Advertisement

ತಾಲೂಕು ಕೇಂದ್ರವೇ ಅಭಿವೃದ್ಧಿಯಲ್ಲಿ ಹಿಂದೆ

12:40 PM Feb 14, 2017 | |

ಎಚ್‌.ಡಿ.ಕೋಟೆ: ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ಧಿಯ ಹೆಸರಿನಲ್ಲಿ ಸರ್ಕಾರ ಕೋಟ್ಯಂತರ ಅನುದಾನದ ಹೊಳೆಯನ್ನೇ ಹರಿಸುತ್ತಿದೆ ಯಾದರೂ ಎಚ್‌.ಡಿ.ಕೋಟೆ ತಾಲೂಕು ಕೇಂದ್ರ ಸ್ಥಾನದ ರಸ್ತೆಗಳು ಇಂದಿಗೂ ಅಭಿವೃದ್ಧಿ ಕಂಡಿಲ್ಲ. 

Advertisement

ತಾಲೂಕಿನ ಗ್ರಾಮೀಣ ಪ್ರದೇಶಗಳ ಜನ ನಿಭಿಡ ಪ್ರದೇಶಗಳ ಸಾರ್ವಜನಿಕ ರಸ್ತೆಗಳು ಡಾಂಬರೀ ಕರಣಗೊಂಡಿವೆ, ಡಾಂಬರೀಕರಣ ಗೊಳ್ಳುತ್ತಿರುವುದು ಬಹುತೇಕ ಗ್ರಾಮೀಣ ಪ್ರದೇಶಗಳ ಜನತೆಯ ಹರ್ಷಕ್ಕೆ ಕಾರಣವಾಗುತ್ತಿದೆ. ಆದರೂ ತಾಲೂಕು ಕೇಂದ್ರ ಸ್ಥಾನ ಎನಿಸಿಕೊಂಡಿರುವ ಎಚ್‌.ಡಿ.ಕೋಟೆ ಪಟ್ಟಣ ಮಾತ್ರ ಇಂದಿಗೂ ಸಾರ್ವಜನಿಕ ರಸ್ತೆಗಳು, ಬೀದಿ ದೀಪ, ಕುಡಿಯುವ ನೀರು ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿ ನಿವಾಸಿಗರು ಪರಿತಪಿಸುವಂತೆ ಮಾಡಿದೆ.

ಎಚ್‌.ಡಿ. ಕೋಟೆ ತಾಲೂಕು ಕೇಂದ್ರ ಸ್ಥಾನದ ಹೌಸಿಂಗ್‌ ಬೋರ್ಡ್‌ ಬಡಾವಣೆಯ ಬಹುತೇಕ ರಸ್ತೆಗಳು, ವಿಶ್ವನಾಥಯ್ಯ ಕಾಲೋನಿ, ಸ್ಟೇಡಿಯಂ ಬಡಾವಣೆ, ಮುಸ್ಲಿಂ ಬ್ಲಾಕ್‌ ಸೇರಿದಂತೆ ಇನ್ನಿತರ ಬಡಾವಣೆಗಳ ರಸ್ತೆಗಳು ಡಾಂಬರು ಅಥವಾ ಕಾಂಕ್ರೀಟ್‌ ಕಾಣದೆ ಹಳ್ಳಕೊಳ್ಳಗಳಿಂದ ಆವೃತ್ತವಾಗಿ ಸಂಚಾರಕ್ಕೆ ಸಂಚಕಾರ ಒದಗಿಸುವಂತಿದೆ.

ಕಲ್ಲು ಮಣ್ಣಿನ ರಸ್ತೆಗಳು: ಹೌಸಿಂಗ್‌ ಬೋರ್ಡ್‌ ಬಡಾವಣೆ, ಸ್ಟೇಡಿಯಂ ಬಡಾವಣೆ ಸೇರಿದಂತೆ ವಿಶ್ವನಾಥಯ್ಯ ಕಾಲೋನಿಯ ಬಹುತೇಕ ರಸ್ತೆಗಳು ಡಾಂಬರೀಕರಣಗೊಳ್ಳದೇ ಕಲ್ಲು ಮಣ್ಣಿನಿಂದ ಆವೃತ್ತವಾಗಿವೆ. ಚರಂಡಿ ವ್ಯವಸ್ಥೆ ಇಲ್ಲ, ನಿತ್ಯ ಬಳಕೆಯ ಕಲುಷಿತ ನೀರು ಮುಂದೆ ಹರಿದು ಹೋಗಲು ಜಾಗ ಇಲ್ಲದೆ ನಿಂತಲ್ಲೇ ನಿಂತು ಕೊಳೆತು ನಾರುತ್ತಾ ಸಾಂಕ್ರಮಿಕ ರೋಗಗಳ ಅವಾಸ ಸ್ಥಾನವಾಗಿದೆ. ಆದರೂ ಶುಚಿತ್ವಕ್ಕೆ ಆದ್ಯತೆ ನೀಡಿಲ್ಲ.

