ಬೆಳಗಾವಿ: ಬಿಎಸ್ ಯಡಿಯೂರಪ್ಪ ಸರ್ಕಾರ ಅಧಿಕಾರದಲ್ಲಿದ್ದಾಗ ನೆರೆ ಬಂದಿತ್ತು. ಬಡವರ ಮನೆ, ರೈತರ ಬೆಳೆ ನಾಶವಾಗಿತ್ತು. ಪ್ರತಿ ಹೆಕ್ಟೇರ್ 14 ಸಾವಿರ ಹಾಗೂ ಮನೆ ಕಳೆದುಕೊಂಡವರಿಗೆ ತಲಾ ಐದು ಲಕ್ಷ ಪರಿಹಾರ ಕೊಟ್ಟರು. ಇದೀಗ ರಾಜ್ಯದಲ್ಲಿ ಎಂಟು ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಸಿಎಂ ಭಿಕ್ಷೆ ಕೊಡುವ ರೀತಿಯಲ್ಲಿ ಎರಡು ಸಾವಿರ ಬರ ಪರಿಹಾರ ಕೊಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅಧಿಕಾರ ಸ್ಥಗಿತಗೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು.
ಬಾಳೇಕುಂದ್ರಿ ಕೆ ಎಚ್ ಗ್ರಾಮದ ಸಮಾವೇಶದಲ್ಲಿ ಮಾತನಾಡಿದ ಅವರು, ಯಾವುದೇ ಚುನಾವಣೆ ಪ್ರಚಾರಕ್ಕೆ ಹೋದಾಗ ಪುರುಷರೇ ಹೆಚ್ಚು ಇರ್ತಾರೆ. ಈ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದು ಖುಷಿ ತಂದಿದೆ.
ಸಂಕಲ್ಪ ಮಾಡಿ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ರಾಜ್ಯದ 28 ಸಂಸದರು ಮೋದಿ ಕೈ ಬಲಪಡಿಸಬೇಕು ಇದು ನನ್ನ ಸಂಕಲ್ಪ ಎಂದರು.
ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಸಂಕಲ್ಪ ಪತ್ರ ಬಿಡುಗಡೆ ಸಂದರ್ಭದಲ್ಲಿ ದೇಶವನ್ನು ‘ರುಕನೆ, ಜುಕನೆ’ ನಹಿ ದೂಂಗಾ ಎಂದಿದ್ದಾರೆ. ಒಂದೇ ಒಂದು ಭ್ರಷ್ಟಾಚಾರದ ಆರೋಪ ಪ್ರಧಾನಿ ಮೇಲೆ ಇಲ್ಲ. 2014ರ ಮೊದಲು ದೇಶಕ್ಕೆ ಭವಿಷ್ಯ ಇಲ್ಲ ಎಂದು ಹೇಳುತ್ತಿದ್ದರು. ಭ್ರಷ್ಟಾಚಾರ ರಹಿತ ಆಡಳಿತ ಮಾಡಲು ಸಾಧ್ಯವಿದೆ ಎಂದು ಮೋದಿ ತೋರಿಸಿದ್ದಾರೆ. ಜಗತ್ತಿನ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಿದೆ. ಒಂದು ದಿನವು ರಜೆ ತೆಗೆದುಕೊಳ್ಳದೇ ಪ್ರಧಾನಿ ಕೆಲಸ ಮಾಡಿದ್ದಾರೆ. ಪ್ರಧಾನಿ ತಾಯಿ ಮೃತಪಟ್ಟ ಸಂದರ್ಭದಲ್ಲಿ ಅಂತ್ಯಕ್ರಿಯೆ ಮಾಡಿ ಮತ್ತೆ ದೇಶದ ಅಭಿವೃದ್ಧಿಯ ಬಗ್ಗೆ ಪ್ರಧಾನಿ ಕೆಲಸ ಮಾಡಿದ್ದರು. ದೇಶದ ಕಲಂ 370ನ್ನು ತೆಗೆದು ಹಾಕುವ ದಿಟ್ಟ ಕೆಲಸ ಬಿಜೆಪಿ ಮಾಡಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.