ಬೆಳಗಾವಿ: ದೇಶದಲ್ಲಿ ಆಹಾರ ಸಂಸ್ಕರಣಾ ಉದ್ದಿಮೆಗೆ ವಿಫುಲ ಅವಕಾಶಗಳಿವೆ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡರೆ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೇಡಿಕೆ ಮತ್ತು ತಕ್ಕ ಬೆಲೆ ಸಿಗಲು ಸಾಧ್ಯ ಎಂದು ಜಿಪಂ ಸಿಇಒ ರಾಮಚಂದ್ರನ್ ಆರ್. ಅಭಿಪ್ರಾಯಪಟ್ಟರು. ಉದ್ಯಮಬಾಗದಲ್ಲಿರುವ ಬೆಳಗಾವಿ ಫೌಂಡ್ರಿ ಕ್ಲಸ್ಟರ್ ಸಭಾಭವನದಲ್ಲಿ ಮಂಗಳವಾರ ಕೃಷಿ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ನಡೆದ ಆಹಾರ ಸಂಸ್ಕರಣೆ ಉತ್ತೇಜನಕ್ಕೆ ಇರುವ ಯೋಜನೆಗಳು ಮತ್ತು ಸಹಾಯಧನ ಸೌಲಭ್ಯಗಳು ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಆಹಾರ ಸಂಸ್ಕರಣೆ ಉದ್ಯಮ ಪ್ರೋತ್ಸಾಹಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭಾರೀ ಪ್ರಮಾಣದಲ್ಲಿ ಸಹಾಯಧನ ನೀಡುತ್ತಿವೆ. ಮೆಗಾ ಫುಡ್‌ಪಾರ್ಕ್ ಸ್ಥಾಪನೆಗೆ 50 ಕೋಟಿ ರೂ.ವರೆಗೆ ಸಹಾಯಧನ ನೀಡುತ್ತಿರುವುದು ಇದಕ್ಕೆ ಸಾಕ್ಷಿ. ಹೀಗಾಗಿ ರೈತರೂ ಆಹಾರ ಸಂಸ್ಕರಣಾ ಉದ್ದಿಮೆ ಆರಂಭಿಸುವ ಮೂಲಕ ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಹಾಯಧನ ಸದ್ಬಳಕೆ ಆಗಲಿ ಎಂಬ ಉದ್ದೇಶಕ್ಕೆ ಸರ್ಕಾರ ಹಲವಾರು ಷರತ್ತು ವಿಧಿಸಿದೆ. ಆದರೆ ಸಂಬಂಧಪಟ್ಟ ಇಲಾಖೆ ಅಧಿ ಕಾರಿಗಳು ನಿಯಮಗಳನ್ನು ಸರಳಗೊಳಿಸಿ ರೈತ ಉದ್ದಿಮೆದಾರರನ್ನು ಪ್ರೋತ್ಸಾಹಿಸಬೇಕು. ರಾಸಾಯನಿಕ ಮಿತಿಮೀರಿ ಬಳಕೆ ಮಾಡಿರುವುದರಿಂದ ಮಣ್ಣಿನ ಫಲವತ್ತತೆ ನಾಶವಾಗಿದ್ದು, ಇದೀಗ ಸಾವಯವ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದೆ. ರೈತರು ಇದನ್ನು ಅರಿತು ಆಹಾರ ಸಂಸ್ಕರಣಾ ಉದ್ಯಮ ಆರಂಭಿಸಬೇಕು ಎಂದರು. ಸರ್ಕಾರಿ ಯೋಜನೆಗಳ ಮಾಹಿತಿ ಕೊರತೆಯಿಂದ ಸೌಲಭ್ಯ ಪಡೆದುಕೊಳ್ಳಲು ಜನರು ಮುಂದೆ ಬರುತ್ತಿಲ್ಲ. ಅಧಿಕಾರಿಗಳು ಅರ್ಹ ರೈತರು ಮತ್ತು ಸಾರ್ವಜನಿಕರಿಗೆ ಸರ್ಕಾರಿ ಯೋಜನೆಗಳ ಮಾಹಿತಿ ತಲುಪಿಸಬೇಕು ಎಂದರು.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಪರ ನಿರ್ದೇಶಕ ಮಹಾಂತೇಶ ಕರೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೃಷಿ, ಕೈಗಾರಿಕೆ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿದರೆ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನ ಸಾಧ್ಯವಾಗಲಿದೆ ಎಂದು ಹೇಳಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಲಾನಿ ಮೊಖಾಶಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡಬಸವರಾಜ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರವೀಂದ್ರ ಹಕಾಟಿ, ಕೃಷಿ ಇಲಾಖೆ ಉಪನಿರ್ದೇಶಕ ಸಲೀಂ, ಗ್ಲೋಬಲ್ ಸಂಸ್ಥೆಯ ರಾವಸಾಹೇಬ್ ಮೋಹಿತೆ, ಚಂದ್ರಕುಮಾರ ಸೇರಿದಂತೆ ಇತರರು ಇದ್ದರು. ವಿವಿಧ ತಾಂತ್ರಿಕ ಗೋಷ್ಠಿಗಳು ನಡೆದವು. ಜಿಲ್ಲೆಯ ವಿವಿಧ ಭಾಗಗಳಿಂದ ರೈತರು, ಆಹಾರ ಸಂಸ್ಕರಣೆಯ ಉದ್ದಿಮೆದಾರರು ಹಾಗೂ ಉದ್ಯಮಾಸಕ್ತರು ಪಾಲ್ಗೊಂಡಿದ್ದರು.