Advertisement
ಬೆಳ್ತಂಗಡಿ ಗ್ರಾಮದ ಅಂಚಿನಲ್ಲಿರುವ ಮಲವಂತಿಗೆ ನಿವಾಸಿಗಳಿಗೆ ಕಾಡಾನೆ, ಕಾಡುಪ್ರಾಣಿಗಳು ಕೃಷಿ ನಾಶದ ಭಯವೊಂದೆಡೆಯಾದರೆ, 2019 ನೆರೆಬಳಿಕ ಭೂ ಕುಸಿತದ ಬಳಿಕ ಆತಂಕದಲ್ಲೇ ದಿನ ದೂಡುವಂತಾಗಿದೆ. ಈ ನಡುವೆ ರಸ್ತೆ, ಕಾಲುಸಂಕದ ಕೊರತೆ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸುವಂತೆ ಮಾಡಿದೆ. ದಿಡುಪೆ ಐದು ಸೆಂಟ್ಸ್ ಕಾಲನಿ ಮಾರ್ಗವಾಗಿ ದರ್ಕಾಸು ಕೆಮ್ಮಟೆಗೆ ಸಾಗುವಲ್ಲಿ ಹಿಂದೆ ನಂದಿಕಾಡು ಹೊಳೆಗೆ ಅಡ್ಡಲಾಗಿ ಕಿರು ಸೇತುವೆಯೊಂದು ಮಂಡಲ ಪಂಚಾಯತ್ ಅವಧಿಯಲ್ಲಿ ನಿರ್ಮಾಣವಾಗಿತ್ತು. ಆದರೆ 2019ರ ನೆರೆ ಅದನ್ನು ಕೊಚ್ಚಿ ತನ್ನ ಪಾಲಾಗಿಸಿತ್ತು. ಬಳಿಕ ದಿನನಿತ್ಯದ ಓಡಾಟಕ್ಕೆ ಅಡಿಕೆ ಪಾಲದ ಕಾಲು ಸಂಕವನ್ನೇ ಅವಲಂಬಿಸಿದ್ದಾರೆ.
ಈ ಹಿಂದೆ ಇದ್ದ ಕಿರು ಕಾಲುಸಂಕ ಬಳಿ ಮತ್ತೆ ಕಾಲು ಸಂಕ ನಿರ್ಮಿಸಿದರೆ ಎರಡೆರಡು ಬೇಕಾಗುತ್ತದೆ. ಪೆರ್ನಡ್ಕ ಹೊಳೆಗೆ ದರ್ಕಾಸು ಬಳಿ ಕಾಲುಸಂಕ ನಿರ್ಮಿಸಿದರೆ ಕೆಮ್ಮಟೆ, ಪೆರ್ನಡ್ಕ, ಪರಂಬೇರು, ಆಯರೆನಂದಿಕಾಡು ಸುತ್ತಮುತ್ತ ಅನುಕೂಲವಾಗಲಿದೆ ಎಂಬುದು ಊರವರ ಅಭಿಪ್ರಾಯ. ಅವರು ಪಂಚಾಯತ್‌ಗೆ ಈ ನಿಟ್ಟಿನಲ್ಲಿ ಮನವಿ ಮಾಡಿದ್ದಾರೆ. ದಿನ ನಿತ್ಯದ ಓಡಾಟಕ್ಕೆ ಆತಂಕ
