Advertisement

ಬೆಳ್ತಂಗಡಿ; ನಾಡ ಕಚೇರಿ ತಲುಪಲು 3 ಬಸ್‌ ಬದಲಿಸಬೇಕು!

02:56 PM Jun 10, 2024 | Team Udayavani |

ಉಪ್ಪಿನಂಗಡಿ: ಆಡಳಿತ ವ್ಯವಸ್ಥೆ ಎಷ್ಟರ ಮಟ್ಟಿಗೆ ಜನಹಿತವನ್ನು ಕಡೆಗಣಿಸಿದೆ ಎನ್ನುವುದಕ್ಕೆ ಇದೊಂದು ಉದಾಹರಣೆ. ಬೆಳ್ತಂಗಡಿ ತಾಲೂ ಕಿನ ಸುಮಾರು 10 ಗ್ರಾಮಗಳ ನಾಗರಿಕರು ನಾಡ ಕಚೇರಿಗೆ ಹೋಗಬೇಕು ಎಂದರೆ ಮೂರು ಬಸ್‌ ಬದಲಿಸಿ 40 ಕಿ.ಮೀ. ಪ್ರಯಾಣಿಸಬೇಕಾದ ಅನಿ ವಾರ್ಯ ಇದೆ.

Advertisement

81 ಗ್ರಾಮಗಳಿರುವ ಬೆಳ್ತಂಗಡಿ ತಾಲೂಕಿನಲ್ಲಿ ಮೂರು ಹೋಬಳಿಗಳಿವೆ. ವೇಣೂರು ನಾಡ ಕಚೇರಿ ವ್ಯಾಪ್ತಿಗೆ 29, ಬೆಳ್ತಂಗಡಿ ನಾಡಕ ಚೇರಿ ವ್ಯಾಪ್ತಿಗೆ 25 ಮತ್ತು ಕೊಕ್ಕಡ ನಾಡ ಕಚೇರಿ ವ್ಯಾಪ್ತಿಗೆ 27 ಗ್ರಾಮಗಳು ಬರುತ್ತವೆ. ಇದರಲ್ಲಿ ಕೊಕ್ಕಡ ನಾಡ ಕಚೇರಿಯ ಗ್ರಾಮ ವರ್ಗೀಕರಣ ಎಷ್ಟು ಅವೈಜ್ಞಾನಿಕವಾಗಿದೆ ಎಂದರೆ ನಾಡ ಕಚೇರಿ ತಲುಪಲು ತಾಲೂಕಿನ ಒಂದು ತುದಿಯವರು ಇನ್ನೊಂದು ತುದಿಗೆ ಹೋಗಬೇಕು. ಅಂದರೆ, ತೆಕ್ಕಾರು ಬಾರ್ಯ, ಇಳಂತಿಲ, ಮೊಗ್ರು, ಕರಾಯ, ತಣ್ಣೀರುಪಂತ,
ಕಣಿಯೂರು, ಪದ್ಮುಂಜ ಮೊದಲಾದ 10 ಗ್ರಾಮಗಳ ಜನರಿಗೆ ನಾಡ ಕಚೇರಿಗೆ ಹೋಗುವುದು ಹರ ಸಾಹಸವೇ ಆಗಿದೆ.

ಇತ್ತೀಚಿನ ದಿನಗಳಲ್ಲಿ ಪಹಣಿ-ಆಧಾರ್‌ ಲಿಂಕ್‌, ದಾಖಲೆ ಪತ್ರಗಳಿಗಾಗಿ ಆಗಾಗ ನಾಡ ಕಚೇರಿಗೆ ಅಲೆಯುವುದು ಮಾಮೂಲಾಗಿದೆ.
ಅದರಲ್ಲೂ ನಾಡ ಕಚೇರಿಯಲ್ಲಿ ಸರ್ವರ್‌ ಸಮಸ್ಯೆ, ಸಿಬಂದಿ ಕೊರತೆ ಮತ್ತಿತರ ಕಾರಣಗಳಿಗಾಗಿ ಒಂದೇ ಭೇಟಿಯಲ್ಲಿ ಕೆಲಸ ಮುಗಿಯುವುದಿಲ್ಲ. ಇಂಥ ಹೊತ್ತಿನಲ್ಲಿ ಸುಮಾರು 40 ಕಿ.ಮೀ ದೂರದ ನಾಡ ಕಚೇರಿಗೆ ಹೋಗಿ ಕೆಲಸ ಮಾಡಿಸುವುದು ಹರಸಾಹಸವೇ ಸರಿ!

