Advertisement

ಬೆಳ್ಳಂದೂರು: ಕೈಗಾರಿಕೆಗಳನ್ನು ಮುಚ್ಚುವಂತೆ ಆದೇಶ

11:34 AM May 05, 2017 | |

ಬೆಂಗಳೂರು: ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ಆದೇಶ ದಂತೆ ಬೆಳ್ಳಂದೂರು ಕೆರೆಯ ಸುತ್ತ ಮುತ್ತಲಿನ ಕೈಗಾರಿಕೆಗಳನ್ನು ಮುಚ್ಚಿಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮುಂದಾಗಿದ್ದು, ಕೈಗಾರಿಕೆಗಳನ್ನು ಸ್ಥಗಿತಗೊಳಿಸುವಂತೆ ಸಾರ್ವಜನಿಕವಾಗಿ ನೋಟಿಸ್‌ ಪ್ರಕಟಿಸಲಿದೆ.

Advertisement

ಬೆಳ್ಳಂದೂರು ಕೆರೆಯ ಜಲಾನಯನ ಪ್ರದೇಶದಲ್ಲಿ ವಿಪ್ರೊ, ಆದಿತ್ಯ ಬಿರ್ಲಾ ನೋವಾ ಲಿಮಿಟೆಡ್‌, ಇನ್ಫೋಸಿಸ್‌, ಬಾಷ್‌ ಸೇರಿ ಸರ್ಕಾರಿ ಸ್ವಾಮ್ಯದ ನ್ಯಾಷನಲ್‌ ಏರೋಸ್ಪೇಸ್‌ ಲ್ಯಾಬೊರೇಟರಿ, ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಏಳು ಘಟಕಗಳು, ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ), ಕರ್ನಾಟಕ ಸಾವಯವ ಗೊಬ್ಬರ ಅಭಿವೃದ್ಧಿ ನಿಗಮ (ಕೆಸಿಡಿಸಿ) ಘಟಕಗಳು ಸೇರಿ ಹಲವು ಪ್ರಮುಖ ಸಂಸ್ಥೆಗಳಿವೆ. 

ಬುಧವಾರ ಎನ್‌ಜಿಟಿ ಆದೇಶ ಪ್ರತಿ ದೊರಕಿದ ಹಿನ್ನೆಲೆಯಲ್ಲಿ ಕೈಗಾರಿಕೆಗಳನ್ನು ಮುಚ್ಚುವಂತೆ ನೋಟಿಸ್‌ ಜಾರಿಗೊಳಿಸಲು ಮುಂದಾಗಿರುವ ಅಧಿಕಾರಿಗಳು, ಬೆಳ್ಳಂದೂರು ಕೆರೆಯ ಸುತ್ತಮುತ್ತಲಿನ 488 ಕೈಗಾರಿಕೆಗಳಿಗೆ ನೋಟಿಸ್‌ ಜಾರಿಗೊಳಿಸಲಿದೆ. 

ಈ ಕುರಿತು ಪ್ರತ್ರಿಕ್ರಿಯೆ ನೀಡಿರುವ ಮಂಡಳಿ ಅಧ್ಯಕ್ಷ ಲಕ್ಷ್ಮಣ್‌, ಎನ್‌ಜಿಟಿ ಆದೇಶದಂತೆ ಕೆರೆಯ ಸುತ್ತಮುತ್ತಲಿನ ಕೈಗಾರಿಕೆಗಳನ್ನು ಮುಚ್ಚಲು ಕ್ರಮಕೈಗೊಳ್ಳಲಾಗುವುದು. ಕೆರೆಗೆ ದಡದಲ್ಲಿರುವ ಎಲ್ಲ ಕೈಗಾರಿಕೆಗಳನ್ನು ಮುಚ್ಚುವಂತೆ ಸಾರ್ವಜನಿಕ ಪ್ರಕಟಣೆ ನೀಡಲಾಗುವುದು. ಜಂಟಿ ಪರಿಶೀಲನಾ ಸಮಿತಿ ಕೈಗಾರಿಕೆಗಳಿಗೆ ಭೇಟಿ ಪರಿಶೀಲನೆ ನಡೆಸಿದ ನಂತರ ಸಮಿತಿಯ ನಿರ್ಧಾರದಂತೆ ಮತ್ತೆ ಆರಂಭಿಸಲು ಅನುಮತಿ ನೀಡಲಾಗುವುದು ಎಂದು ತಿಳಿಸಿದ್ದಾರೆ. 

