ಹಾಸನ: ಬಿತ್ತನೆ ಆಲೂಗಡ್ಡೆ ಮಾರಾಟ ಹಾಸನ ಎಪಿಎಂಸಿ ಪ್ರಾಂಗಣದಲ್ಲಿ ಸೋಮವಾರ ವಿಧ್ಯುಕ್ತವಾಗಿ ಆರಂಭವಾಯಿತು. ಮೊದಲ ದಿನ ಆಲೂಗಡ್ಡೆ ಖರೀದಿಗೆ ಸಡಗರದಿಂದ ಬಂದ ರೈತರು ಸುಮಾರು 100 ಲಾರಿ ಲೋಡ್ ಆಲೂಗಡ್ಡೆ ಖರೀದಿಸಿ ಕೊಂಡೊಯ್ದರು. ಆಲೂಗೆಡ್ಡೆ ಬಿತ್ತನೆ ಬೀಜ ಮಾರಾಟಕ್ಕೆ ಜಿಲ್ಲಾಧಿಕಾರಿ ಆರ್.ಗಿರೀಶ್, ಎಸ್ಪಿ ಶ್ರೀನಿವಾಸ ಗೌಡ, ಹಾಸನ ಎಪಿಎಂಸಿ ಅಧ್ಯಕ್ಷ ಮಂಜೇ ಗೌಡ ಹಾಗೂ ಆಲೂಗೆಡ್ಡೆ ವರ್ತಕರ ಸಂಘದ ಅಧ್ಯಕ್ಷ ಗೋಪಾಲ್ ಪೂಜೆ ಸಲ್ಲಿಸುವ ಮೂಲಕ ಬಿತ್ತನೆ ಆಲೂಗಡ್ಡೆ ಮಾರಾಟಕ್ಕೆ ಚಾಲನೆ ನೀಡಿದರು.
13 ಸಾವಿರ ಟನ್ ಬಿತ್ತನೆ ಆಲೂಗಡ್ಡೆ ದಾಸ್ತಾನು: ಈ ಸಂದರ್ಭದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಆರ್. ಗಿರೀಶ್ , ಬಿತ್ತನೆ ಬೀಜದ ಗರಿಷ್ಠ ಬೆಲೆಯನ್ನು ನಿಗದಿ ಮಾಡಲಾಗಿದೆ. 2,150 ರೂ. ನಿಂದ 2,250 ರೂ.ಗಳ ವರೆಗೆ ಬೆಲೆ ನಿಗದಿ ಪಡಿಸ ಲಾಗಿದೆ. ಜಿಲ್ಲೆಯಲ್ಲಿ ಸುಮಾರು 15ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯ ಲಾಗುತ್ತದೆ.
ಅದಕ್ಕೆ ಅಗತ್ಯವಾದ ಸುಮಾರು 13 ಸಾವಿರ ಟನ್‌ಗಳಷ್ಟು ಬಿತ್ತನೆ ಬೀಜ ಈಗಾಗಲೇ ದಾಸ್ತಾನಿದೆ ಎಂದರು. ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಕೇಂದ್ರಗಳಲ್ಲಿ ರಸಗೊಬ್ಬರ ಹಾಗೂ ಔಷಧಿ ಮಾರಾಟ ಮಾಡಲಾಗುತ್ತಿದೆ .ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು. ಆಲೂಗಡ್ಡೆ ವ್ಯಾಪಾರ ಮಾಡುವ ಸಂದರ್ಭದಲ್ಲಿ ವರ್ತಕರು ಮತ್ತು ರೈತರು ಮಾಸ್ಕ್ಗಳನ್ನು ಕಡ್ಡಾಯವಾಗಿ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳಿದರು.
ಹೆಚ್ಚು ದರ: ಪ್ರತಿಭಟನೆ: ಜಿಲ್ಲಾಡಳಿತವು ನಿಗದಿಪಡಿಸಿ ರುವ ಬಿತ್ತನೆ ಆಲೂಗೆಡ್ಡೆ ದರವನ್ನು ಕಡಿಮೆ ಮಾಡಬೇಕು ಮತ್ತು ಆಲೂಗಡ್ಡೆ ಖರೀದಿಸುವ ರೈತರಿಗೆ ಉಚಿತವಾಗಿ ಔಷಧಿ, ರಸಗೊಬ್ಬರ ನೀಡುವಂತೆ ಆಗ್ರ ಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಡೀಸಿಆರ್. ಗಿರೀಶ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂ ಡರು, ಜಿಲ್ಲಾಡಳಿತ ನಿಗದಿಪಡಿಸಿರುವ ದರ ಕ್ವಿಂಟಲ್‌ಗೆ 2,150 ರೂ. ನಿಂದ 2,250 ರೂ. ಅವಾಸ್ತವಿಕವಾಗಿದೆ. ಆದ್ದರಿಂದ ನ್ಯಾಯಯುತ ದರ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು. ರೈತ ಸಂಘದ ರಾಜ್ಯ ಉಪಾಧ್ಯಕ್ಷ ಆನೆಕೆರೆ ರವಿ, ಜಿಲ್ಲಾಧ್ಯಕ್ಷ ಮಹಬೂಬ್ ಪಾಷಾ, ಉಪಾಧ್ಯಕ್ಷ ಮಹಮದ್ ಸಾದಿಕ್ ಹಾಜರಿದ್ದರು.