ಒಂದು ವೇಳೆ ಕಚೇರಿಗೆ ಹೋಗುವಾಗ ದಾಖಲೆಗಳನ್ನು ಸಮರ್ಪಕವಾಗಿ ಒಯ್ಯಲು ಅಸಾಧ್ಯವಾದರೆ ಮತ್ತೊಮ್ಮೆ ತೆರಳಲು ಭಾರೀ ಕಷ್ಟಪಡಬೇಕು. ನಾಡ ಕಚೇರಿಗೆ ಹೋಗಿ ಬರುವುದೆಂದರೆ ಅಂಡಮಾನ್‌ಗೆ ಹೋಗಿ ಬಂದ ಹಾಗಾಗುತ್ತದೆ ಎನ್ನುತ್ತಾರೆ ಇಲ್ಲಿನ ಜನ.

ಪ್ರತ್ಯೇಕ ನಾಡ ಕಚೇರಿ ಬೇಡಿಕೆ
ಕೊಕ್ಕಡ ಹೋಬಳಿ ಕೇಂದ್ರ ದೂರವಾಗುತ್ತದೆ. ಈ ಭಾಗಕ್ಕೆ ಅನುಕೂಲವಾಗುವಂತೆ ಕಲ್ಲೇರಿ ಭಾಗದಲ್ಲಿ ಹೊಸ ನಾಡ ಕಚೇರಿ ಇಲ್ಲವೇ ಅದಕ್ಕೆ ಸಮನಾದ ಆಡಳಿತ ವ್ಯವಸ್ಥೆಯನ್ನು ರೂಪಿಸುವಂತೆ ಆಗ್ರಹಿಸಿ ಕಳೆದ 25 ವರ್ಷಗಳಿಂದಲೂ ಬೇಡಿಕೆ ಸಲ್ಲಿಸಲಾಗುತ್ತಿದೆ. ಜನಪ್ರತಿನಿಧಿಗಳು ಚುನಾವಣೆಯ ಸಂದರ್ಭ ಬಂದಾಗ ಕಲ್ಲೇರಿ ಭಾಗದಲ್ಲಿ ನಾಡ ಕಚೇರಿ ಆಗೇ ಬಿಟ್ಟಿತು
ಎಂಬಷ್ಟು ಧೈರ್ಯದಿಂದ ಭರವಸೆ ಕೊಡುತ್ತಾರೆ. ಆ ಬಳಿಕ ಸುಮ್ಮನಾಗುತ್ತಾರೆ.

Advertisement

ನೇರ ಬಸ್‌ ಸೌಕರ್ಯವಿಲ್ಲ
ಈ 11 ಗ್ರಾಮಗಳಿಗೆ ಕೊಕ್ಕಡ 40 ಕಿ.ಮೀ. ದೂರ ಮಾತ್ರವಲ್ಲ, ನೇರ ಬಸ್‌ ಸೌಕರ್ಯವಿಲ್ಲ. ನೇರ ಅಂತಲ್ಲ, ಪರ್ಯಾಯ ಬಸ್‌ ಸಂಚಾರವೂ ಕಡಿಮೆ. ಕರಾಯ, ಇಳಂತಿಲ, ಪದ್ಮುಂಜ ಮೊದಲಾದ ಗ್ರಾಮಗಳ ಜನರು ಕೊಕ್ಕಡಕ್ಕೆ ಹೋಗಬೇಕು ಎಂದರೆ ಮೊದಲು ಉಪ್ಪಿನಂಗಡಿಗೆ ಹೋಗಿ, ಅಲ್ಲಿಂದ ನೆಲ್ಯಾಡಿ ತಲುಪಿ, ಅಲ್ಲಿಂದ ಬಸ್‌ ಅಥವಾ ಜೀಪು ಹಿಡಿದು ಕೊಕ್ಕಡಕ್ಕೆ ತಲುಪ ಬೇಕು! ಇದು ಸಾಕಷ್ಟು ಸಮಯವನ್ನೂ ತೆಗೆದುಕೊಳ್ಳುತ್ತದೆ.