ಸಾರ್ವಜನಿಕ ಪ್ರಕಟಣೆ ನೀಡಿದ ಕೂಡಲೇ ಎಲ್ಲ ಕೈಗಾರಿಕೆಗಳು ತಮ್ಮ ಕಾರ್ಯವನ್ನು ಸ್ಥಗಿತಗೊಳಿಸಬೇಕು. ಎಲ್ಲ ಕೈಗಾರಿಕೆಗಳ ಪರಿಶೀಲನೆಗಾಗಿ ಮಂಡಳಿಯಿಂದ 30 ಅಧಿಕಾರಿಗಳ ತಂಡವನ್ನು ರಚನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. 

Advertisement

ಎರಡು ಹಂತದಲ್ಲಿ  ಬೆಳ್ಳಂದೂರು ಕೆರೆ ಅಭಿವೃದ್ಧಿ
ಬೆಂಗಳೂರು:
ಬೆಳ್ಳಂದೂರು ಕೆರೆ ಸಂರಕ್ಷಣೆಗೆ ರಾಷ್ಟ್ರೀಯ ಹಸಿರುವ ನ್ಯಾಯಾಧಿಕರಣ ಆದೇಶಿಸುವ ಮುನ್ನವೇ ರಾಜ್ಯ ಸರ್ಕಾರ ಯೋಜನೆ ರೂಪಿಸಿದ್ದು, ಅದನ್ನು ಎರಡು ಹಂತಗಳಲ್ಲಿ ಅನುಷ್ಠಾನಗೊಳಿಸಲು ಅವಕಾಶ ಕೋರಿ ಹಸಿರು ಪೀಠಕ್ಕೆ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಹೇಳಿದ್ದಾರೆ.

ಬೆಳ್ಳಂದೂರು ಕೆರೆ ಸಂರಕ್ಷಣೆಗೆ ಸಂಬಂಧಿಸಿದಂತೆ ನ್ಯಾಯಾಧಿಕರಣದ ಆದೇಶ ಸ್ವಾಗತಾರ್ಹ. ಈ ಆದೇಶದಿಂದಾಗಿ ಕೆರೆ ಸಂರಕ್ಷಣೆ ಕುರಿತು ಸರ್ಕಾರ ರೂಪಿಸಿರುವ ಯೋಜನೆ ಜಾರಿಗೊಳಿಸಲು ಅನುಕೂಲವಾಗಲಿದೆ ಎಂದು ಹೇಳಿದರು. ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಟು ತಿಂಗಳ ಹಿಂದೆ ಸಿಎಂ ಸಿದ್ದರಾಮಯ್ಯ ಅವರು ಬೆಳ್ಳಂದೂರು ಕೆರೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಕೆರೆ ಸಂರಕ್ಷಣೆಗಾಗಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚಿಸಲಾಗಿತ್ತು.

ಈ ಸಮಿತಿ ವರದಿ ಆಧರಿಸಿ ಎರಡು ಹಂತಗಳಲ್ಲಿ ಕೆರೆ ಸಂರಕ್ಷಣೆ ಯೋಜನೆ ರೂಪಿಸಲಾಗಿತ್ತು ಎಂದು ಹೇಳಿದರು. ಅಲ್ಲದೆ, ಸಮಿತಿ ಶಿಫಾರಸಿನನ್ವಯ ಎರಡು ಹಂತಗಳಲ್ಲಿ ಯೋಜನೆ ಜಾರಿ ಕುರಿತು ಟೆಂಡರ್‌ ಕರೆಯಲಾಗಿತ್ತಾದರೂ ಕೇವಲ ನಾಲ್ಕು ಸಂಸ್ಥೆಗಳು ಮಾತ್ರ ಪಾಲ್ಗೊಂಡಿದ್ದವು ಎಂಬ ಕಾರಣಕ್ಕೆ ಆ ಟೆಂಡರ್‌ ರದ್ದುಗೊಳಿಸಿ ಮರುಟೆಂಡರ್‌ ಕರೆಯಲಾಗಿತ್ತು. ಇದರಿಂದ ನಿರೀಕ್ಷೆಯಂತೆ ಯೋಜನೆ ಜಾರಿಗೊಳಿಸಲು ಸಾಧ್ಯವಾಗಿರಲಿಲ್ಲ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next