ಗದಗ: ಬೇಡ ಜಂಗಮ ಸಮಾಜ ಬಾಂಧವರಿಗೆ ಸರಕಾರದಿಂದ ಸಿಗಬೇಕಾದ ಸೌಲಭ್ಯ, ಮೀಸಲಾತಿ ನೀಡದಿದ್ದರೆ ಸಮಾಜದಿಂದ ವಿಧಾನಸಭೆಗೆ ಮುತ್ತಿಗೆ ಹಾಕುವ ಮೂಲಕ ನಮ್ಮ ಹಕ್ಕನ್ನು ಪಡೆದುಕೊಳ್ಳಬೇಕೆಂದು ಮಠಾಧೀಶರು ಒಕ್ಕೂರಲಿನ ನಿರ್ಧಾರ ಕೈಗೊಂಡರು.
ರಾಜ್ಯಾದ್ಯಂತ ಸಂಚರಿಸಲಿರುವ “ಬೇಡ ಜಂಗಮ ಜ್ಯೋತಿ ರಥಯಾತ್ರೆ’ ಮಂಗಳವಾರ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ವೀರೇಶ್ವರ ಪುಣ್ಯಾಶ್ರಮದಲ್ಲಿ ಏರ್ಪಡಿಸಿದ್ದ ಧರ್ಮಸಭೆಯಲ್ಲಿ ಮಠಾ ಧೀಶರು ಮಾತನಾಡಿದರು.
ಚಳಗೇರಿಯ ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬೇಡ ಜಂಗಮ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಸೇರಿದಂತೆ ಸರಕಾರದಿಂದ ವಿವಿಧ ಸೌಲಭ್ಯಗಳನ್ನು ಕಲ್ಪಿಸಬೇಕು. ಸಮಾಜವನ್ನು ಜಾಗೃತಿಗೊಳಿಸುವ ಉದ್ದೇಶದಿಂದ ರಾಜ್ಯಾದ್ಯಂತ ಬೇಡ ಜಂಗಮ ಜ್ಯೋತಿ ರಥಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಏ.15ರಂದು ಬೆಂಗಳೂರು ತಲುಪಿ, ಅಲ್ಲಿ ಬೃಹತ್ ಸಮಾವೇಶವಾಗಿ ಮಾರ್ಪಡಲಿದೆ. ಸಮಾಜದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.
ಅಟ್ನೂರಿನ ಅಭಿನವ ಪಂಚಾಕ್ಷರ ಶಿವಾಚಾರ್ಯರು, ಜೀಗೇರಿಯ ಗುರುಸಿದ್ದೇಶ್ವರ ಶಿವಾಚಾರ್ಯರು, ಹಿರೇವಡ್ಡಟ್ಟಿಯ ವೀರೇಶ್ವರ ಶಿವಾಚಾರ್ಯರು, ಸೊರಟೂರಿನ ಫಕೀರೇಶ್ವರ ಶಿವಾಚಾರ್ಯರು, ಹರಗಿನಡೋಣಿಯ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಮತ್ತಿತರೆ ಸ್ವಾಮೀಜಿಗಳು ಮಾತನಾಡಿ, ಬೇಡ ಜಂಗಮ ಸಮಾಜ ಒಗ್ಗಟ್ಟು ಪ್ರದರ್ಶಿಸಿದರೆ ಬೇಡಿಕೆ ಈಡೇರಲು ಸಾಧ್ಯ ಎಂದರು.
ವೇದಿಕೆಯ ಮೇಲೆ ನಗರಸಭಾ ಸದಸ್ಯೆ ಲಲಿತಾ ಅಸೂಟಿ, ಸಂಗಮ್ಮ ಹಿರೇಮಠ, ಶಶಿರೇಖಾ ಶಿಗ್ಲಿಮಠ ಉಪಸ್ಥಿತರಿದ್ದರು. ಜಿಲ್ಲಾ ಬೇಡ ಜಂಗಮ ಸಮಾಜದ ಅಧ್ಯಕ್ಷ ಶಿದ್ರಾಮಯ್ಯ ಕಟಗಿಹಳ್ಳಿಮಠ ಸ್ವಾಗತಿಸಿ, ಶಿವಲಿಂಗ ಶಾಸ್ತ್ರೀ ಸಿದ್ದಾಪೂರ ನಿರೂಪಿಸಿ, ಸಮಾಜದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಹಳ್ಳೂರಮಠ ವಂದಿಸಿದರು.