ಬೆಳ್ತಂಗಡಿ: ಮೊಗ್ರು ಗ್ರಾಮದ ಮುಗೇರಡ್ಕ ಎಂಬಲ್ಲಿಂದ ರಾತ್ರಿ ವೇಳೆ ಬೆಳೆಬಾಳುವ ಮರ ಸಾಗಾಟ ನಡೆಸುತ್ತಿರುವ ಖಚಿತ ಮಾಹಿತಿ ಮೇರೆಗೆ ಅರಣ್ಯಧಿಕಾರಿಗಳು ದಾಳಿ ನಡೆಸಿ ಮರದ ದಿಮ್ಮಿ ಸಹಿತ ಆರೋಪಿಗಳನ್ನು ಜ.30 ರಂದು ವಶಕ್ಕೆ ಪಡೆದಿದ್ದಾರೆ.
ಪಾಣೆಮಂಗಳೂರಿನ ಅಬ್ಬಾಸ್, ಮರ್ದಾಳ ನಿವಾಸಿ ಇರ್ಫಾನ್, ಮೊಗ್ರು ನಿವಾಸಿ ಕೃಷ್ಣಪ್ಪ ಕ್ಷೌರಿಕನನ್ನು ಬಂಧಿಸಲಾಗಿದ್ದು ಉಳಿದವರು ಸ್ಥಳದಿಂದ ಪರಾರಿಯಾಗಿದ್ದಾರೆ.
ಬಂದಾರು ಶಾಖಾ ಉಪ ವಲಯ ಅರಣ್ಯ ಅಧಿಕಾರಿಗಳು ಹಾಗೂ ಸಿಬಂದಿಗಳು ಖಚಿತ ಮಾಹಿತಿಯಂತೆ ಬೆಳ್ತಂಗಡಿ ತಾಲೂಕಿ ಮುರ ಗ್ರಾಮದ ಮುಗೇರಡ್ಕ ಎಂಬಲ್ಲಿ ಜ.30 ರಂದು ರಾತ್ರಿ ಸುಮಾರು 2.30 ರ ಸಮಯಕ್ಕೆ ಮುಗೇರಡ್ಕ ಎಂಬಲ್ಲಿ ಅಕ್ರಮವಾಗಿ ಹೆಬ್ಬಲಸು, ಮಾವು ಹಾಗೂ ಕಾಡು ಜಾತಿಯ ದಿಮ್ಮಿಗಳನ್ನು ಸಾಗಾಟ ಮಾಡುತ್ತಿರುವ ಲಾರಿಯನ್ನು ಪತ್ತೆ ಹಚ್ಚಿದ್ದರು.
ವಶ ಪಡಿಸಿದ ಮರಗಳ ಸೊತ್ತುಗಳ ಮೌಲ್ಯ 2.7ಲಕ್ಷ ರೂ. ವಾಹನಗಳ ಅಂದಾಜು ಮೌಲ್ಯ 5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಉಪ್ಪಿನಂಗಡಿ ವಲಯ ಅರಣ್ಯಧಿಕಾರಿ ಜಯಪ್ರಕಾಶ ಕೆ.ಕೆ., ಮಾರ್ಗದರ್ಶನದಂತೆ ಬಂದಾರು ಶಾಖಾ ಉಪ ವಲಯ ಅರಣ್ಯಾಧಿಕಾಲ ಜೆರಾಲ್ಡ್ ಡಿಸೋಜ, ಹಾಗೂ ಗಸ್ತು ಅರಣ್ಯ ಪಾಲಕರಾದ ಜಗದೀಶ ಕೆ.ಎನ್., ಪ್ರಶಾಂತ್ ಮಾಳಗಿ, ಎಂ.ಎಂ. ಜಗದೀಶ, ಅರಣ್ಯ ವೀಕ್ಷಕರಾದ ರವಿ ಮತ್ತು ಸೇಸಪ್ಪ ಗೌಡ ವಾಹನ ಚಾಲಕರಾದ ಕಿಶೋರ್ ಕುಮಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.