. ಇದನ್ನು 950 ರೂಪಾಯಿಯ ಸಮಾನ ಮಾಸಿಕ ಕಂತುಗಳ ರೂಪದಲ್ಲಿ 12 ತಿಂಗಳಲ್ಲಿ ಬಡ್ಡಿ ಸಹಿತ ಮರುಪಾವತಿಸಬೇಕಾಗಿದೆ. ಒಟ್ಟು ಮೊತ್ತದಲ್ಲಿ 150 ರೂ. ಮನ್ನಾ ಆಗಲಿದೆ. ಜತೆಗೆ ದಿನವಹಿ 50 ಡಿಜಿಟಲ್‌ ವ್ಯವಹಾರ ಮಾಡಿದರೆ ಹೆಚ್ಚುವರಿ ಮಾಸಿಕ ರಿಯಾಯಿತಿಯೂ ಇದೆ. ಪ್ರಸಕ್ತ ಪ.ಪಂ. ಗುರುತಿಸಿದ ವ್ಯಾಪಾರಿಗಳಿಗಷ್ಟೆ ಅನ್ವಯವಾಗಲಿದೆ.

Advertisement

ಸ್ಥಳ ಗುರುತು
ಪಟ್ಟಣ ಪಂಚಾಯತ್‌ ವ್ಯಾಪ್ತಿ ಯಲ್ಲಿ ಅನಧಿಕೃತ ಗೂಡಂಗಡಿಗಳಿಗೆ ಕಡಿವಾಣ ಹಾಕುವ ಸಲುವಾಗಿ ಈ ಕ್ರಮ ವಹಿಸಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ನಗರ ಕೇಂದ್ರಿತ ಪ್ರದೇಶಗಳಂತೆ ಝೋನ್‌ ನಿಗದಿಪಡಿಸಿ ಸ್ಥಳ ಗುರುತಿಸಲಾಗಿದೆ.
– ಸುಧಾಕರ್‌ ಎಂ.ಎಚ್‌.
ಮುಖ್ಯಾಧಿಕಾರಿ, ಪಟ್ಟಣ ಪಂಚಾಯತ್‌

Advertisement

Udayavani is now on Telegram. Click here to join our channel and stay updated with the latest news.

Next