Advertisement

Belthangady: ಅಟ್ರಿಂಜೆ ಕೊರಗ ಕಾಲನಿಗೆ ಕೊನೆಗೂ ಸೇತುವೆ, ರಸ್ತೆ, ಮನೆ!

07:51 AM Sep 06, 2024 | Team Udayavani |

ಬೆಳ್ತಂಗಡಿ: ಸುಲ್ಕೇರಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ನಾವರ ಗ್ರಾಮದ ಅಟ್ರಿಂಜೆಯ ಕೊರಗ ಕಾಲನಿಗೆ ಕೊನೆಗೂ ರಸ್ತೆ ಹಾಗೂ ಸೇತುವೆ ಮಂಜೂರಾಗಿದ್ದು ಇಲ್ಲಿನ ಕುಟುಂಬಗಳ ಬಹು ವರ್ಷದ ಬೇಡಿಕೆಯೊಂದು ಈಡೇರುವ ಕಾಲ ಬಂದಿದೆ.

Advertisement

ಅಟ್ರಿಂಜೆಯ ಕೊರಗ ಕುಟುಂಬಗಳ ಸಂಕಷ್ಟದ ಬದುಕು, ಡೇರೆ ಕಟ್ಟಿಕೊಂಡು ಬದುಕು ಸವೆಸುತ್ತಿದ್ದ ಇಲ್ಲಿನ ನಿವಾಸಿಗಳ ಬೇಡಿಕೆಯ ಕನಸನ್ನು 8 ವರ್ಷಗಳ ಹಿಂದೆ ಉದಯವಾಣಿ ಹೊರ ಜಗತ್ತಿಗೆ ಪರಿಚಯಿಸಿತ್ತು. ಇಲ್ಲಿನ ನಿವಾಸಿಗಳು ಮರದ ದಿಮ್ಮಿಯ ಆಶ್ರಯ ಪಡೆದು ಅಪಾಯಕಾರಿಯಾಗಿ ನದಿ ದಾಟುತ್ತಿದ್ದರು. ಇದೀಗ ಕೊರಗ ಸಮುದಾಯದ ಕಾಲೊನಿಗಳಿಗೆ ಮೂಲಸೌಕರ್ಯ ಒದಗಿಸುವ ಪ್ರಧಾನ ಮಂತ್ರಿ ಜನ್ಮನ್‌ ಯೋಜನೆಯಡಿ ಅಟ್ರಿಂಜೆಗೆ ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕೆ 2.85 ಕೋ.ರೂ. ಹಾಗೂ ಸೇತುವೆ ನಿರ್ಮಾಣಕ್ಕೆ 2.67 ಕೋ.ರೂ. ಅನುದಾನ ಮಂಜೂರಾಗಿದೆ.

ನಿವಾಸಿಗಳಿಗೆ ಮನೆ ಮಂಜೂರು
ಈ ನಡುವೆ, ಕಳೆದ ಹತ್ತು ವರ್ಷಗಳಿಂದ ಡೇರೆ ಹಾಕಿ ಬದುಕುತ್ತಿದ್ದ ಐದು ಕುಟುಂಬಗಳಿಗೆ ರಾಜೀವ ಗಾಂಧಿ ವಸತಿ ಯೋಜನೆಯಡಿ ಮನೆಗಳೂ ಮಂಜೂರಾಗಿದ್ದು ಕೆಲವೇ ದಿನಗಳಲ್ಲಿ ಮನೆಗಳ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ ಎಂದು ತಾಲೂಕು ಸಮಾಜ ಕಲ್ಯಾಣಧಿಕಾರಿ ಹೇಮಚಂದ್ರ ಮಾಹಿತಿ ನೀಡಿದ್ದಾರೆ. ಇವರಿಗೆ ಆಧಾರ್‌ ಸೇರಿದಂತೆ ಯಾವುದೇ ದಾಖಲೆ ಇರಲಿಲ್ಲ. ಇದೀಗ ಇಲಾಖೆಗಳು ಎಲ್ಲ ದಾಖಲೆಗೆ ವ್ಯವಸ್ಥೆ ಮಾಡಿವೆ.

ಹೇಗಿತ್ತು ಕೊರಗ ಕಾಲನಿ ಪರಿಸ್ಥಿತಿ?
ಕೊರಗ ಕುಟುಂಬಗಳ ಸ್ಥಿತಿ ಬಗ್ಗೆ ವರದಿಗಳು ಪ್ರಕಟವಾದ ಬೆನ್ನಿಗೇ ಜಿಲ್ಲಾಧಿಕಾರಿಗಳೇ ಭೇಟಿ ನೀಡಿದ್ದರು. ಅವರ ಇತರ ಮೂಲ ಬೇಡಿಕೆಗಳು ಈಡೇರಿಕೆಯಾಗಿದ್ದರೂ ಸೇತುವೆ ಹಾಗೂ ರಸ್ತೆಯ ಕನಸು ಮಾತ್ರ ಈಡೇರಿರಲಿಲ್ಲ.

ಇಲ್ಲಿನ ಐದು ಕುಟುಂಬಗಳಿಗೆ ಸುಲ್ಕೇರಿ ಸಮೀಪ ಸರಕಾರಿ ನಿವೇಶನ ಒದಗಿಸಲು ಮುಂದಾದರೂ  ಅವರು ಈ ಸ್ಥಳ ಬಿಟ್ಟು ಬರಲು ಒಪ್ಪಿರಲಿಲ್ಲ.

Advertisement

ನದಿಗೆ ಅಡ್ಡಲಾಗಿ ಮರವನ್ನು ಕಡಿದು ಹಾಕಿ ನಿರ್ಮಿಸಲಾಗಿದ್ದ ಸೇತುವೆಯ ಮೂಲಕವೇ ಈ ಕಾಲೊನಿಗೆ ಹೋಗಬೇಕಿತ್ತು. ಇಲ್ಲಿನ ಮಕ್ಕಳಿಗೆ ಮಳೆಗಾಲದಲ್ಲಿ ಶಾಲೆಯೇ ಇರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next