Advertisement

Belagavi: ಸಾಂಬ್ರಾದಲ್ಲಿ ವಿಮಾನ ನಿಲ್ದಾಣ ಇದ್ದರೂ ಬಸ್‌ ಇಲ್ಲ

03:26 PM Dec 03, 2023 | Team Udayavani |

ಬೆಳಗಾವಿ: ಸಾಂಬ್ರಾ ಗ್ರಾಮದಲ್ಲಿ ವಿಮಾಣ ನಿಲ್ದಾಣ ಇದ್ದರೂ ಸಮರ್ಪಕ ಬಸ್‌ ವ್ಯವಸ್ಥೆ ಇಲ್ಲದ್ದನ್ನು ಖಂಡಿಸಿ ಗ್ರಾಮದ ವಿದ್ಯಾರ್ಥಿಗಳು ಹಾಗೂ ಬಿಜೆಪಿ ಮುಖಂಡರು ಶನಿವಾರ ಬೆಳಗಾವಿ-ಬಾಗಲಕೋಟೆ ರಾಜ್ಯ ಹೆದ್ದಾರಿ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು.

Advertisement

ಸಾಂಬ್ರಾ ಗ್ರಾಮದಿಂದ ವಿದ್ಯಾರ್ಥಿಗಳು ಬೆಳಗಾವಿಗೆ ಶಾಲೆ-ಕಾಲೇಜಿಗೆ ನಿತ್ಯ ತೆರಳುತ್ತಾರೆ. ಆದರೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರಿಯಾದ ಬಸ್‌ಗಳಿಲ್ಲದೇ ಪರದಾಡುವಂತಾಗಿದೆ. ಈ ಬಗ್ಗೆ ಅನೇಕ ಬಾರಿ ಸಾರಿಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಸಾಂಬ್ರಾ ಗ್ರಾಮಕ್ಕೆ ಬಸ್‌ ಬಿಡುತ್ತಿಲ್ಲ. ಬಸ್‌ ಇಲ್ಲದೇ ವಿದ್ಯಾರ್ಥಿಗಳು ನಿತ್ಯ ತೊಂದರೆ ಅನುಭವಿಸುವಂತಾಗಿದೆ ಎಂದು
ಆರೋಪಿಸಿದರು.

ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಧನಂಜಯ ಜಾಧವ ಮಾತನಾಡಿ, ಕಾಂಗ್ರೆಸ್‌ ಸರ್ಕಾರ ಯುವಕರಿಗೆ ನೀಡಿದ ಭರವಸೆಯೂ ವಿಫಲವಾಗಿದೆ. ಉಚಿತ ಬಸ್‌ ಪ್ರಯಾಣದ ಯೋಜನೆ ಜನತೆಗೆ ತಲೆನೋವಾಗಿ ಪರಿಣಮಿಸಿದೆ. ಸಾಂಬ್ರಾ ಗ್ರಾಮದಲ್ಲಿ ವಿದ್ಯಾರ್ಥಿಗಳು ಬೆಳಗ್ಗೆ 9ಕ್ಕೆ ಬಸ್‌ ನಿಲ್ದಾಣಕ್ಕೆ ಬಂದು ಕಾದು ಕುಳಿತರೂ ಸಮಯಕ್ಕೆ ಸರಿಯಾಗಿ ಶಾಲೆ ತಲುಪುತ್ತಿಲ್ಲ. ಸಂಜೆ 5 ಗಂಟೆಗೆ ಶಾಲೆ ಬಿಟ್ಟರೂ ಮನೆಗೆ ವಾಪಸ್‌ ಹೋಗಲು ರಾತ್ರಿ 8 ಗಂಟೆ ಆಗುತ್ತಿದೆ. ವಿದ್ಯಾರ್ಥಿಗಳ ನೋವು ಕೇಳುವವರು
ಯಾರೂ ಇಲ್ಲವಾಗಿದ್ದಾರೆ. ನಿತ್ಯ ನಾಲ್ಕು ಬಸ್‌ಗಳನ್ನು ಸಾಂಬ್ರಾ ಗ್ರಾಮಕ್ಕೆ ಬಿಡುವಂತೆ ಆಗ್ರಹಿಸಿದರು.

