ಧಾರವಾಡ: ಬೆಳಗಾವಿ ವಿಭಾಗ ಮಟ್ಟದ “ಸರಕಾರಿ ಸೌಲಭ್ಯಗಳ ವಿತರಣಾ’ ಸಮಾವೇಶವನ್ನು ಮೂರು ದಿನಗಳ ಕಾಲ ಅಕ್ಟೋಬರ್ ತಿಂಗಳಲ್ಲಿ ಇಲ್ಲಿನ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಸಮಾವೇಶದ ಸಿದ್ಧತೆ ಕುರಿತಂತೆ ಪೂರ್ವಭಾವಿ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಅಧಿಕಾರಕ್ಕೆ ಬಂದು ನಾಲ್ಕು ವರ್ಷ, ನಾಲ್ಕು ತಿಂಗಳಾಗಿವೆ. ಚುನಾವಣೆಗೂ ಮುನ್ನ ನೀಡಿದ್ದ ಪ್ರಣಾಳಿಕೆಯ ಭರವಸೆಯನ್ನು ಬಹುತೇಕ ಅನುಷ್ಠಾನಕ್ಕೆ ತಂದಿದ್ದೇವೆ.
ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಯೋಜನೆಗಳ ಫಲಾನುಭವಿಗಳನ್ನು ಸಮಾವೇಶದಲ್ಲಿ ಕರೆ ತಂದು ಅವರ ಮನದ ಮಾತು ಕೇಳುತ್ತೇವೆ. ಹೀಗಾಗಿ 2017-18ನೇ ಸಾಲಿನ ಫಲಾನುಭವಿಗಳ ಪಟ್ಟಿಯನ್ನು ಸೆ.30ರೊಳಗೆ ಸಿದ್ದಪಡಿಸುವಂತೆ ಹೇಳಿದ್ದೇವೆ. ಫಲಾನುಭವಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ಸಚಿವರು, ಶಾಸಕರು ಹಾಗೂ ಅಧಿಕಾರಿ ವರ್ಗದವರಿಗೆ ನೀಡಲಾಗಿದೆ ಎಂದರು.
ಇದು ಸರಕಾರದ ಕಾರ್ಯಕ್ರಮ ಆಗಿದ್ದು, ಸಿಎಂ ಸಿದ್ದರಾಮಯ್ಯ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ಏಳು ಜಿಲ್ಲೆಗಳ ಸಚಿವರು, ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ವಿರೋಧ ಪಕ್ಷದವರನ್ನೂ ಸಮಾವೇಶಕ್ಕೆ ಆಮಂತ್ರಿಸಲಾಗುವುದು. ಈ ಸಮಾವೇಶದ ಯಶಸ್ವಿ ಮಾಡುವ ನಿಟ್ಟಿನಲ್ಲಿ ರೂಪರೇಷೆ ಸಿದ್ದಪಡಿಸಲು ಸೂಚನೆ ನೀಡಿದ್ದೇವೆ ಎಂದರು.
ಪೂರ್ವಭಾವಿ ಸಭೆ: ಇದಕ್ಕೂ ಮುನ್ನ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವ ದೇಶಪಾಂಡೆ, ಬೆಳಗಾವಿ ವಿಭಾಗದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಕೂಡಲೇ ತಮ್ಮ ಜಿಲ್ಲೆಗಳ ವಿವಿಧ ಯೋಜನೆಗಳ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಬೇಕು.
ಸರಕಾರದ ಯೋಜನೆಗಳ ಫಲಾನುಭವಿಗಳನ್ನು ಒಂದೆಡೆ ಸೇರಿಸಿ ಸೌಲಭ್ಯಗಳನ್ನು ವಿತರಿಸಬೇಕು ಎಂಬುದು ಮುಖ್ಯಮಂತ್ರಿಗಳ ಆಶಯವಾಗಿದೆ. ಈ ಸಮಾವೇಶ ಸರಕಾರದ ಯೋಜನೆಗಳ ಮೌಲ್ಯಮಾಪನಕ್ಕೂ ಅನುಕೂಲವಾಗಲಿದೆ ಎಂದರು. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತರಾಜ್ ಸಚಿವ ಎಚ್. ಕೆ. ಪಾಟೀಲ ಮಾತನಾಡಿದರು.
ಬೆಳಗಾವಿ ವಿಭಾಗದಲ್ಲಿ ಸುಮಾರು 1500 ಗ್ರಾಮ ಪಂಚಾಯತಿಗಳಿವೆ. ಪ್ರತಿಯೊಂದು ಗ್ರಾಪಂ ವ್ಯಾಪ್ತಿಯ ಫಲಾನುಭವಿಗಳು ಸಮಾವೇಶದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಬೇಕು. ಅಚ್ಚುಕಟ್ಟಾದ ಸಾರಿಗೆ, ಆಹಾರ, ವೇದಿಕೆ ನಿರ್ಮಾಣಕ್ಕೆ ಪ್ರತ್ಯೇಕ ಸಮಿತಿಗಳನ್ನು ರಚಿಸಿ ಸಮಾವೇಶ ಯಶಸ್ವಿಗೊಳಿಸಬೇಕು ಎಂದರು.