ಬೆಳ್ತಂಗಡಿ : ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗ ಪಡೆಯುವುದೇ ಸವಾಲಿನ ಕೆಲಸವಾಗಿದ್ದು, ವಿದ್ಯಾರ್ಥಿಗಳು ಶಿಕ್ಷಣದ ಬಳಿಕ ಉದ್ಯೋಗ ಸಿಗುತ್ತಿಲ್ಲ ಎಂದು ಕೊರಗದೆ ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಬೇಕಿದೆ. ಉದ್ಯೋಗ ಪಡೆಯು ವಲ್ಲಿ ಪರಿಶ್ರಮ ಅತಿ ಅಗತ್ಯ ಎಂದು ಕೇಂದ್ರ ಕಾರ್ಮಿಕ ಮಂಡಳಿಯ ಆಯುಕ್ತ ಶೇಖರ್ ಅವರು ಹೇಳಿದರು.
ಅವರು ಶುಕ್ರವಾರ ಇಲ್ಲಿನ ಅಂಬೇಡ್ಕರ್‌ಭವನದಲ್ಲಿ ಕಾರ್ಮಿಕ ಕಲ್ಯಾಣ ಮಂಡಳಿ ಬೆಂಗಳೂರು, ಸಂಗಾತಿ ಎಕೆಜಿಬಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರ ಸಂಘ ಹಾಗೂ ಬೆಳ್ತಂಗಡಿ ಪ.ಪಂ. ಸಹಯೋಗದಲ್ಲಿ ದೀನ ದಯಾಳ್ ಅಂತ್ಯೋದಯ ಅಭಿಯಾನ- ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಶಹರೀ ಅಮೃದ್ಧಿ ಉತ್ಸವದನ್ವಯ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಉದ್ಯೋಗ ಪಡೆಯುವ ನಿಟ್ಟಿನಲ್ಲಿ ಸಹಾಯವಾಗಲೆಂದು ಪ್ರಸ್ತುತ ಕಾರ್ಮಿಕ ಕಲ್ಯಾಣ ಮಂಡಳಿ ಯಿಂದ ತರಬೇತಿ ನೀಡಿ, ಉದ್ಯೋಗ ದೊರಕಿಸಿಕೊಡುವ ಪ್ರಯತ್ನ ಮಾಡಲಾ ಗುತ್ತಿದೆ ಎಂದರು.
ಅತಿಥಿಗಳಾಗಿ ಪ.ಪಂ. ಮುಖ್ಯಾಧಿಕಾರಿ ಡಿ. ಸುಧಾಕರ್, ಸಮುದಾಯ ಅಭಿವೃದ್ಧಿ ಅಧಿಕಾರಿ ವೆಂಕಟ್ರಮಣ ಶರ್ಮ, ಮಂಡಳಿಯ ಸಹಾಯಕ ಕಮೀನರ್ ಬಸವರಾಜು, ಸಂದೀಪ್, ಡಾ| ಬಸವಣ್ಣ, ಡಾ| ಸುಮತಿ, ಡಾ| ಅನಿಲ್, ಕಿರಣ್ ನರೇಂದ್ರ ಮೊದಲಾದವರಿದ್ದರು. ನ್ಯಾಯವಾದಿ ಶಿವಕುಮಾರ್ ಸ್ವಾಗತಿಸಿ, ಶೇಖರ್ ಲಾೖಲ ವಂದಿಸಿದರು.
ಅನುಕೂಲ
ಸಂಗಾತಿ ಎಕೆಜಿಬಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಹರಿದಾಸ್ ಎಸ್.ಎಂ. ಮಾತನಾಡಿ, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಘವು ಉದ್ಯೋಗ ಮೇಳಕ್ಕೆ ಸಹಯೋಗ ನೀಡಿದೆ ಎಂದರು.