Advertisement

ಬೆಳ್ಳಾರೆ: ತೋಟಗಳಿಗೆ ಹೆಚ್ಚಿದ ಮಂಗಗಳ ಕಾಟ, ಹೈರಾಣಾದ ರೈತ

12:00 PM Sep 26, 2018 | Team Udayavani |

ಬೆಳ್ಳಾರೆ : ಬೆಳ್ಳಾರೆ ಸಹಿತ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ಬೆಳೆನಾಶದಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇಲ್ಲಿನ ಅಡಿಕೆ, ತೆಂಗು, ಕೊಕ್ಕೋ, ಬಾಳೆ, ಗೇರು ತೋಟಗಳಲ್ಲಿ ಹಾಗೂ ತರಕಾರಿ ಗದ್ದೆಗಳಲ್ಲಿ ರೈತರು ನೀರು, ಗೊಬ್ಬರ ಹಾಗೂ ಕೀಟನಾಶಕ ಬಳಕಿ ಕಷ್ಟಪಟ್ಟು ಬೆಳೆದ ಫ‌ಸಲೀಗ ಮಂಗಗಳ ಹಿಂಡಿನ ಪಾಲಾಗುತ್ತಿದೆ. ಈ ವರ್ಷ ಮೊದಲಿಗೆ ಅತಿವೃಷ್ಟಿ ಕಾಡಿತು. ಒಂದು ತಿಂಗಳಿಂದ ಮಳೆ ಕೊರತೆ ತೀವ್ರವಾಗಿ ಬಾಧಿಸುತ್ತಿದೆ. ಇದರಲ್ಲೇ ಬಹುತೇಕ ಬೆಳೆ ನಷ್ಟವಾಗಿದೆ. ಅಳಿದುಳಿದ ಬೆಳೆ ರಕ್ಷಿಸಿಕೊಳ್ಳಬೇಕೆಂದರೆ ಮಂಗಗಳ ಉಪಟಳದಿಂದ ಸಾಧ್ಯವಾಗುತ್ತಿಲ್ಲ. ರೈತರು ಕೃಷಿ, ತೋಟಗಾರಿಕೆ ಹಾಗೂ ಅರಣ್ಯ ಇಲಾಖೆಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ.

Advertisement

ಸುಳ್ಯ ತಾಲೂಕಿನ ಬೆಳ್ಳಾರೆ, ಐವರ್ನಾಡು, ಬಾಳಿಲ, ಅರಂತೋಡು, ಕಲ್ಲುಗುಂಡಿ, ಸಂಪಾಜೆ, ತೊಡಿಕಾನ ಮುಂತಾದ ಕಡೆಗಳಲ್ಲಿ ಮಂಗಗಳ ಕಾಟ ಜಾಸ್ತಿ ಇದೆ. ಒಂದು ಗುಂಪಿನಲ್ಲಿ ಸುಮಾರು 70ರಿಂದ 80 ಕೋತಿಗಳಿವೆ. ಮುಂಜಾನೆ ನಾಲ್ಕು ಗಂಟೆಗೇ ಅವುಗಳ ದಿನಚರಿ ಆರಂಭ. ಮಧ್ಯಾಹ್ನ ಜೋರು ಬಿಸಿಲಿಗೆ ರೈತರು ತೋಟದ ಕಡೆ ಸುಳಿಯುವುದಿಲ್ಲ ಎಂದು ಗೊತ್ತಿರುವ ಕಾರಣ ಅದೇ ಹೊತ್ತಿಗೆ ದಾಳಿ ಮಾಡುತ್ತವೆ. ಒಂದು ಸಲ ತೋಟಕ್ಕೆ ದಾಳಿ ಮಾಡಿದರೆ ಬೆಳೆ ನಾಶವಾಯಿತೆಂದೇ ಅರ್ಥ. ಗುಂಪಿನಲ್ಲಿ ಒಂದು ಗಂಡು ಮಂಗ ಯಜಮಾನ. ಐದರಿಂದ ಆರು ದೊಡ್ಡ ಹೆಣ್ಣು ಮಂಗಗಳು ಇರುತ್ತವೆ. ಉಳಿದ ಮಂಗಗಳು ಇವುಗಳ ಸಂಸಾರವೇ ಆಗಿರುತ್ತದೆ. ಗಂಡು ಮಂಗ ಜೋರಾಗಿರುತ್ತದೆ, ಇಡೀ ಗುಂಪನ್ನು ತನ್ನ ಹತೋಟಿಯಲ್ಲಿ ಇರಿಸಿಕೊಳ್ಳುತ್ತದೆ. ರೈತರಿಂದ ಅಪಾಯದ ಮುನ್ಸೂಚನೆ ಕಂಡುಬಂದರೆ ವಿಚಿತ್ರ ಸ್ವರ ಹೊರಡಿಸಿ, ಬಚ್ಚಿಟ್ಟುಕೊಳ್ಳುವಂತೆ ಗುಂಪಿಗೆ ಸೂಚಿಸುತ್ತದೆ. ಎಲ್ಲ ಮಂಗಗಳು ಗಿಡಗಳ ಟೊಂಗೆ, ಪೊದೆಗಳಲ್ಲಿ ಕುಳಿತು ಅಪಾಯದಿಂದ ಪಾರಾಗುತ್ತವೆ.

