Advertisement

Politics: ಚುನಾವಣೆಗೆ ಮುನ್ನ ನಾವು ನಾವು…ಬಳಿಕ ನಾನು ನಾನು…: ರಾಜ್ಯಾಧ್ಯಕ್ಷ ವಿಜಯೇಂದ್ರ

11:44 PM Jan 06, 2024 | Team Udayavani |

ಚಾಮರಾಜನಗರ: ನಮ್ಮ ಪಕ್ಷದ ಹಿರಿಯರು ನಾವು ಎನ್ನುವ ಬದಲು ನಾನು ಎಂದು ಹೇಳಿಕೊಂಡು ಓಡಾಡಿದ್ದೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಲು ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

Advertisement

ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಮೊದಲ ಬಾರಿ ಶನಿವಾರ ಜಿಲ್ಲೆಗೆ ಭೇಟಿ ನೀಡಿದ ಅವರು ನಗರದ ಡಾ| ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ಶನಿವಾರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ವಿಧಾನಸಭಾ ಚುನಾವಣೆಯಲ್ಲಿ ಸೋಲಲು ಪಕ್ಷ ಅಥವಾ ಕಾರ್ಯಕರ್ತರು ಕಾರಣ ಅಲ್ಲ. ಚುನಾವಣೆ ಗೆಲ್ಲುವುದಕ್ಕೂ ಮುಂಚೆ ನಮ್ಮ ಕಾರ್ಯಕರ್ತರು, ನಾವು ಎಂದು ಮಾತನಾಡುತ್ತಿದ್ದ ನಮ್ಮ ಪಕ್ಷದ ಹಿರಿಯರು, ಗೆದ್ದ ಬಳಿಕ ನಾನು, ನಾನು ಎಂದು ಹೇಳಿಕೊಂಡು ಓಡಾಡಲು ಶುರು ಮಾಡಿದರು. ಇದು ಪಕ್ಷದ ಹಿನ್ನಡೆಗೆ ಕಾರಣವಾಯಿತು ಎಂದು ವಿಶ್ಲೇಷಿಸಿದರು.

ನಮ್ಮದೇ ತಪ್ಪಿನಿಂದಾಗಿ ಮತ್ತು ಪಕ್ಷದಲ್ಲಿ ಆದ ವ್ಯತ್ಯಾಸಗಳಿಂದಾಗಿ ಕಳೆದ ಚುನಾವಣೆಯಲ್ಲಿ ನಾವು ವಿಪಕ್ಷದಲ್ಲಿ ಕುಳಿತುಕೊಳ್ಳಬೇಕಾಯಿತು. ನಾನು ಒಂದಿಬ್ಬರು ನಾಯಕರ ಬಗ್ಗೆ ಮಾತನಾಡುತ್ತಿಲ್ಲ. ಪಕ್ಷದ ಅಧ್ಯಕ್ಷನಾಗಿಯೂ ಹೇಳುತ್ತಿಲ್ಲ. ಕಾರ್ಯಕರ್ತನಾಗಿ ಈ ಮಾತುಗಳನ್ನು ಹೇಳುತ್ತಿದ್ದೇನೆ. ಬಿಜೆಪಿ ವಿಪಕ್ಷದಲ್ಲಿದ್ಧಾಗಲೇ ಮುಖಂಡರು, ಕಾರ್ಯಕರ್ತರ ನಡುವಿನ ಸಂಬಂಧಗಳು ಚೆನ್ನಾಗಿತ್ತು. ಯಾವಾಗ ನಮಗೆ ಅಧಿಕಾರ ಸಿಕ್ಕಿತೋ, ಅಲ್ಲಿಂದ ಮುಖಂಡರು ಮತ್ತು ಕಾರ್ಯಕರ್ತರ ಮಧ್ಯೆ ಸಂಬಂಧ ಹಳಸಲಾರಂಭಿಸಿತು ಎಂದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಏನೇನಾ ಯಿತು ಎಂಬ ಬಗ್ಗೆ ನಾನು ಚರ್ಚೆ ಮಾಡಲು ಹೋಗುವುದಿಲ್ಲ. ಆದರೆ ಭವಿಷ್ಯದ ಬಗ್ಗೆ ವಿಶ್ವಾಸ ಇರಿಸಿಕೊಂಡಿದ್ದೇನೆ. ಆರೇಳು ತಿಂಗಳ ಹಿಂದೆ ಕರ್ನಾಟಕ ರಾಜಕೀಯದಲ್ಲಿ ಯಾವ ವಾತಾವರಣವಿತ್ತು. ಪ್ರಸ್ತುತ ಹೇಗಿದೆ ಎಂಬುದು ನಿಮಗೆಲ್ಲ ತಿಳಿದಿದೆ. ಐದು ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ಚುನಾವಣೆಯ ಫ‌ಲಿತಾಂಶ ಇಡೀ ದೇಶದಲ್ಲಿ ಮಾತ್ರವಲ್ಲದೆ, ರಾಜ್ಯದಲ್ಲೂ ಬಿಜೆಪಿ ಅಲೆ ಮೂಡಿಸಿದೆ ಎಂದು ಅವರು ಹೇಳಿದರು.

