ಬಳ್ಳಾರಿ: ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ ಈ ಬಾರಿಯೂ ಜಿದ್ದಾಜಿದ್ದಿನಿಂದ ಕೂಡಿದ್ದು, ಮೇಲ್ನೋಟಕ್ಕೆ ಕಾಂಗ್ರೆಸ್-ಬಿಜೆಪಿ-ಕೆಆರ್‌ಪಿ ನಡುವೆ ತ್ರಿಕೋನ ಸ್ಪರ್ಧೆ ಎನಿಸಿದರೂ, ಆಂತರಿಕವಾಗಿ ಕಾಂಗ್ರೆಸ್-ಬಿಜೆಪಿ ನಡುವೆಯೇ ನೇರ ಬಿಗ್‌ಫೈಟ್ ಏರ್ಪಟ್ಟಿದೆ.
ಜೆಡಿಎಸ್ ಚುನಾವಣೆಗೆ ಸೀಮಿತವಾಗಿದೆ. ಸಾಮಾನ್ಯಕ್ಕೆ ಮೀಸಲಾಗಿರುವ ಬಳ್ಳಾರಿ ನಗರ ಕ್ಷೇತ್ರದಿಂದ ಒಟ್ಟು 28 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು, ಬಿಜೆಪಿ ಹಾಲಿ ಶಾಸಕ ಜಿ. ಸೋಮಶೇಖರ ರೆಡ್ಡಿ, ಕಾಂಗ್ರೆಸ್‌ನ ನಾರಾ ಭರತ್ ರೆಡ್ಡಿ, ಮಾಜಿ ಸಚಿವ ಜನಾರ್ದನ ರೆಡ್ಡಿ ಸ್ಥಾಪಿತ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ದಿಂದ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ, ಕಾಂಗ್ರೆಸ್ ಟಿಕೆಟ್ ವಂಚಿತ ರಾಗಿ ಜೆಡಿಎಸ್ ಟಿಕೆಟ್ ಪಡೆದ ಮಾಜಿ ಶಾಸಕ ಅನಿಲ್ ಲಾಡ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಬಿಜೆಪಿ ಅಭ್ಯರ್ಥಿ, ಶಾಸಕ ಜಿ.ಸೋಮಶೇಖರ ರೆಡ್ಡಿ ಮೂರನೇ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸ್ಲಂ ನಿವಾಸಿಗಳಿಗೆ ಪಟ್ಟಾ ವಿತರಣೆ, ಸಾವಿರ ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಮತ್ತೂಂದು ಅವಕಾಶ ನೀಡುವಂತೆ ಜನರಲ್ಲಿ ಮನವಿ ಮಾಡಿ ಕೊಳ್ಳುತ್ತಿದ್ದಾರೆ. ಕ್ಷೇತ್ರದಲ್ಲಿ ರೆಡ್ಡಿಯ ವರಿಗೆ ಜನಮನ್ನಣೆ ಇದೆ ಯಾದರೂ, ಪಕ್ಷದ ಕಾರ್ಯಕರ್ತರಲ್ಲಿನ ಅಸಮಾಧಾನ, ಅಗತ್ಯ ವಸ್ತುಗಳ ಬೆಲೆ ಏರಿಕೆ ತುಸು ನಕಾರಾತ್ಮಕವಾಗಿ ಪರಿಣಾಮ ಬೀರುವ ಸಾಧ್ಯತೆ ಇದೆ. ಯುವ ಮುಖಂಡ, ನಾರಾ ಭರತ್‌ರೆಡ್ಡಿ ಕಾಂಗ್ರೆಸ್ ಅಭ್ಯರ್ಥಿ.
ಕಳೆದ ಹಲವು ವರ್ಷಗಳಿಂದ ಟಚ್ ಫಾರ್ ಲೈಫ್ ಫೌಂಡೇಷನ್ ಹೆಸರಲ್ಲಿ ಸಾರ್ವ ಜನಿಕವಾಗಿ ಕಾಣಿಸಿಕೊಂಡ ಭರತ್ ರೆಡ್ಡಿ, 2015ರಲ್ಲಿ ಜಿಪಂ ಸದಸ್ಯರಾಗುವ ಮೂಲಕ ರಾಜಕೀಯ ಪ್ರವೇ ಶಿಸಿದ್ದಾರೆ. ಈಗ ಕಾಂಗ್ರೆಸ್‌ನಲ್ಲಿನ ಘಟಾನುಘಟಿ ಗಳನ್ನು ಹಿಂದಿಕ್ಕಿ, ಬಳ್ಳಾರಿ ನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಮತ ಬ್ಯಾಂಕ್ ಆದ ಮುಸ್ಲಿಂ, ಪರಿಶಿಷ್ಟ ಜಾತಿ, ಕುರುಬ ಮತಗಳು ಹೆಚ್ಚಿನ ಸಂಖ್ಯೆ ಯಲ್ಲಿರುವುದು ಸಹಕಾರಿಯಾಗುವ ಸಾಧ್ಯತೆಯಿದೆಯಾದರೂ, ಚಿಕ್ಕ ವಯಸ್ಸಿಗೆ ಕಾಂಗ್ರೆಸ್ ಟಿಕೆಟ್ ಪಡೆದಿರುವುದು, ಹಿರಿಯ ನಾಯಕರನ್ನು ಕಡೆಗ ಣಿಸುತ್ತಿದ್ದಾರೆ ಎಂಬ ಆರೋ ಪಗಳು ಕೇಳಿಬರುತ್ತಿವೆ. ಮಾಜಿ ಸಚಿವ ಜನಾರ್ದನ ರೆಡ್ಡಿ ಸ್ಥಾಪಿತ ಕೆಆರ್‌ಪಿದಿಂದ ಅವರ ಪತ್ನಿ ಲಕ್ಷ್ಮೀ ಅರುಣಾ ಸ್ಪರ್ಧಿಸಿದ್ದಾರೆ.
ವರ್ಷದ ಮೊದಲ ದಿನ ಜ.1ರಿಂದಲೇ ಪ್ರಚಾರ ಆರಂಭಿಸಿದ್ದಾರೆ. ಮುಖ್ಯವಾಗಿ ಮಹಿಳಾ ಮತದಾರರನ್ನು ಹೆಚ್ಚು ಸೆಳೆ ಯು ತ್ತಿದ್ದಾರೆ. ಹೊಸಮುಖ, ಜನಾ ರ್ದನ ರೆಡ್ಡಿ ಜನಪ್ರಿಯತೆ ಪ್ಲಸ್ ಆದರೂ, ಅಕ್ರಮ ಗಣಿಗಾರಿಕೆ ಆರೋಪ, ಕೆಆರ್‌ಪಿ-ಬಿಜೆಪಿ ಒಂದೇ ಎಂಬ ಆರೋ ಪಗಳು ಕೇಳಿಬರುತ್ತಿರು ವುದು ಒಂದಷ್ಟು ಮೈನಸ್ ಆಗಬಹುದಾಗಿದೆ. ಇನ್ನು ಜೆಡಿಎಸ್‌ನ ಅನಿಲ್ ಲಾಡ್, ಎಎಪಿ ಅಭ್ಯರ್ಥಿ ಕೊರ್ಲಗುಂದಿ ದೊಡ್ಡ ಕೇಶವ ರೆಡ್ಡಿ ಪಡೆಯಲಿರುವ ಮತಗಳ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ.
– ವೆಂಕೋಬಿ ಸಂಗನಕಲ್ಲು