ಡಾಂಬರು ಇಲ್ಲವೆ ಕಾಂಕ್ರಿಟ್‌ ವಂಚಿತ ರಸ್ತೆಗಳ ತುಂಬೆಲ್ಲ ಧೂಳು ಶೇಖರಣೆಯಾಗಿ ವಾಹನಗಳು ಸಂಚರಿಸುತ್ತಿದ್ದಂತೆಯೇ ಇಡೀ ರಸ್ತೆ ಧೂಳುಮಯವಾಗುತ್ತಿದೆ. ಇದರಿಂದ ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣ ಬೀರುತ್ತಿದೆ. ಗ್ರಾಮೀಣ ಪ್ರದೇಶಗಳಿಗೆ ಎಚ್‌.ಡಿ.ಕೋಟೆ ತಾಲೂಕು ಕೇಂದ್ರ ಹೋಲಿಕೆ ಮಾಡಿದಾಗ ಮೂಲಭೂತ ಸೌಕರ್ಯ ಸೇರಿದಂತೆ ರಸ್ತೆ ಅಭಿವೃದ್ಧಿ ಕಾರ್ಯದಲ್ಲಿ ಹಿಂದಿದೆ. ಕಲ್ಲುಮಣ್ಣು ರಸ್ತೆ ಮಾರ್ಗವಾಗಿ ಸಾರ್ವಜನಿಕರು ಸಂಚರಿಸುವುದೇ ಕ್ಲಿಷ್ಟಕರವಾಗಿದೆ.

Advertisement

ಬೀದಿ ದೀಪ ಇಲ್ಲ: ಸ್ಟೇಡಿಯಂ ಬಡಾವಣೆ ಸೇರಿದಂತೆ ಡ್ರೈವರ್ ಕಾಲೋನಿ ಇನ್ನಿತರ ಬಡಾವಣೆಗಳಲ್ಲಿ ಸರಿಯಾದ ಬೀದಿ ದೀಪಗಳ ವ್ಯವಸ್ಥೆ ಇಲ್ಲ. ರಸ್ತೆ ಬದಿಗಳ ವಿದ್ಯುತ್‌ ಕಂಬಗಳಿಗೆ ಅಳವಡಿಸಿರುವ ಬೀದಿ ದೀಪಗಳು ಬೆಳಕು ಚೆಲ್ಲದೇ ರಾತ್ರಿ ಪೂರ್ತಿ ಕತ್ತಲ್ಲಲ್ಲಿ ನಿವಾಸಿಗರು ಕಾಲ ಕಳೆಯಬೇಕಿದೆ. ಈ ಬಗ್ಗೆ ಸ್ಥಳೀಯ ಪುರಸಭೆಯಿಂದ ಬೀದಿದೀಪ ನಿರ್ವಹಣೆ ಟೆಂಡರ್‌ ಪಡೆದಿರುವ ಗುತ್ತಿಗೆದಾರರಲ್ಲಿ ದೂರ ಹೇಳಿಕೊಂಡರೆ ಪ್ರಯೋಜನ ವಾಗುತ್ತಿಲ್ಲ. ಅಲ್ಲದೆ ವೋಲ್ಟೆಜ್‌ ಕಡಿಮೆ ಅನ್ನುವ ಹಾರಿಕೆ ಉತ್ತರ ನೀಡಿ ವಿದ್ಯುತ್‌ ದೀಪಗಳನ್ನು ದುರಸ್ತಿಗೊಳಿಸದೇ ಮೌನವಾಗಿದ್ದಾರೆ. ಆದರೂ ಪುರಸಭಾ ಆಡಳಿತ ಮಂಡಳಿ ಯಾವುದೇ ಚಕಾರ ಎತ್ತುತ್ತಿಲ್ಲ.