28 ಸ್ಥಾನಗಳನ್ನೂ ಗೆಲ್ಲಿಸಬೇಕು
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಬೇಕು. ರಾಜ್ಯಾದ್ಯಂತ ಅಧ್ಯಕ್ಷನಾಗಿ ಪ್ರವಾಸ ನಡೆಸುತ್ತಿದ್ದೇನೆ. ಎಲ್ಲೆಡೆ ಕಾರ್ಯಕರ್ತರು ಉತ್ಸಾಹದಿಂದ ಪ್ರತಿಕ್ರಿಯಿಸುತ್ತಿದ್ದಾರೆ ಎಂದು ವಿಜಯೇಂದ್ರ ಹೇಳಿದರು.

Advertisement

ನನ್ನ ಸೋಲಿಗೆ ಕಾರಣರಾದವರಿಗೆ ಅವಕಾಶ ಕೊಟ್ಟರೆ ಸಿಡಿದೇಳುವುದು ಖಚಿತ: ಸೋಮಣ್ಣ
ಬೆಂಗಳೂರು: ವರಿಷ್ಠರ ಭೇಟಿಗೆಂದು ಜ.7ರಂದು ದಿಲ್ಲಿಗೆ ಹೊರಟು ನಿಂತಿರುವ ಮಾಜಿ ಸಚಿವ ವಿ.ಸೋಮಣ್ಣ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಚಾಮರಾಜನಗರ ಭೇಟಿಗೆ ಕಿಡಿಕಾರಿದ್ದಾರೆ. ಆದರೆ ಸೋಮಣ್ಣರ ಹೇಳಿಕೆಯನ್ನು ಅಪಾರ್ಥ ಮಾಡಿಕೊಳ್ಳುವುದಿಲ್ಲ ಎಂದಿರುವ ವಿಜಯೇಂದ್ರ, ಸಮಾಧಾನದ ಮಾತುಗಳನ್ನಾಡಿದ್ದಾರೆ.
ಜ.7ರಂದು ದಿಲ್ಲಿಗೆ ಪ್ರಯಾಣ ಬೆಳೆಸಲಿರುವ ಸೋಮಣ್ಣ, ಜ. 10ರ ವರೆಗೆ ಅಲ್ಲೇ ಇರಲಿದ್ದು, ವರಿಷ್ಠರನ್ನು ಭೇಟಿ ಮಾಡಿದ ಬಳಿಕ ತಮ್ಮ ಮುಂದಿನ ರಾಜಕೀಯ ನಿರ್ಧಾರವನ್ನು ಪ್ರಕಟಿಸುವುದಾಗಿ ತಿಳಿಸಿದ್ದರು.

ನಾನು ಸಿಡಿದೇಳುವುದು ಗೊತ್ತೇ ಇದೆ
ಈ ಕುರಿತು ಬೆಂಗಳೂರಿನಲ್ಲಿ ಶನಿವಾರ ಪ್ರತಿಕ್ರಿಯಿಸಿರುವ ಸೋಮಣ್ಣ, ಅವರು ಅಧ್ಯಕ್ಷರಿದ್ದಾರೆ. ಎಲ್ಲಿಗೆ ಬೇಕಿದ್ದರೂ ಹೋಗಲಿ. ನನಗೇನೂ ಸಂಬಂಧವಿಲ್ಲ. ಆದರೆ ನನ್ನ ಸೋಲಿಗೆ ಯಾರ್ಯಾರು ಕಾರಣರಾಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಅದನ್ನು ಸರಿಪಡಿಸುವುದು ಅವರ ಕರ್ತವ್ಯ. ಅದರ ಬದಲು ಸೋಲಿಗೆ ಕಾರಣರಾದವರ ಜತೆಗೆ ಹೋಗುತ್ತೇನೆಂದರೆ ಬೇರೆ ರೀತಿಯಲ್ಲಿ ಮಾತನಾಡಬೇಕಾಗುತ್ತದೆ. ವಿಜಯೇಂದ್ರನಿಗೆ ಬೆಳೆಯುವ ಆಸೆ ಇದ್ದರೆ, ನಮ್ಮಂಥವರಿಗೆ ಅನುಕೂಲ ಮಾಡಿಕೊಡಬೇಕು. ಸೋಲಿಗೆ ಕಾರಣ ಆದವÃರಿಗೆ ಅವಕಾಶ ಕೊಟ್ಟರೆ ನಾನು ಸಿಡಿದೇಳುವುದು ಗೊತ್ತೇ ಇದೆ ಎಂದರು.