ರಾಜ್ಯದಲ್ಲಿ ಜನರಿಗೆ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಜನರನ್ನು ಮೂರ್ಖರನ್ನಾಗಿಸುತ್ತಿದೆ. ಕಾಂಗ್ರೆಸ್‌ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲವಾಗಿದೆ. ಬಿಜೆಪಿ ಅವಧಿಯಲ್ಲಿದ್ದ 19 ಜನೋಪಯೋಗಿ ಯೋಜನೆಗಳನ್ನು ಕಾಂಗ್ರೆಸ್‌ ಸರ್ಕಾರ ಅಧಿ ಕಾರಕ್ಕೆ ಬಂದ ಬಳಿಕ ರದ್ದುಗೊಳಿಸಿದೆ. ರೈತರಿಗೆ ರಾಜ್ಯ ಸರ್ಕಾರ ನೀಡಬೇಕಿದ್ದ 4 ಸಾವಿರ ರೂ. ಪರಿಹಾರವನ್ನೂ ರದ್ದುಗೊಳಿಸಿದೆ. ರೈತರ ಮಕ್ಕಳ ಪರಿಹಾರಧನ ಸ್ಥಗಿತ, ವಿದ್ಯುತ್‌ ಇಲ್ಲದ ಕಾರಣ ಲೋಡ್‌ ಶೆಡ್ಡಿಂಗ್‌ ಆಗುತ್ತಿದೆ ಎಂದು
ವಾಗ್ಧಾಳಿ ನಡೆಸಿದರು.

ವಿದ್ಯಾರ್ಥಿಗಳಾದ ಸ್ವಾತಿ ಜೂಯಿ, ಸೋನಾಲಿ ಚೌಗುಲೆ, ತುಷಾರ್‌ ನಾಗಣ್ಣ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಮಾತನಾಡಿ, ಸಾಂಬ್ರಾ ಗ್ರಾಮದಲ್ಲಿ ಬಸ್‌ ಇಲ್ಲದೇ ಪರದಾಡುತ್ತಿದ್ದೇವೆ. ಹೀಗಾದರೆ ಶಾಲೆ-ಕಾಲೇಜಿಗೆ ಹೋಗುವುದಾದರೂ ಹೇಗೆ?. ಸಾಂಬ್ರಾದಲ್ಲಿ ವಿಮಾನ ನಿಲ್ದಾಣ ಇಲ್ಲದರೂ ಬಸ್‌ ಇಲ್ಲದಿರುವುದು ನಮ್ಮ ದುರ್ದೈವ ಎಂದು ಅಳಲು ತೋಡಿಕೊಂಡರು.

Advertisement

ಈ ವೇಳೆ ಮುಖಂಡರಾದ ವಿಕ್ರಮ ಸೋಂಜಿ, ಮಲ್ಲಪ್ಪ ಕಾಂಬಳೆ, ಸಾಂಬ್ರಾ ಗ್ರಾಪಂ ಅಧ್ಯಕ್ಷೆ ರಚನಾ ಗಾವಡೆ, ಉಪಾಧ್ಯಕ್ಷ ಮಾರುತಿ ಜೋಗಾನಿ, ಗ್ರಾಪಂ ಸದಸ್ಯರಾದ ಪುಂಡಲೀಕ ಜತ್ರಾಟಿ, ಅವಿನಾಶ ಪರೀಟ, ಧರ್ಮೇಂದ್ರ  ತಳವಾರ, ಕಲ್ಲಪ್ಪ ಪಾಲಕರ, ವಿಲಾಸ ಖನಗಾಂವಕರ, ಮನೋಹರ ಜೂಯಿ, ರಾಹುಲ್‌ ಗಾವಡೆ, ಶಶಿ ಕೋಕಿತಕರ, ಪ್ರಭಾತ್‌ ಯದ್ದಿ, ಶಾಂತಾ ದೇಸಾಯಿ, ಶ್ವೇತಾ ಬಮ್ಮನವಾಡಿ, ಸಪ್ನಾ ತಳವಾರ, ಲಕ್ಷ್ಮೀ ದೇಸಾಯಿ, ಕಲ್ಲವ್ವ ಕರೇಗಾರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next