Advertisement
2021ರ ಜ. 18ರಂದು ಬೆಳ್ತಂಗಡಿ ತಾಲೂಕು ಗರ್ಡಾಡಿ ಗ್ರಾಮದ ನಡು ಮುಡ್ಯೊಟ್ಟು ನಿವಾಸಿ ಶ್ರೀಧರ ಪೂಜಾರಿ (56) ಅವರನ್ನು ಪುತ್ರ ಹರೀಶ್ ಪೂಜಾರಿ (28) ಕೊಲೆ ಮಾಡಿದ್ದು, ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Related Articles
Advertisement
ಕೊಲೆ ಪ್ರಕರಣದ ವಿಚಾರಣೆಯನ್ನು ಮಂಗಳೂರಿನ 4ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಆರ್. ಪಲ್ಲವಿ ಅವರು ಪೂರ್ಣಗೊಳಿಸಿದ್ದು, ಆರೋಪಿ ಹರೀಶ್ ಪೂಜಾರಿ ದೋಷಿ ಎಂದು ತೀರ್ಪು ನೀಡಿದ್ದಾರೆ. ಶಿಕ್ಷೆಯ ಪ್ರಮಾಣವನ್ನು ಇನ್ನಷ್ಟೇ ಪ್ರಕಟಿಸಬೇಕಾಗಿದೆ.
ಸರಕಾರದ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಹರಿಶ್ಚಂದ್ರ ಉದ್ಯಾವರ ಅವರು ವಾದಿಸಿದ್ದರು. ಪ್ರಕರಣದಲ್ಲಿ ಒಟ್ಟು 11 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. 29 ದಾಖಲೆಗಳನ್ನು ಪರಿಶೀಲಿಸಲಾಗಿತ್ತು.
ತಂದೆಯ ತಲೆ, ಮುಖಕ್ಕೆ ಪಕ್ಕಾಸಿನಿಂದ ಹೊಡೆದಿದ್ದ :
ಜ. 18ರ ಅಪರಾಹ್ನ 3.30ಕ್ಕೆ ಪಕ್ಕದ ಮನೆಯ ಸಮೀಪ ತಂದೆ ಮತ್ತು ಮಗನ ಮಧ್ಯೆ ಗಲಾಟೆ ನಡೆದಿತ್ತು. ಈ ಸಂದರ್ಭ ಹರೀಶ್ ತನ್ನ ತಂದೆ ಶ್ರೀಧರ ಪೂಜಾರಿ ಅವರಿಗೆ ಕೊಲೆ ಬೆದರಿಕೆ ಹಾಕಿ ಹೋಗಿದ್ದ. ಬಳಿಕ ಅದೇ ದಿನ ಸಂಜೆ 6.30ಕ್ಕೆ ತಂದೆ ಸಮೀಪದ ಪೇಟೆಗೆ ಹೋಗಿ ಮನೆಗೆ ಬಂದಾಗ ಪುತ್ರ ಹರೀಶ್ ಮರದ ಪಕ್ಕಾಸಿನಿಂದ ತಂದೆಯ ತಲೆ ಮತ್ತು ಮುಖಕ್ಕೆ ಗಂಭೀರವಾಗಿ ಹೊಡೆದಿದ್ದ. ಇದರಿಂದ ತೀವ್ರ ಗಾಯಗೊಂಡಿದ್ದ ಶ್ರೀಧರ್ ಪೂಜಾರಿ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಸಾವನ್ನಪ್ಪಿದ್ದರು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಇನ್‌ಸ್ಪೆಕ್ಟರ್ ಸಂದೇಶ್ ತನಿಖೆ ನಡೆಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.