ಇನ್ನಾದರೂ ಸಂಬಂಧ ತಾಲೂಕಿನ ಶಾಸಕರು, ಸ್ಥಳೀಯ ಪುರಸಭೆ ಸೇರಿದಂತೆ ತಾಲೂಕು ಅಧಿಕಾರಿಗಳು ಮೊದಲು ಪಟ್ಟಣದ ಕಲ್ಲುಮಣ್ಣಿನ ರಸ್ತೆಗಳನ್ನು ಕಾಂಕ್ರಿಟ್‌ ಇಲ್ಲವೆ ಡಾಂಬರೀ ಕರಣ ಗೊಳಿಸಬೇಕು ಹಾಗೂ ಪಟ್ಟಣದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯತ್ತ ಗಮನ ಹರಿಸಿ ತಾಲೂಕು ಕೇಂದ್ರದ ಅಭಿವೃದ್ಧಿ ಜೊತೆಗೆ ಸಾರ್ವ ಜನಿಕರ ಮೂಲ ಸೌಕರ್ಯ ಒದಗಿಸಲು ಮುಂದಾಗ ಬೇಕು ಅನ್ನುವುದು ಸ್ಥಳೀಯರ ಒತ್ತಾಯ.

25 ವರ್ಷಗಳಿಂದ ವಿಶ್ವನಾಥ ಬಡಾವಣೆಯಲ್ಲಿ ವಾಸವಾಗಿದ್ದೇನೆ. ಇಲ್ಲಿನ ಚರಂಡಿ ಮತ್ತು ರಸ್ತೆ ಸರಿ ಇಲ್ಲ. ಇದರಿಂದ ಸೊಳ್ಳೆ ಕಾಟ ವಿಪರೀತ ವಾಗಿದೆ. ಈ ಬಗ್ಗೆ ಪುರಸಭೆಗೆ ಮೌಖೀಕ ಹಾಗೂ ಲಿಖೀತ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ರಸ್ತೆ, ದೀಪ, ಚರಂಡಿ ವ್ಯವಸ್ಥೆ ಅಭಿವೃದ್ಧಿಪಡಿಸಬೇಕು.
-ಕಾಳಾಚಾರಿ, ವಿಶ್ವನಾಥ್‌ ಕಾಲೋನಿ ನಿವಾಸಿ

ಈ ಹಿಂದೆ ಪಟ್ಟಣ ಪಂಚಾಯಿತಿ ಆಗಿದ್ದರಿಂದ 5 ಕೋಟಿ ರೂ. ಮಾತ್ರ ಅನುದಾನ ಬರುತ್ತದೆ. ಆದರೀಗ ಪುರ ಸಭೆ ಆಗಿರುವುದರಿಂದ 7.50 ಕೋಟಿ ರೂ. ಅನುದಾನ ಲಭ್ಯವಾಗುತ್ತಿದೆ. ಅಲ್ಲದೆ ವಿಶ್ವನಾಥ ಕಾಲೋನಿ, ಸ್ಟೇಡಿಯಂ ಬಡಾವಣೆ, ಹೌಸಿಂಗ್‌ ಬೋರ್ಡ್‌ ಬಡಾವಣೆಗಳಲ್ಲಿನ ಮೂಲ ಸೌಕರ್ಯಕ್ಕೆ ಆದ್ಯತೆ ನೀಡುವಂತೆ ಶಾಸಕರು ಸೂಚನೆ ನೀಡಿದ್ದಾರೆ. ಅದ್ದರಿಂದ ಅತಿ ಶೀಘ್ರದಲ್ಲಿ ರಸ್ತೆ, ಚರಂಡಿ, ವಿದ್ಯುತ್‌ ದೀಪದ ಅಳವಡಿಕೆ ಮಾಡಲಾಗುತ್ತದೆ.
-ವಿಜಯ್‌ಕುಮಾರ, ಮುಖ್ಯಾಧಿಕಾರಿ, ಪುರಸಭೆ

* ಎಚ್‌.ಬಿ.ಬಸವರಾಜು

Advertisement

Udayavani is now on Telegram. Click here to join our channel and stay updated with the latest news.

Next