ಈ ಪ್ರದೇಶದಲ್ಲಿ 15ರಿಂದ 20 ಮನೆಗಳಿವೆ. ಇಲ್ಲಿನ 10ಕ್ಕೂ ಅಧಿಕ ಅಂಗನವಾಡಿ ಮಕ್ಕಳು, ಅಂಗವಿಕಲರು, ವೃದ್ಧರು ಇದೇ ಕಾಲು ಸಂಕ ಬಳಸಬೇಕಾಗಿದೆ. ಸುಮಾರು 20 ಅಡಿ ಉದ್ದ, 15 ರಿಂದ 20 ಅಡಿ ಆಳವಿರುವ ಈ ಕಾಲು ಸಂಕದಲ್ಲೇ ಆಸ್ಪತ್ರೆಗೆ, ಹೈನುಗಾರಿಕೆ, ಅಗತ್ಯ ಕಾರ್ಯಗಳಿಗೆ ದಿಡುಪೆಗೆ ಓಡಾಡಬೇಕು. ಕಾಲು ಸಂಕದವರೆಗೆ ವಾಹನ ಸಾಗಲು ಕಿರಿದಾದ ರಸ್ತೆಯಿದೆ. ಬಳಿಕ ವೃದ್ಧರನ್ನು ಆಸ್ಪತ್ರೆಗೆ ಸಾಗಿಸಲೂ ಹರಸಾಹಸ ಪಡಬೇಕಿದೆ. ಮಳೆಗಾಲದಲ್ಲಿ ನೆರೆ ಅಧಿಕವಾದರೆ ಕಾಲುಸಂಕ ಮುಳುಗುತ್ತದೆ. ಅಂಗನವಾಡಿ ಮಕ್ಕಳು ಭಯದಲ್ಲೇ ಸಾಗಿ ಒಂದುವರೆ ಕಿ.ಮೀ.ದೂರದ ಅಂಗನವಾಡಿ ಸೇರುತ್ತಿದ್ದಾರೆ.
ಗರ್ಭಿಣಿಯರು, ವೃದ್ಧರು, ಸಣ್ಣಪುಟ್ಟ ಮಕ್ಕಳು ಪಾಲದಲ್ಲಿ ಓಡಾಡುವುದು ಕಷ್ಟ. ಕೆಳಗೆ ಬದಿ ಜಾರಿಬಿದ್ದರೆ ಬಂಡೆಕಲ್ಲುಗಳ ರಾಶಿಯಿದೆ. ಮಲವಂತಿಗೆ ಗ್ರಾಪಂಗೆ ಮನವಿ ನೀಡಿದ್ದೇವೆ. ಸಂಘ ಸಂಸ್ಥೆಗಳಾದರೂ ಕಾಲು ಸಂಕ ನಿರ್ಮಿಸಿ ಕೊಟ್ಟರೆ ಸಹಕಾರವಾಗಲಿದೆ.
– ರಮೇಶ್ ದರ್ಕಾಸು, ಸ್ಥಳೀಯ ನಿವಾಸಿ
Related Articles
ಪಾಲದ ಸಂಕ ನಿರ್ಮಿಸಿಕೊಡಲಾಗಿದೆ.
– ಪ್ರಕಾಶ್ ಕುಮಾರ್‌ಜೈನ್ ಅಧ್ಯಕ್ಷರು, ಮಲವಂತಿಗೆ ಗ್ರಾಪಂ
Advertisement
ಮಲವಂತಿಗೆ ಗ್ರಾಮ ಸಹಿತ ಬೆಳ್ತಂಗಡಿ ತಾಲೂಕಿನಲ್ಲಿ 70ಕ್ಕೂ ಅಧಿಕ ಸಣ್ಣಪುಟ್ಟ ಕಾಲುಸಂಕಗಳಿವೆ. ಕೆಲವು ಖಾಸಗಿ ಸ್ಥಳದಲ್ಲಿವೆ. ಅಗತ್ಯ ಅನುದಾನದಲ್ಲಿ ಸಾಧ್ಯವಾದಷ್ಟು ಅನುಕೂಲ ಕಲ್ಪಿಸಲು ಕ್ರಮ ವಹಿಸಲಾಗುವುದು.– ಭವಾನಿ ಶಂಕರ್, ತಾ.ಪಂ. ಇಒ ಬೆಳ್ತಂಗಡಿ – ಚೈತ್ರೇಶ್ ಇಳಂತಿಲ