Advertisement

ಹರಗಾಪುರ ಕೇಸ್‌ ಗೆ ತಿರುವು: ದರೋಡೆ ಆಗಿದ್ದು 75 ಲಕ್ಷ ರೂ., ಸಿಕ್ಕಿದ್ದು ಒಂದು ಕೋಟಿ ರೂ.!

12:39 PM Nov 19, 2024 | Team Udayavani |

ಉದಯವಾಣಿ ಸಮಾಚಾರ
ಬೆಳಗಾವಿ: ಹುಕ್ಕೇರಿ ತಾಲೂಕಿನ ಹರಗಾಪುರ ಬಳಿ ಕಾರು ಅಡ್ಡಗಟ್ಟಿ ಬಂದೂಕು ತೋರಿಸಿ ದರೋಡೆ ಮಾಡಿದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ದರೋಡೆಯಾಗಿದ್ದು 75 ಲಕ್ಷ ರೂ. ಆದರೆ ಪತ್ತೆ ಆಗಿರುವುದು 1.01 ಕೋಟಿ ರೂ. ಎಂಬುದೇ ವಿಶೇಷ. ನ. 15ರಂದು ಕೊಲ್ಲಾಪುರದಿಂದ ಬರುತ್ತಿದ್ದ ಕಾರನ್ನು ಹರಗಾಪುರ ಬಳಿ ಅಡ್ಡಗಟ್ಟಿದ ಇಬ್ಬರು ದುಷ್ಕರ್ಮಿಗಳು 75 ಲಕ್ಷ ರೂ. ದರೋಡೆ ಮಾಡಿರುವ ಬಗ್ಗೆ ಸಂಕೇಶ್ವರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.

Advertisement

ದೂರು ಕೊಟ್ಟವರ ಮೇಲೆಯೇ ಸಂಶಯ ಬಂದಿದೆ ಎಂದು ಎಸ್‌ ಪಿ ಭೀಮಾಶಂಕರ ಗುಳೇದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.
ಮಹಾರಾಷ್ಟ್ರದ ಸೂರಜ್‌ ಹೊನಮಾನೆ ಎಂಬುವರು ದೂರು ನೀಡಿದ್ದರು. ಆದರೆ ನೇರ್ಲಿ ಬಳಿ ಕಾರು ಪತ್ತೆಯಾಗಿದ್ದು, ಕಾರು ಚಾಲಕ ಆರೀಫ್‌ ಶೇಖ್‌, ಅದರಲ್ಲಿ ಪ್ರಯಾಣಿಸುತ್ತಿದ್ದ ಸೂರಜ್‌ ಹಾಗೂ ಅಜಯ ಸರಗಾರ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ. 75 ಲಕ್ಷ ರೂ. ಕಳುವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಆದರೆ ಕಾರಿನಲ್ಲಿ 1.01 ಕೋಟಿ ರೂ. ಸಿಕ್ಕಿದೆ ಎಂದು ಹೇಳಿದರು.

ಈ ಬಗ್ಗೆ ದೂರು ಕೊಟ್ಟವರನ್ನು ವಿಚಾರಣೆ ನಡೆಸಿದಾಗ, ವ್ಯಾಪಾರಿಯೊಬ್ಬರು ಕೊಟ್ಟ ಹಣ ಎಣಿಕೆ ಮಾಡದೇ ತೆಗೆದುಕೊಂಡು ಬರುತ್ತಿದ್ದೆವು. 75 ಲಕ್ಷ ರೂ. ಇರಬಹುದೆಂದು ಭಾವಿಸಿ ದೂರು ನೀಡಲಾಗಿತ್ತು ಎಂಬ ಹೇಳಿಕೆ ನೀಡಿದ್ದಾರೆ. ತನಿಖೆ ಮುಂದುವರಿದಿದೆ ಎಂದರು.

