Advertisement

Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್‌ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?

03:15 AM Dec 26, 2024 | Team Udayavani |

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್‌ ಹಾಗೂ ವಿಧಾನ ಪರಿಷತ್ತಿನ ಸದಸ್ಯ ಸಿ.ಟಿ. ರವಿ ನಡುವಿನ ವಾಗ್ವಾದ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವುದರಿಂದ ವಿಧಾನ ಪರಿಷತ್ತಿನ ಘನತೆ-ಗಾಂಭೀರ್ಯವನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಸಭಾಪತಿ ಬಸವರಾಜ ಹೊರಟ್ಟಿ ಈ ಪ್ರಕರಣವನ್ನು ಸಂಧಾನದ ಮೂಲಕ ಮಂಗಳ ಹಾಡುವುದಕ್ಕೆ ಮುಂದಾಗಿದ್ದಾರೆ.

Advertisement

ಡಿ. 27ರಂದು (ಶುಕ್ರವಾರ) ಬೆಳಗಾವಿ ಸುವರ್ಣಸೌಧದ ಆವರಣದಲ್ಲಿ ನಡೆಯುವ ಎಐಸಿಸಿ ಅಧಿವೇಶನದ ಶತಮಾನೋತ್ಸವದ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಈ ವಿಚಾರ ಪ್ರಸ್ತಾವಿಸಿ ಪ್ರಕರಣ ಅಂತ್ಯಗೊಳಿಸುವ ಇರಾದೆ ಅವರದು. ಈ ಘಟನೆಯ ಬಳಿಕ ಬೇರೆ ರಾಜ್ಯದ ಸ್ಪೀಕರ್‌ ಹಾಗೂ ಸಭಾಪತಿಗಳು ಹೊರಟ್ಟಿಯವರಿಗೆ ಕರೆ ಮಾಡಿ ಚರ್ಚೆ ನಡೆಸಿದ್ದಾರೆ.

ಕೆಲವರು ಹೊರಟ್ಟಿಯವರ ರೂಲಿಂಗ್‌ ಶ್ಲಾಘಿಸಿದರೆ, ಇನ್ನು ಕೆಲವರು ಕರ್ನಾಟಕದ ಘನ ಸಂಸದೀಯ ಇತಿಹಾಸದ ಬಗ್ಗೆ ಮಾತನಾಡಿದ್ದಾರೆ. ಇದರ ಜತೆಗೆ ಈ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ವಾಗ್ವಾದ, ಟೀಕೆಗಳು ಪರಿಷತ್‌ನ ಗೌರವಕ್ಕೆ ಧಕ್ಕೆ ತರುವಂತಾಗಿದೆ. ಹೀಗಾಗಿ ಈ ಪ್ರಕರಣ ಮತ್ತೆ ಮುಂದುವರಿಯುವುದು ಬೇಡ ಎಂಬುದು ಹೊರಟ್ಟಿಯವರ ನಿಲುವಾಗಿದೆ.

ಈ ಸಂಬಂಧ ಹೊರಟ್ಟಿ ಅವರು “ಉದಯವಾಣಿ’ಯ ಜತೆ ಮಾತನಾಡಿ, ಈ ದ್ವೇಷದ ಬೆಳವಣಿಗೆ ಸಾಕು. ಮುಖ್ಯಮಂತ್ರಿಗಳ ಬಳಿ ನಾನೇ ಸಂಧಾನದ ಬಗ್ಗೆ ಪ್ರಸ್ತಾವಿಸುತ್ತೇನೆ. ಇಬ್ಬರನ್ನೂ ಕರೆದು ಪ್ರಕರಣ ಮುಕ್ತಾಯಗೊಳಿಸುವಂತೆ ಕೋರುತ್ತೇನೆ. ಸದನದ ಘನತೆಯ ದೃಷ್ಟಿಯಿಂದ ಇದು ಇನ್ನೂ ಬೆಳೆಯಬಾರದು. ನನ್ನ ಪ್ರಯತ್ನವನ್ನು ಶಕ್ತಿ ಮೀರಿ ಮಾಡುತ್ತೇನೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next