ಆಗಿರುವುದನ್ನು ನಾವು ಮರೆಯಬೇಕಿದೆ. ವಿಜಯೇಂದ್ರಗೆ ಚಿಕ್ಕ ವಯಸ್ಸಲ್ಲೇ ಅವಕಾಶ ಸಿಕ್ಕಿದೆ. ಬೆಳೆಯಬೇಕೆಂದಿದ್ದರೆ ಅಯೋಗ್ಯರು, ಮನೆಹಾಳರನ್ನು ಜತೆಯಲ್ಲಿ ಇಟ್ಟುಕೊಳ್ಳಬಾರದು. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಉಳಿದಂತೆ ಬೇರೆ ಯಾರ ಬಗ್ಗೆಯೂ ಪಕ್ಷದಲ್ಲಿ ನನಗೆ ಬೇಸರ ಇಲ್ಲ.
-ವಿ.ಸೋಮಣ್ಣ, ಮಾಜಿ ಸಚಿವ

ಸೋಮಣ್ಣ ನಮ್ಮ ಪಕ್ಷದ ಹಿರಿಯ ನಾಯಕರು. ರಾಜಕೀಯವಾಗಿ ಅವರದ್ದೇ ಶಕ್ತಿ ಇದೆ. ಯಾರೊಬ್ಬರನ್ನೂ ದೂರ ಇಡುವ ಪ್ರಶ್ನೆ ಇಲ್ಲ. ನಾನೂ ಅವರನ್ನು ಭೇಟಿ ಮಾಡುತ್ತೇನೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸೋಮಣ್ಣ, ಯತ್ನಾಳ್‌, ಲಿಂಬಾವಳಿ ಎಲ್ಲರನ್ನೂ ಸಕ್ರಿಯವಾಗಿ ಜೋಡಿಸಿಕೊಳ್ಳುತ್ತೇವೆ. ಎಲ್ಲರನ್ನೂ ಗೌರವಯುತವಾಗಿಯೇ ನಡೆಸಿಕೊಳ್ಳಲಾಗುತ್ತಿದೆ.
-ಸಿ.ಟಿ. ರವಿ, ಮಾಜಿ ಸಚಿವ

ಸೋಮಣ್ಣ ಬಿಜೆಪಿ ಬಿಡುವುದಿಲ್ಲ. ಯಾರೂ ಆತಂಕಪಡಬೇಕಾಗಿಲ್ಲ. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಭವಿಷ್ಯ ಎಂದೂ ಸುಳ್ಳಾಗಿಲ್ಲ. ಸಿದ್ದರಾಮಯ್ಯ ಮತ್ತು ಶಿವಕುಮಾರ್‌ರಿಂದ ಕಾಂಗ್ರೆಸ್‌ ಅಂತ್ಯವಾಗುತ್ತದೆ ಎನ್ನುವುದೂ ನಿಜವಾಗಲಿದೆ. ಸಿದ್ದರಾಮಯ್ಯ ಕಾಂಗ್ರೆಸ್‌ನ ಕೊನೆಯ ಸಿಎಂ ಅಗಿರುತ್ತಾರೆ. ಆ ದಿನಗಳು ಬಹಳ ದೂರವಿಲ್ಲ.
-ಗೋವಿಂದ ಕಾರಜೋಳ, ಮಾಜಿ ಡಿಸಿಎಂ

ಸೋಮಣ್ಣ ಅವರು ಬಿಜೆಪಿಯಲ್ಲಿದ್ದಾರೆ. ಅವರು ಬಿಜೆಪಿ ಯಿಂದ ತುಮಕೂರಿನಲ್ಲಿ ಸ್ಪರ್ಧಿಸುವುದಾದರೆ ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಏನೇನು ಬೇಕೋ ಅದನ್ನು ಮಾಡುತ್ತೇವೆ.
-ಡಾ| ಜಿ. ಪರಮೇಶ್ವರ್‌, ಗೃಹ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next