ಬೆಳಗಾವಿ: ಹುಬ್ಬಳ್ಳಿಯ ನೇಹಾ ಹಿರೇಮಠ ಮತಾಂತರವಾಗಲು ಒಪ್ಪದಿದ್ದಕ್ಕೆ ಹತ್ಯೆಯಾಗಿದೆ. ಈ ಪ್ರಕರಣಕ್ಕೆ ಸರಿಯಾಗಿ ನ್ಯಾಯ ಸಿಗಬೇಕು ಎಂದರೆ ಸಿಬಿಐಗೆ ವಹಿಸಬೇಕು. ಆಗ ಅನ್ಯಾಯ ಮಾಡಿದವರನ್ನು ತಲೆ ಕೆಳಗೆ ಮಾಡಿ ತಕ್ಕ ಶಾಸ್ತಿ ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಡುಗಿದರು.
ಹುಕ್ಕೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರ ಮಾತನಾಡಿದ ಅಮಿತ್ ಶಾ, ನೇಹಾ ಪ್ರಕರಣವನ್ನು ಭಾಷಣದಲ್ಲಿ ಉಲ್ಲೇಖಿಸಿದರು.
ನೇಹಾ ಹಿರೇಮಠ ಕೇಸ್ ವೈಯಕ್ತಿಕ ವಿಚಾರ ಅಂತ ಕಾಂಗ್ರೆಸ್ ನವರು ಹೇಳಿದ್ದರು. ಇದು ವೈಯಕ್ತಿಕ ಅಲ್ಲ. ಮತಾಂತರ ಆಗದ್ದಕ್ಕೆ ಕೊಲೆಯಾಗಿದೆ ಎಂದು ಹೇಳಿದರು.
ಕಾಂಗ್ರೆಸ್-ಎಸ್ ಡಿಪಿಐ ಸಖ್ಯ: ಮೋದಿಯವರು ಈ ದೇಶಕ್ಕೆ ಅಂಟಿದ್ದ ಭಯೋತ್ಪಾದನೆ ನಿರ್ಮೂಲನೆ ಮಾಡಿದರು. ಕರ್ನಾಟಕದ ಕಾಂಗ್ರೆಸ್ ಸರ್ಕಾರ ಎಸ್‌ಡಿಪಿಐ ಸಮರ್ಥನೆ ಮಾಡಿಕೊಳ್ಳುತ್ತಿದೆ. ಎಸ್‌ಡಿಪಿಐ ಸಹಕಾರ ಪಡೆದು ಕಾಂಗ್ರೆಸ್ ಚುನಾವಣೆ ಎದುರಿಸುತ್ತಿದೆ. ಬೆಂಗಳೂರಿನಲ್ಲಿ ಬಾಂಬ್ ಸ್ಟೋಟಗೊಂಡರೆ ಗ್ಯಾಸ್ ಸಿಲಿಂಡರ್ ಸ್ಪೋಟ ಅಂತ ವಾದಿಸಿತ್ತು. ಎನ್ಐಎ ತಂಡ ಬಂದು ಎಸ್‌ಡಿಪಿಐ ಅವರೇ ಬ್ಲಾಸ್ಟ್ ಮಾಡಿದ್ದು ಎಂದು ಸತ್ಯ ಹೊರ ಹಾಕಿದೆ. ನೀವು ಚಿಂತೆ ಮಾಡಬೇಡಿ ಕಾಂಗ್ರೆಸ್ ಸರ್ಕಾರ ಎನೇ ಮಾಡಲಿ, ನೀವು ಅಣ್ಣಾಸಾಹೇಬ ಜೊಲ್ಲೆಗೆ ಮತ ನೀಡಿ ಅವರನ್ನು ಗೆಲ್ಲಿಸಿ. ಮತ್ತೊಮ್ಮೆ ಮೋದಿಯನ್ನು ಪ್ರಧಾನಿ ಮಾಡಿ, ಮೋದಿಯವರು ಕರ್ನಾಟಕವನ್ನು ರಕ್ಷಣೆ ಮಾಡುತ್ತಾರೆ ಎಂದು ಶಾ ಹೇಳಿದರು.
ಸಚಿವ ಸತೀಶ್ ಜಾರಕಿಹೊಳಿ ಹೆಸರು ಉಲ್ಲೇಖಿಸದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಶಾ, ಕಾಂಗ್ರೆಸ್ ಅಭ್ಯರ್ಥಿಯ ತಂದೆ ಅನಧಿಕೃತವಾಗಿ ಗಣಿಗಾರಿಕೆ ಮಾಡುತ್ತಾರೆ. ಅವರ ಕುಟುಂಬಸ್ಥರು ಗುಡ್ಡ ಕಡಿದು ಜಾಗ ಕಬಳಿಕೆ ಮಾಡಿದ್ದಾರೆ. ಹಿಂದೂ ಸಂಸ್ಕೃತಿ ಹಾಗೂ ಹಿಂದೂ ಮಹಾನ್ ನಾಯಕರ ಅಪಮಾನಿಸುತ್ತಾರೆ. ಶಿವಾಜಿ ಮಹಾರಾಜ ಮತ್ತು ಸಂಭಾಜಿ ಮಹಾರಾಜರ ಬಗ್ಗೆ ಕೆಟ್ಟದಾಗಿ ಮಾತಾಡ್ತಾರೆ.ಕಳ್ಳಬಟ್ಟಿ ಸಾರಾಯಿ ತಯಾರಿಸುವವರು ಇವರ ಜೊತೆಗಿದ್ದಾರೆ. ಸಾವಿರಾರು ಎಕರೆ ಜಮೀನುಗಳನ್ನು ಕಬ್ಜಾ ಮಾಡಿದ್ದಾರೆ.ಕಮಿಷನ್ ಪಡೆಯಲು ಅವರ ಏಜೆಂಟರು ನಿರತರಾಗಿದ್ದಾರೆ ಎಂದು ಜಾರಕಿಹೊಳಿ ಕುಟುಂಬದ ವಿರುದ್ಧ ಗಂಭೀರ ಆರೋಪ ಮಾಡಿದರು.