ಕುಂಬಳೆ: ಕಾಸರಗೋಡು ನಗರದ ತಾಳಿಪ್ಪಡ್ಡು ಮೈದಾನದ ಬಳಿಯ ಅಡ್ಕತ್ತಬೈಲು ಕೇಂದ್ರ ಸರಕಾರದ ಕಾರ್ಮಿಕ ಮಂತ್ರಾಲಯದ ಅಧೀನದ ಬೀಡಿ ವರ್ಕರ್ಸ್ ಕ್ಷೇಮನಿಧಿ ಡಿಸ್ಪೆನ್ಸರಿಯ ಮುಂದೆ ನಿತ್ಯ ಕಾಣುವ ದೃಶ್ಯವಿದು. 1988 ರಲ್ಲಿ ದಿನೇಶ್‌ಬೀಡಿಯ ಅಧೀನದ ಬಾಡಿಗೆ ಕಟ್ಟಡದಲ್ಲಿ ಆರಂಭಗೊಂಡ ಈ ಕಚೇರಿ ಬಳಿಕ ಕಳೆದ 4 ವರ್ಷಗಳಿಂದ ಪಕ್ಕದ ರಸ್ತೆ ಬದಿಯ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು.
ಇಲ್ಲಿ ನಿತ್ಯ ಬೆಳ್ಳಂಬೆಳ್ಳಗೆ ಬಲುದೂರದ ಗ್ರಾಮೀಣ ಪ್ರದೇಶಗಳಿಂದ ಆಗಮಿಸುವ ಬಡ ಬೀಡಿ ಕೂಲಿ ಕಾರ್ಮಿಕರನ್ನು ಇಲ್ಲಿ ಕಾಣಬಹುದು.ಇದರಲ್ಲಿ ಹೆಚ್ಚಾಗಿ ಮಹಿಳೆಯರು ಇರುವರು.ತಮ್ಮ ಬೀಡಿ ಉದ್ಯೋಗದ ಐಡೆಂಟಿಟಿ ಕಾರ್ಡಿನ ದಾಖಲಾತಿಗಾಗಿ ಮತ್ತು ಆರೋಗ್ಯ ತಪಾಸಣೆ ಮತ್ತು ಔಷಧಿಗಾಗಿ ಇಲ್ಲಿ ಸರತಿ ಸಾಲಿನಲ್ಲಿ ಕಾಯುತ್ತಿರುವವರನ್ನು ನೋಡಿದಾಗ ಅಯೋ ಎನಿಸದಿರದು.ಕೆಲವು ಮಹಿಳೆಯರು ಕಂಕುಳಲ್ಲಿ ಹಸುಗೂಸನ್ನು ಹಿಡಿದು ಮತ್ತು ರೋಗಿಗಳು ಸುಡು ಬಿಸಿಲಿಗೆ ಕಾಯುವ ದೃಶ್ಯವನ್ನೂ ಕಾಣಬಹುದು.
ಕಾಸರಗೋಡು ಸೇವಾ ಸಹಕಾರಿ ಬ್ಯಾಂಕೊಂದರ ಕಟ್ಟಡದ ಕೆಳಭಾಗದ ಚಿಕ್ಕ ಕೊಠಡಿಯೊಂದರೊಳಗೆ ತಿಂಗಳಿಗೆ 7 ಸಹಸ್ರ ರೂ.ಬಾಡಿಗೆಯಲ್ಲಿ ಕಾರ್ಯಾ ಚರಿಸುತ್ತಿರುವ ಈ ಚಿಕಿತ್ಸಾಲಯದೊಳಗೆ ಯಾವುದೇ ವ್ಯವಸ್ಥೆ ಇಲ್ಲ. ಡಿಸ್ಪೆನ್ಸರಿಯೊಳಗೆ ಆಗಮಿಸಿದ ಕೆಲವರಿಗೆ ಮಾತ್ರ ಸೀಮಿತ ಆಸನದ ವ್ಯವಸ್ಥೆಯಿದ್ದು ಇನ್ನುಳಿದವರು ಕಚೇರಿ ಮುಂಬಾಗದಲ್ಲಿ ಸರ್ವಋತುವಿನಲ್ಲಿ ಕಾದು ನಿಲ್ಲಬೇಕಾಗಿದೆ.