10ಪ್ರತ್ಯೇಕ ನಾಡಕಚೇರಿ ಬೇಡಿಕೆಇಟ್ಟ ಗ್ರಾಮಗಳು
1. ತೆಕ್ಕಾರು
2. ಕರಾಯ
3. ಬಾರ್ಯ
4. ತಣ್ಣೀರುಪಂತ
5. ಇಳಂತಿಲ
6. ಮೊಗ್ರು
7. ಪದ್ಮುಂಜ
8. ಪುತ್ತಿಲ
9. ಕಣಿಯೂರು
10. ಮೂರುಗೋಳಿ

ಗ್ರಾಮ ಪಂಚಾಯತ್‌ ಗಳ ಮನವಿ ವ್ಯರ್ಥ
ಜಾತಿ, ಆದಾಯ, ಜನನ ಮರಣ ಸೇರಿದಂತೆ ಹಲವು ಪ್ರಮಾಣ ಪತ್ರಗಳ ತುರ್ತು ಸೇವೆಯ ಅಗತ್ಯ ಇರುವುದರಿಂದ, ಭೂಮಿ, ಕೃಷಿ ವ್ಯವ ಹಾರಗಳ ಅಗತ್ಯತೆಯನ್ನು ಆಧರಿಸಿ ಕಲ್ಲೇರಿ ಭಾಗದಲ್ಲಿ ನಾಡ ಕಚೇರಿ ತೆರೆಯಬೇಕು ಎಂದು ಎಲ್ಲ ಗ್ರಾಮಗಳ ಗ್ರಾಮಸಭೆಗಳಲ್ಲಿ ಚರ್ಚೆ ನಡೆದು ನಿರ್ಣಯಗಳನ್ನು ಕಂದಾಯ ಇಲಾಖೆಗೆ ಕಳುಹಿಸಿಕೊಡಲಾಗುತ್ತಿದೆ. ಇಲಾಖಾ ಅಧಿಕಾರಿಗಳು‌ ಸ್ಥಳ ಪರಿಶೀಲನೆ ನಡೆಸಿ ವರ್ಷಗಳೇ ಕಳೆದರೂ ಬೇಡಿಕೆ ಮಾತ್ರ ಈಡೇರಿಲ್ಲ ಎಂದು ತಣ್ಣೀರುಪಂತ ಗ್ರಾ.ಪಂ ಮಾಜಿ ಅಧ್ಯಕ್ಷ
ಜಯವಿಕ್ರಮ ಕಲ್ಲಾಪು ಹೇಳುತ್ತಾರೆ.

ಈ ಬೇಡಿಕೆ ಹಲವು ವರ್ಷಗಳ ಕೂಗು. ಕಂದಾಯ ಇಲಾಖೆ ದಾಖಲೆ ಅಗತ್ಯಕ್ಕೆ ದೂರದ ಕೊಕ್ಕಡದ ಬದಲು ಕಲ್ಲೇರಿ ಭಾಗದಲ್ಲಿ ತೆರೆದರೆ ಹತ್ತಕ್ಕೂ ಮಿಕ್ಕ ಗ್ರಾಮಗಳ ಎಲ್ಲ ವರ್ಗದ ಜನರಿಗೆ ಪ್ರಯೋಜನವಾಗುತ್ತಿತ್ತು.
-ಅನಂತ ಕೃಷ್ಣ ಕುದ್ದಣ್ಣಾಯ, ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ.

*ಎಂ.ಎಸ್‌. ಭಟ್‌, ಉಪ್ಪಿನಂಗಡಿ

Advertisement

Udayavani is now on Telegram. Click here to join our channel and stay updated with the latest news.

Next