Advertisement

ಹೆದ್ದಾರಿಯಲ್ಲಿ ನೀರು ನಿಲ್ಲದಂತೆ ಕಾಮಗಾರಿ ಆರಂಭ

10:02 AM May 20, 2018 | |

ಸುರತ್ಕಲ್‌: ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ನೀರು ನಿಲ್ಲದಂತೆ ತೋಡುಗಳ ಹೂಳೆತ್ತು ಕಾರ್ಯವನ್ನು ಈ ಬಾರಿ ಇಲಾಖೆ ಮಳೆಗಾಲಕ್ಕೆ ಮುನ್ನವೇ ಆರಂಭ ಮಾಡಿದೆ. ಸುರತ್ಕಲ್‌, ತಡಂಬೈಲ್‌ ಪ್ರದೇಶದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಕಳೆದ ಬಾರಿ ತಗ್ಗು ಪ್ರದೇಶದ ಹೆದ್ದಾರಿ ಬದಿಗಳಲ್ಲಿ ನೀರು ನಿಂತು ವಾಹನ ಸವಾರರಿಗೆ ಕೆಸರು ನೀರಿನ ಸಿಂಚನವಾಗುತ್ತಿತ್ತು. ಆದರೆ ಈ ಬಾರಿ ಇಲಾಖೆ ಇದಕ್ಕೆ ಆಸ್ಪದ ಕೊಡದೆ ಜೇಸಿಬಿ ಮೂಲಕ ಕೆಸರು ತೆಗೆಯುವ ಕಾಮಗಾರಿ ಆರಂಭಿಸಿದೆ.

Advertisement

ಇನ್ನು ಎಲ್ಲೆಲ್ಲಿ ಆಗ ಬೇಕಿದೆ?
ಮುಖ್ಯವಾಗಿ ಇಲ್ಲಿನ ಪಣಂಬೂರು, ಬೈಕಂಪಾಡಿ, ಹೊಸಬೆಟ್ಟು, ಕೂಳೂರು ಮೇಲ್ಸೇತುವೆ ಬಳಿ ಹೂಳೆತ್ತುವಿಕೆ ಆಗಬೇಕಿದೆ. ಪ್ರತೀ ವರ್ಷ ಈ ಭಾಗದಲ್ಲಿ ಮಳೆ ನೀರು ನಿಂತು ಪ್ರಯಾಣಿಕರಿಗೂ ಸಮಸ್ಯೆಯಾಗುತ್ತಿದೆ. ಇಲಾಖೆ ಈಗಾಗಲೇ ಸುರತ್ಕಲ್‌ ವರೆಗೆ ಕಾಮಗಾರಿ ಮುಗಿಸಿದ್ದು ಡಿವೈಡರ್‌ ಮಧ್ಯದಲ್ಲಿನ ಮಣ್ಣು, ರಸ್ತೆಗಳ ಅಕ್ಕಪಕ್ಕದಲ್ಲಿ ಸಂಗ್ರಹವಾಗಿದ್ದ ಮರಳನ್ನು ತೆಗೆದು ಸ್ವಚ್ಛಗೊಳಿಸಿದೆ. ಚತುಷ್ಪಥ ರಸ್ತೆಯ ನೀರು ಸರಾಗವಾಗಿ ಹರಿದು ಹೋಗಲು ಡಿವೈಡರ್‌ ಮಧ್ಯದಲ್ಲಿನ ಕೊಳವೆಗಳನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ನಿರತವಾಗಿದೆ.

ಪಣಂಬೂರು ರಸ್ತೆ ಇಕ್ಕೆಲಗಳಲ್ಲಿ ನೀರು
ಪಣಂಬೂರು ಚತುಷ್ಪಥ ರಸ್ತೆಯ ಇಕ್ಕೆಲಗಳಲ್ಲಿ ನೀರು ನಿಲ್ಲುತ್ತಿದ್ದು ಸರಾಗವಾಗಿ ಹರಿದುಹೋಗಲು ವ್ಯವಸ್ಥೆಗಳಾಗಿಲ್ಲ. ಘನ ವಾಹನಗಳ ಓಡಾಟದಿಂದ ಇಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಗುಂಡಿಗಳಾಗಿದ್ದೇ ನೀರು ನಿಲ್ಲಲು ಕಾರಣವಾಗಿದೆ.

ತೋಡುಗಳ ಸ್ವಚ್ಛತೆ
ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳ ತೋಡುಗಳಲ್ಲಿ ತುಂಬಿರುವ ಹೂಳನ್ನು ಪ್ರತೀ ವರ್ಷ ಆದ್ಯತೆಯ ಮೇರೆಗೆ ಸ್ವಚ್ಛಗೊಳಿಸುತ್ತಿದ್ದೇವೆ. ಈ ಬಾರಿಯೂ ಮಳೆಗಾಲದ ಮುನ್ನ ಸಂಪೂರ್ಣಗೊಳಿಸಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿಕೊಡಲಾಗುವುದು.
– ವಿಜಯ್‌ ಸ್ಯಾಮ್ಸನ್‌,
ಹೆದ್ದಾರಿ ಇಲಾಖಾ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next