ಸವಲತ್ತುಗಳು ಬೀಡಿ ಕಾರ್ಮಿಕರಿಗೆ, ಸಿನೇಮ,ಗಣಿ ಕೆಲಸಗಾರರಿಗೆ ಮತ್ತು ಇವರ ಮನೆಯವರಿಗೆ ಈ ಕಚೇರಿ ಮೂಲಕ ಅನೇಕ ಸವಲತ್ತುಗಳು ಲಭ್ಯವಿದೆ.ಹೊಸಮನೆ ನಿರ್ಮಿಸಲು ಆರ್ಥಿಕ ನೆರವು, ಉಚಿತ ತಪಾಸಣೆ ಮತ್ತು ಔಷಧಿ,ಕ್ಯಾನ್ಸರ್,ಕಿಡ್ನಿ ಮುಂತಾದ ಮಾರಕ ರೋಗಗಳಿಗೆ ವೆಚ್ಚವಾದ ನಿಧಿಯ ನೆರವು,ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ,ಮಹಿಳೆಯರಿಗೆ ಹೆರಿಗೆಗೆ ಆರ್ಥಿಕ ನೆರವು ಇಲ್ಲಿ ಲಭ್ಯ.ಆದರೆ ಈ ಕಚೇರಿಗೊಂದು ಸ್ವಂತ ಕಟ್ಟಡವಿಲ್ಲ. ಕಾಸರಗೋಡು ಮತ್ತು ಮಂಜೇಶ್ವರ ತಾಲೂಕಿನ ಮಜಿಬೈಲಿನಲ್ಲಿ ಕಾರ್ಯಾಚರಿಸುತ್ತಿರುವ ಡಿಸ್ಪೆನ್ಸರಿಗಳಿಗೆ ಒಂದು ವಾಹನ ಮಾತ್ರವಿದೆ.ನೌಕರರ ಕೊರತೆಯಿಂದ ಚಾಲಕ ಕಚೇರಿಯೊಳಗೆ ಇನ್ನಿತರ ಕೆಲಸಗಳನ್ನೂ ನಿರ್ವಹಿಸುತ್ತಿದ್ದಾರೆ
ಯಾವುದೇ ವ್ಯವಸ್ಥೆ ಇಲ್ಲ
ಕಟ್ಟಡದೊಳಗೆ ಕಾರ್ಯಾಚರಿಸುವ ಮಹಿಳಾ ವೈದ್ಯರ ಕೋಣೆಯಲ್ಲೂ ಯಾವುದೇ ವ್ಯವಸ್ಥೆ ಇಲ್ಲ. ಬಹಿರ್ದೆಸೆಗೆ ಶೌಚಾಲಯವು ಕಟ್ಟಡದ ಹೊರಭಾಗದಲ್ಲಿದೆ.ಸ್ವೀಪರ್ ಮತ್ತು ಎಟೆಂಡರ್ ಇಲ್ಲದೆ ಕಚೇರಿಯೊಳಗೆ ಸ್ಟಾಫ್ ನರ್ಸ್ ಮತ್ತು ಓರ್ವ ನೌಕರ ಎಲ್ಲವನ್ನೂ ನಿಭಾಯಿಸಬೇಕಾಗಿದೆ.
ಕಚೇರಿಯೊಳಗೆ ಪ್ರತ್ಯೇಕ ಕೋಣೆಗಳಿಲ್ಲದೆ ಬೇಕು ಬೇಡದ ವಸ್ತುಗಳಿಂದ ತುಂಬಿದ ಸಂತೆಯಾಗಿದೆ,ಬೆಳಗ್ಗಿನಿಂದ ಮಧ್ಯಾಹ್ನದ ತನಕ ಬೀಡಿ ಪಾಸ್‌ಬುಕ್ ದಾಖಲಾತಿ,ತಪಾಸಣೆ, ಚಿಕಿತ್ಸೆ ಯಾದರೆ ಅಪರಾಹ್ನ ಬೀಡಿ ಕಾರ್ಮಿಕರಿರುವ ಪ್ರದೇಶಗಳಿಗೆ ತೆರಳಿ ಮೊಬೈಲ್ ಸೇವೆ ಸಲ್ಲಿಸಲು ವೈದ್ಯರಿಗೆ ಮತ್ತು ಸಿಬಂಧಿಗೆ ವಾಹನದ ವ್ಯವಸ್ಥೆ ಇಲ್ಲ.
ದೂರದೂರಿನಿಂದ ಬೆಳಗ್ಗೆ ಆಗಮಿಸಿದವರಿಗೆ ತಂಗಲು ಇಲ್ಲಿ ವ್ಯವಸ್ಥೆ ಇಲ್ಲ.ಕೇಂದ್ರ ಸರಕಾರದ ಸುಪರ್ದಿಯಲ್ಲಿರುವ ಈ ಕಚೇರಿ ರಾಜ್ಯದಲ್ಲಿ ಅವಗಣನೆಗೊಳಗಾಗಿದೆ.
– ಅಚ್ಯುತ ಚೇವಾರ್