ಈ ದೇಶದ ಮಣ್ಣಲ್ಲಿ ಮುಚ್ಚಿ ಹೋಗಿರುವ ಅನೇಕ ಕಥೆಗಳಲ್ಲಿ ಒಂದನ್ನು ಹುಡುಕಿ ತೆರೆಮೇಲೆ ತೆರೆದಿಡುತ್ತೇವೆ ಎಂದು ಹೊರಟ ಬಹುತೇಕ ಹೊಸ ಪ್ರತಿಭೆಗಳ “ಲಾಕ್’ ಚಿತ್ರ ಈ ವಾರ ತೆರೆ ಕಂಡಿದೆ. ಆದರೆ ನಿಜಕ್ಕೂ ಚಿತ್ರದಲ್ಲಿ ಮುಚ್ಚಿ ಹೋಗಿರುವ ಕಥೆಯನ್ನು ಬಿಚ್ಚಿಡಲಾಗಿದೆಯೇ? ಬಿಡುಗಡೆಗೂ ಮುನ್ನ ಚಿತ್ರತಂಡ ಹೇಳಿದಂತೆ, ಚಿತ್ರ ನೋಡಿದ ಮೇಲೆ ಅಮರ ವಿಚಾರಗಳು ಜಗತ್ತಿಗೆ ಗೊತ್ತಾಗುತ್ತವೆಯೇ? ಎಂಬುದು ಮಾತ್ರ ಪ್ರಶ್ನಾರ್ಥಕವಾಗಿಯೇ ಉಳಿಯುತ್ತದೆ.
ಚಿತ್ರದ ನಾಯಕ ಮತ್ತು ನಾಯಕಿ ಘಟನೆಯೊಂದರಲ್ಲಿ ಸಂಧಿಸುತ್ತಾರೆ. ಆದರೆ ಆಕೆಯ ಬಳಿಯಿರುವ ಬ್ಯಾಗ್‌ನಲ್ಲಿ ಈ ದೇಶಕ್ಕೆ ಸಂಬಂಧಿಸಿದ ಒಂದಷ್ಟು ರಹಸ್ಯ ಸಂಗತಿಗಳಿದ್ದು, ಅದನ್ನು ಅರಿತ ದುಷ್ಟರು ಅದನ್ನು ಪಡೆಯಲು ಆ ಬ್ಯಾಗ್‌ನ ಹಿಂದೆ ಬೀಳುತ್ತಾರೆ. ಅಂತಿಮವಾಗಿ ಆ ಬ್ಯಾಗ್‌ನಲ್ಲಿ ಇರುವ ಅಂಥ ರಹಸ್ಯವಾದರೂ ಏನು? ಅದನ್ನು ಹುಡುಕಲು ಹಿಂದೆ ಬಿದ್ದವರಿಗೆ ಅದು ಸಿಗುತ್ತದೆಯಾ? “ಲಾಕ್’ ಚಿತ್ರದಲ್ಲಿ ದೇಶಕ್ಕೆ ಬೇಕಾಗುವ ರಹಸ್ಯ ಅನ್‌ಲಾಕ್ ಆಗುತ್ತದೆಯಾ? ಅನ್ನೋದೆ “ಲಾಕ್’ ಚಿತ್ರದ ಕ್ಲೈಮ್ಯಾಕ್ಸ್.
ಇನ್ನು ಚಿತ್ರದ ಕಥಾಹಂದರದ ಬಗ್ಗೆ ಹೇಳುವುದಾದರೆ, ಚಿತ್ರದಲ್ಲಿ ಏನು ಹೇಳಬೇಕು? ಯಾವುದನ್ನು ತೋರಿಸಬೇಕು? ಎಂಬ ಸ್ಪಷ್ಟ ಯೋಚನೆಯೇ ನಿರ್ದೇಶಕರಿಗೆ ಇಲ್ಲದಂತಿದೆ. ಒಂದೆಡೆ ಅಪ್ರಬುದ್ಧನಂತೆ ವರ್ತಿಸುವ ನಾಯಕ. ಮತ್ತೂಂದೆಡೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರಬುದ್ಧ ಚಿಂತನೆಗಳ ರಹಸ್ಯ. ಆ ರಹಸ್ಯವನ್ನು ಸ್ವತಃ ನೇತಾಜಿಯೇ ಬಂದು ಯಾವುದೋ ಸ್ವಾಮೀಜಿಗೆ ಕೊಡುವುದು.