ಕಾರಿನ ಮುಂಭಾಗದ ಎರಡು ಸೀಟುಗಳ ಮಧ್ಯೆ ಗೇರ್‌ ಬಾಕ್ಸ್‌ ಬಳಿ ವಿನ್ಯಾಸ ಬದಲಿಸಿ ಅದರಲ್ಲಿ ಬಾಕ್ಸ್‌ ಮಾಡಿ ಹಣ ಸಂಗ್ರಹಿಸಿ ಇಡಲಾಗಿತ್ತು. ಹೀಗಾಗಿ ಮೋಟಾರು ವಾಹನಗಳ ಕಾಯ್ದೆಯಡಿ ಕಾರಿನ ಮಾಲೀಕರ ವಿರುದ್ಧ ದೂರು ದಾಖಲಿಸಿದ್ದೇವೆ ಎಂದರು. ದರೋಡೆ ಪ್ರಕರಣ ದಾಖಲಾಗುತ್ತಿದ್ದಂತೆ ಜಿಲ್ಲೆಯಾದ್ಯಂತ ತಕ್ಷಣ ಎಲ್ಲ ಠಾಣೆ ಪೊಲೀಸರಿಗೆ ಮಾಹಿತಿ ನೀಡಿ ಚೆಕ್‌ ಪೋಸ್ಟ್‌ ಹಾಕಲಾಗಿತ್ತು. ಕಾರಿನಲ್ಲಿದ್ದ ಆರೀಫ್‌, ಸೂರಜ್‌, ಅಜೇಯ ಎಂಬ ಮೂವರ ಪೈಕಿ ಇಬ್ಬರ ಮೊಬೈಲ್‌ ಕಾರಿನಲ್ಲಿದ್ದವು.

ಬೆಂಗಳೂರಿನತ್ತ ಕಾರಿನ ಲೋಕೇಷನ್‌ ಇರುವುದು ಪತ್ತೆಯಾಗಿತ್ತು. ಮೊಬೈಲ್‌ ಲೋಕೇಷನ್‌ ಪದೇ ಪದೇ ಬದಲಾಗುತ್ತಿತ್ತು. ಕಾರು ಮಾತ್ರ ಸಿಕ್ಕಿರಲಿಲ್ಲ. ಸಂಜೆ ಹೊತ್ತಿಗೆ ಸ್ಥಳ ತೋರಿಸಿದಾಗ ಅದು ಸಂಕೇಶ್ವರ ಠಾಣೆ ಸರಹದ್ದಿನಲ್ಲಿ ಆಗಿರುತ್ತದೆ. ಒಂದು ಮೊಬೈಲ್‌ ಕಿತ್ತೂರು ಬಳಿ ರಸ್ತೆ ಮೇಲೆ ಮತ್ತೊಂದು ಬಂಕಾಪುರ ಬಳಿ ಸಿಗುತ್ತದೆ. ಪೊಲೀಸರ ದಿಕ್ಕು ತಪ್ಪಿಸಲು ಎರಡು ಮೊಬೈಲ್‌
ಬೇರೆ ಬೇರೆ ಕಡೆಗೆ ಹಾಕಿದ್ದರು. ಇದರ ಹಿಂದೆ ಇನ್ನೊಂದು ಕಾರು, ಕದ್ದ ಕಾರು ಎರಡೂ ಹುಕ್ಕೇರಿ ಕಡೆ ಹೋಗಿರುತ್ತವೆ. ಘಟನೆ ಮಾರನೇ ದಿನ ಕದ್ದ ಕಾರು ಪತ್ತೆಯಾದಾಗ ಇದರಲ್ಲಿ ಒಂದು ಕೋಟಿ ರೂ. ಸಿಕ್ಕಿದೆ ಎಂದರು.

Advertisement

ಮಹಾರಾಷ್ಟ್ರದ ಸಾಂಗಲಿಯ ಭರತ್‌ ಮಾರಗುಡೆ ಎಂಬ ವ್ಯಾಪಾರಿ ಕೇರಳದಲ್ಲಿ ಹಳೆಯ ಚಿನ್ನಾಭರಣಗಳನ್ನು ಮಾರಾಟ ಮಾಡುತ್ತಾರೆ. ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಹಳೆಯ ಚಿನ್ನ ಕಳುಹಿಸುತ್ತಿದ್ದರು. ಇಲ್ಲಿಂದ ಕೇರಳಕ್ಕೆ ಹಣ ಹೋಗುತ್ತಿತ್ತು. ಪ್ರಕರಣದಲ್ಲಿ ಇನ್ನೂ ಕೆಲ ಆರೋಪಿಗಳು ಭಾಗಿಯಾಗಿರುವ ಸಾಧ್ಯತೆ ಇದೆ. ಕೇರಳ, ಮಹಾರಾಷ್ಟ್ರ ಹಾಗೂ ಸ್ಥಳೀಯ ಮಟ್ಟದಲ್ಲಿಯೂ ತನಿಖೆ ನಡೆಸಲಾಗುತ್ತಿದೆ ಎಂದು ಎಸ್‌ಪಿ ಗುಳೇದ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next