ತೋಟಕ್ಕೆ ಲಗ್ಗೆಯಿಟ್ಟ ಮೇಲೆ ಅಡಿಕೆಗಳನ್ನು ಸುಲಿದು ರಸ ಹೀರಿ, ನೆಲಕ್ಕೆಸೆಯುತ್ತವೆ. ಎಳನೀರುಗಳನ್ನು ತೂತು ಕೊರೆದು ಕುಡಿಯುತ್ತವೆ. ಹಲಸು, ಗೇರುಹಣ್ಣು, ಕೊಕ್ಕೊ ಸಿಕ್ಕರಂತೂ ಭರ್ಜರಿ ಭೋಜನ. ತರಕಾರಿಗಳೆಂದರೆ ಪಂಚಪ್ರಾಣ. ತಿನ್ನುವುದಕ್ಕಿಂತಲೂ ಹಾಳು ಮಾಡುವುದೇ ಜಾಸ್ತಿ. ಕೆಲವೊಂದು ದೈತ್ಯ ಗಾತ್ರದ ಮಂಗಗಳು ಒಂಟಿಯಾಗಿ ತೋಟಕ್ಕೆ ನುಗ್ಗುತ್ತವೆ. ಮಹಿಳೆಯರು, ಮಕ್ಕಳು ಇವುಗಳನ್ನು ಓಡಿಸಲು ಯತ್ನಿಸಿದರೆ ಅಟ್ಟಿಸಿಕೊಂಡು ಬರುತ್ತವೆ. ಒಂದೇ ಮಂಗ ನುಗ್ಗಿದ್ದರೆ ಅದು ಹಾವಳಿ ಮಾಡುವುದು ಗೊತ್ತೇ ಆಗುವುದಿಲ್ಲ. ಒಂದು ಮರದಿಂದ ಇನ್ನೊಂದಕ್ಕೆ ಹಾರುವಾಗ ಗೆಲ್ಲುಗಳ ಶಬ್ದವಾದರೆ ಮಾತ್ರ ಮಂಗ ಬಂದಿರುವುದು ಅರಿವಿಗೆ ಬರುತ್ತದೆ.

ಈ ಕೋತಿಗಳು ಕೋವಿಗೂ ಭಯ ಪಡುವುದಿಲ್ಲ. ಕವಣೆ ಕಲ್ಲಿನ ಹೊಡೆತಕ್ಕೆ ಮಾತ್ರ ಸ್ವಲ್ಪ ಮಟ್ಟಿಗೆ ಅಂಜುತ್ತವೆ. ಒಂದು ಮಂಗಕ್ಕೆ ಕಲ್ಲೇಟು ತಾಗಿದರೆ ಆ ಗುಂಪು ಮತ್ತೆ ಕೆಲವು ದಿನ ತೋಟಗಳತ್ತ ಸುಳಿಯುವುದೇ ಇಲ್ಲ. ಆದರೆ, ಸರಕಾರವೇ ಮಂಗಗಳ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಕ್ರಮ ರೂಪಿಸಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ.