ಅಲ್ಲಿಂದ ಆ ರಹಸ್ಯ ಮತ್ತೂಬ್ಬರ ಕೈ ಸೇರುವುದು. ಕೊನೆಗೆ ನಾಯಕಿಯ ಬ್ಯಾಗ್ ಸೇರುವುದು… ಹೀಗೆ ಆ ರಹಸ್ಯ ತಲೆಮಾರುಗಳಿಂದ ಕೈಯಿಂದ ಕೈ ಬದಲಾದರು ಅದು ಏನೆಂಬುದು ಕೊನೆಗೂ ತಿಳಿಯದಿರುವುದು ಮಾತ್ರ ನಿಜಕ್ಕೂ ಸೋಜಿಗದ ಸಂಗತಿ! ಒಟ್ಟಾರೆ “ಲಾಕ್’ ವಾಸ್ತವಕ್ಕೆ ಮೈಲುಗಟ್ಟಲೆ ದೂರವಿರುವ, ಅರಿಯಲೂ ಆಗದ, ಅರಗಿಸಿಕೊಳ್ಳಲೂ ಆಗದ ಚಿತ್ರ. ಚಿತ್ರದ ಕಥೆ, ನಿರೂಪಣೆ ಲಂಗು-ಲಗಾಮಿಲ್ಲದೆ ಬೇಕೆಂದ ಕಡೆಗೆ ಓಡುತ್ತ ನೋಡುಗರ ತಾಳ್ಮೆ ಪರೀಕ್ಷಿಸುತ್ತದೆ.
ಚಿತ್ರದಲ್ಲಿ ಏನು ಹೇಳಬೇಕು, ಹೇಗೆ ಹೇಳಬೇಕು ಎಂಬ ಸ್ಪಷ್ಟತೆ ಇಲ್ಲದಿದ್ದರೆ ಚಿತ್ರ ಹೇಗೆಲ್ಲಾ “ಲಾಕ್’ ಆಗಬಹುದು ಅನ್ನೋದಕ್ಕೆ ಇತ್ತೀಚೆಗೆ ಬಂದ ಚಿತ್ರಗಳಲ್ಲಿ “ಲಾಕ್’ ಒಂದು ತಾಜಾ ನಿದರ್ಶನ. ಚಿತ್ರದ ಕಲಾವಿದರ ಬಗ್ಗೆ ಹೇಳುವುದಾದರೆ, ಚಿತ್ರದ ನಾಯಕ, ನಾಯಕಿ, ಖಳನಾಯಕ ಯಾವ ಪಾತ್ರಗಳೂ ಮನಸ್ಸಿನಲ್ಲಿ ಉಳಿಯುವುದಿಲ್ಲ. ಇನ್ನು ನೇತಾಜಿ ಪಾತ್ರದಲ್ಲಿ ಹಿರಿಯ ನಟ ಶಶಿಕುಮಾರ್, ಸ್ವಾಮಿಜಿ ಪಾತ್ರದಲ್ಲಿ ಅವಿನಾಶ್, ಸ್ವಾಮೀಜಿಯ ಶಿಷ್ಯನಾಗಿ ಎಂ.ಕೆ ಮಠ ಅಭಿನಯ ಪರವಾಗಿಲ್ಲ ಎನ್ನಬಹುದು.
ಉಳಿದಂತೆ ಶರತ್ ಲೋಹಿತಾಶ್ವ, ದಿಶಾ ಪೂವಯ್ಯ ಇತರರದ್ದು ಹಾಗೆ ಬಂದು ಹೀಗೆ ಹೋಗುವಂಥ, ಒಂಥರಾ “ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬಂಥ ಪಾತ್ರ. ಆದರೆ ಚಿತ್ರದಲ್ಲಿ ದೊಡ್ಡ ತಾರಾಗಣ, ಸಾಕಷ್ಟು ಸಂಖ್ಯೆಯ ಕಲಾವಿದರಿದ್ದರೂ, ಯಾರನ್ನು ಸಮರ್ಪಕವಾಗಿ ಬಳಸಿಕೊಳ್ಳದೆ ಚಿತ್ರದ ದೃಶ್ಯಗಳು ಸೊರಗಿ ಹೋಗಿವೆ. ಇನ್ನು ಚಿತ್ರಕ್ಕೆ ಹೊಸ ಮಜಲು ನೀಡಬೇಕಾದ ಛಾಯಾಗ್ರಹಣ, ಸಂಕಲನ, ಕಲರಿಂಗ್, ಸಂಗೀತ ಮೊದಲಾದ ತಾಂತ್ರಿಕ ಕೆಲಸಗಳು ಅತ್ಯಂತ ಪೇಲವವಾಗಿರುವುದರಿಂದ ಅವುಗಳ ಬಗ್ಗೆ ಮಾತನಾಡದಿರುವುದೇ ಒಳಿತು.
ಚಿತ್ರ: ಲಾಕ್
ನಿರ್ಮಾಣ: ರೋಹಿತ್ ಅಶೋಕ್ ಕುಮಾರ್, ಪಿ. ರಾಮ್
ನಿರ್ದೇಶನ: ಪರಶುರಾಮ್
ತಾರಾಗಣ: ಅಭಿಲಾಶ್, ಸೌಂದರ್ಯ ರಮೇಶ್, ಎಂ.ಕೆ ಮಠ, ಅವಿನಾಶ್, ಶಶಿಕುಮಾರ್, ಶರತ್ ಲೋಹಿತಾಶ್ವ, ದಿಶಾ ಪೂವಯ್ಯ, ರಾಕ್ ಸತೀಶ್ ಮತ್ತಿತರರು.
* ಜಿ.ಎಸ್ ಕಾರ್ತಿಕ ಸುಧನ್