Advertisement
ಜಿಲ್ಲೆಯಲ್ಲಿ ಐದಾರು ನದಿ, ಸಮೃದ್ಧ ಅರಣ್ಯ ಪ್ರದೇಶವಿದ್ದರೂ ಎಲ್ಲ ಕಡೆ ಜನ ಹಾಗೂ ಜಾನುವಾರು ಕುಡಿಯುವ ನೀರಿಗೆ ಪರದಾಡಬೇಕಾಗಿದೆ. ಜಾನುವಾರುಗಳಿಗೆ ಮೇವಿನ ಅಭಾವ ಅಷ್ಟಾಗಿ ಕಂಡುಬರದೇ ಇದ್ದರೂ ಕೆಲ ಭಾಗಗಳಲ್ಲಿ ಸಮರ್ಪಕವಾಗಿ ಮೇವು ಲಭ್ಯವಾಗುತ್ತಿಲ್ಲ ಎಂಬ ದೂರುಗಳು ಸಹ ರೈತರಿಂದ ಕೇಳಿಬಂದಿವೆ.
Related Articles
Advertisement
6.5 ಕೋಟಿ ಕಾಮಗಾರಿ: ಜಿಲ್ಲೆಯಲ್ಲಿ 6.5 ಕೋಟಿ ರೂ. ವೆಚ್ಚದಲ್ಲಿ ಬರ ಕಾಮಗಾರಿಗಳು ಪ್ರಗತಿಯಲ್ಲಿವೆ. ಎಲ್ಲ ತಾಲೂಕುಗಳಲ್ಲಿ ನರೇಗಾ ಯೋಜನೆಯಡಿ ಉದ್ಯೋಗ ಖಾತ್ರಿ ಕಾಮಗಾರಿ ಆರಂಭಿಸಲಾಗಿದೆ. ಈ ವರ್ಷ ಅಂದರೆ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ 8.96 ಲಕ್ಷ ಮಾನವ ದಿನಗಳನ್ನು ಸೃಷ್ಟಿಮಾಡಿ ಶೇಕಡಾ 70.59 ರಷ್ಟು ಸಾಧನೆ ಮಾಡಲಾಗಿದೆ. ಇದಕ್ಕಾಗಿ 19.38 ಕೋಟಿ ರೂ. ವೆಚ್ಚ ಮಾಡಲಾಗಿದೆ. ಮೇ ತಿಂಗಳ ಅಂತ್ಯದವರೆಗೆ ಒಟ್ಟು 12.69 ಲಕ್ಷ ಮಾನವ ದಿನಗಳ ಸೃಷ್ಟಿ ಗುರಿ ನೀಡಲಾಗಿದೆ.
ಬರ ನಿರ್ವಹಣೆ ಕಾಮಗಾರಿ ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳಲು ಪಂಚಾಯತ್ ರಾಜ್ ಮತ್ತು ಇಂಜನಿಯರಿಂಗ್ ಇಲಾಖೆಯ ಹಿರಿಯ ಹಾಗೂ ಕಿರಿಯ ಇಂಜನಿಯರ್‌ಗಳನ್ನು ನಿಯೋಜನೆ ಮಾಡಲಾಗಿದೆ. ಈ ಅಧಿಕಾರಿಗಳು ಅವರ ವ್ಯಾಪ್ತಿಯ ಗ್ರಾಮ ಪಂಚಾಯತ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡುವರು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಂದ್ರ ಕೆ.ವಿ. ಹೇಳಿದ್ದಾರೆ.