ಆಹಾರಕ್ಕಾಗಿ ತೋಟಗಳಿಗೆ ಲಗ್ಗೆ
ಶೇ. 90ರಷ್ಟು ಮಂಗಗಳು ಆಹಾರಕ್ಕಾಗಿಯೇ ಕೃಷಿ ತೋಟಗಳಿಗೆ ಲಗ್ಗೆ ಇಡುತ್ತಿವೆ. ಈಗ ಅರಣ್ಯ ನಾಶದ ಪರಿಣಾಮ ಅವುಗಳಿಗೆ ಅರಣ್ಯದಲ್ಲಿ ಸಾಕಷ್ಟು ಆಹಾರ ಸಿಗುತ್ತಿಲ್ಲ. ಅರಣ್ಯದಲ್ಲಿ ಮಂಗಗಳು ತಿನ್ನುವ ಆಹಾರ ಬೆಳೆಸಬೇಕು. ಆಗ ಕೃಷಿ ತೋಟಗಳಲ್ಲಿ ಹಾವಳಿ ಕಡಿಮೆಯಾಗುತ್ತದೆ.
 - ಫಾಲಿಚಂದ್ರ,
ಸಹಾಯ ಕೃಷಿ ನಿರ್ದೇಶಕರು, ಸುಳ್ಯ 

Advertisement

ಉಪಟಳ ಜಾಸ್ತಿ
ಮಂಗಗಳ ಉಪಟಳ ಜಾಸ್ತಿಯಾಗಿದ್ದು, ರೈತ ದಿನನಿತ್ಯ ನಷ್ಟ ಅನುಭವಿಸುತ್ತಿದ್ದಾನೆ. ಇದೊಂದು ಗಂಭೀರ ಸಮಸ್ಯೆ. ಇದನ್ನು ಸರಕಾರ ಕಡೆಗಣಿಸುವ ಹಾಗಿಲ್ಲ. ಜನಪ್ರತಿನಿಧಿಗಳು ಗಂಭೀರವಾಗಿ ಆಲೋಚಿಸಬೇಕಾಗಿದೆ.
– ಬಿ. ಸುಬ್ರಹ್ಮಣ್ಯ ಜೋಶಿ, ಬೆಳ್ಳಾರೆ, ಕೃಷಿಕರು

ಮಂಕಿ ಪಾರ್ಕ್‌ ಪ್ರಸ್ತಾವ
ವನ್ಯಜೀವಿಗಳಿಂದ ಫ‌ಸಲು ನಷ್ಟ ಸಂಭವಿಸಿದಾಗ ರೈತರಿಗೆ ಪರಿಹಾರ ಕೊಡಲು ಅರಣ್ಯ ಇಲಾಖೆಯಲ್ಲಿ ಅವಕಾಶವಿಲ್ಲ. ಫ‌ಸಲು ಕೊಡುವ ಗಿಡ, ಮರಗಳಿಗೆ ಪ್ರಾಣಿಗಳಿಂದ ಹಾನಿಯಾದರೆ ಮಾತ್ರ ಪರಿಹಾರ ಸಿಗುತ್ತದೆ. ಈ ಭಾಗದಲ್ಲಿ ಮಂಗಳಿಂದ ಕೃಷಿ ಫ‌ಸಲು ನಷ್ಟವಾಗುತ್ತಿದೆ, ಪರಿಹಾರ ನೀಡಬೇಕೆಂದು ಇಲಾಖೆ ಮೇಲಧಿಕಾರಿಗಳಿಗೆ ಬರೆದು ಕಳುಹಿಸಿದ್ದೇವೆ. ಮಂಕಿ ಪಾರ್ಕ್‌ ನಿರ್ಮಾಣ ಮಾಡುವ ಪ್ರಸ್ತಾವ ಇದೆ. ಅದು ಏನಾಗುತ್ತದೆ ಎಂಬುದು ಗೊತ್ತಿಲ್ಲ.
– ಮಂಜುನಾಥ್‌,
ವಲಯ ಅರಣ್ಯಾಧಿಕಾರಿ, ಸುಳ್ಯ

 ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next