ಜಿಲ್ಲೆಯಲ್ಲಿ ಯಾವುದೇ ಗೋಶಾಲೆ ಆರಂಭ ಮಾಡಿಲ್ಲ. ಗೋಶಾಲೆ ಆರಂಭಿಸಿದರೆ ಅದರ ನಿರ್ವಹಣೆ ಬಹಳ ಕಷ್ಟ. ಕುಡಿಯುವ ನೀರಿನ ಸಮಸ್ಯೆ ಸಹ ಗಂಭೀರವಾಗಲಿದೆ. ಅದರ ಬದಲು ಮೇವು ಬ್ಯಾಂಕ್ ಸ್ಥಾಪಿಸುವುದೇ ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಆಯಾ ಕ್ಷೇತ್ರದ ಶಾಸಕರ ಸಭೆ ನಡೆಸಿ ಗೋಶಾಲೆ ಬದಲು ಮೇವು ಬ್ಯಾಂಕ್ ತೆರೆಯಲು
ನಿರ್ಧರಿಸಲಾಗಿದೆ. ಅಥಣಿ ಹಾಗೂ ಚಿಕ್ಕೋಡಿ ತಾಲೂಕಿನಲ್ಲಿ ಮೇವಿನ ಕೊರತೆ ಇದೆ. ಆದ್ದರಿಂದ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಅಥಣಿ ತಾಲೂಕಿನಲ್ಲಿ 24 ಹಾಗೂ ಚಿಕ್ಕೋಡಿ ತಾಲೂಕಿನಲ್ಲಿ ಒಂದು ಮೇವಿನ ಬ್ಯಾಂಕ್ ತೆರೆಯಲಾಗಿದೆ ಎಂದು ಪಶು ವೈದ್ಯಕೀಯ ಹಾಗೂ ಪಶುಪಾಲನಾ ಸೇವೆಗಳ ಇಲಾಖೆ ಉಪನಿರ್ದೇಶಕ ಡಾ. ಡಿ.ಎನ್. ಹವಾಲ್ದಾರ ಹೇಳಿದರು.
ಜಿಲ್ಲೆಯಲ್ಲಿ ಉಂಟಾಗಿರುವ ತೀವ್ರ ಬರದ ಹಿನ್ನಲೆಯಲ್ಲಿ ಅಥಣಿ ಹಾಗೂ ಚಿಕ್ಕೋಡಿಯ ಒಟ್ಟು 25 ಮೇವಿನ ಬ್ಯಾಂಕ್ ಹೊರತುಪಡಿಸಿ 16 ಕಡೆಗಳಲ್ಲಿ ಮೇವಿನ ಬ್ಯಾಂಕ್ ಸ್ಥಾಪಿಸಲು ಸ್ಥಳಗಳನ್ನು ಗುರುತಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಭಾಗದ ರೈತರಿಂದ ಬೇಡಿಕೆ ಬಂದರೆ ಅದಕ್ಕೆ ಅನುಗುಣವಾಗಿ ಮೇವು ಬ್ಯಾಂಕ್ ಸ್ಥಾಪಿಸಲಾಗುವುದು. ಈ ಎಲ್ಲ ಮೇವಿನ ಬ್ಯಾಂಕ್‌ಗಳ ನಿರ್ವಹಣೆಯನ್ನು ಆಯಾ ತಾಲೂಕಿನ ತಹಶೀಲ್ದಾರರು ನೋಡಿಕೊಳ್ಳುತ್ತಿದ್ದಾರೆ ಎಂಬುದು ಅಧಿಕಾರಿಗಳ ಹೇಳಿಕೆ.
ಜಾನುವಾರುಗಳಿಗೆ ಮೇವಿನ ಅಭಾವ ಆಗಬಾರದು ಎಂಬ ಕಾರಣದಿಂದ ಮೇವು ಬ್ಯಾಂಕ್ ಮೂಲಕ ಪ್ರತಿ ಜಾನುವಾರಿಗೆ ಪ್ರತಿ ದಿನಕ್ಕೆ ಐದು ಕೆಜಿ ಮೇವು ವಿತರಿಸಲಾಗುತ್ತಿದ್ದು ಪ್ರತಿ ಕೆಜಿ ಮೇವಿಗೆ ಎರಡು ರೂ. ಶುಲ್ಕ ಪಡೆಯಲಾಗುತ್ತಿದೆ. ಇದಕ್ಕೆ ರೈತರು ಸಹ ಒಪ್ಪಿಗೆ ಸೂಚಿಸಿ ತಮಗೆ ಅಗತ್ಯವಿರುವಷ್ಟು ಮೇವು ಪಡೆದುಕೊಳ್ಳುತ್ತಿದ್ದಾರೆ. ಎಲ್ಲಿಯೂ ಸಮಸ್ಯೆ ಕಂಡುಬಂದಿಲ್ಲ ಎಂದು ಡಾ. ಡಿ.ಎನ್. ಹವಾಲ್ದಾರ ಹೇಳಿದರು.
•ಕೇಶವ ಆದಿ