ರಾಯಚೂರು: ಸ್ಥಳೀಯವಾಗಿ ಸಿಗುವ ಕಚ್ಚಾ ವಸ್ತು, ಕೃಷಿ ಉತ್ಪನ್ನ ಹಾಗೂ ಮಾನವ ಸಂಪನ್ಮೂಲಗಳೊಂದಿಗೆ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉದ್ದಿಮೆದಾರರಾಗಿ ಜಿಲ್ಲೆಯಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಸಬೇಕು ಎಂದು ನಗರ ಶಾಸಕ ಡಾ| ಶಿವರಾಜ ಪಾಟೀಲ್ ಹೇಳಿದರು.
ನಗರದ ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಹುಬ್ಬಳ್ಳಿಯ ಖಾದಿ ಗ್ರಾಮೋದ್ಯೋಗ ಆಯೋಗದ ಸಹಯೋಗದಲ್ಲಿ ನಡೆದ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆಯ ಒಂದು ದಿನದ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸರ್ಕಾರದ ಯೋಜನೆಗಳ ನೆರವಿನೊಂದಿಗೆ ಜಿಲ್ಲೆಯಲ್ಲಿ ಉತ್ತಮ ಉದ್ದಿಮೆ ಸ್ಥಾಪಿಸಿ ಬೇರೆಯವರಿಗೂ ಕೆಲಸ ನೀಡುವಂತಾಬೇಕು. ಪ್ರಧಾನ ಮಂತ್ರಿ ಯೋಜನೆಯಡಿ ಸಾಲ ಪಡೆಯುತ್ತಿರುವ ಫಲಾನುಭವಿಗಳಿಗೆ ಬ್ಯಾಂಕ್‌ಗಳು ಟಾರ್ಗೆಟ್ ಮಾಡದೆ, ಅರ್ಜಿ ಸಲ್ಲಿಸಿದ ಎಲ್ಲರಿಗೂ ಸಾಲ ಸೌಲಭ್ಯ ನೀಡಬೇಕು. ರಾಯಚೂರು ಹಿಂದುಳಿದ ಜಿಲ್ಲೆಯಾಗಿದ್ದು, ಇಲ್ಲಿನ ಜನರಿಗೆ ಉದ್ದಿಮೆ ಮಾಡಲು ಸೂಕ್ತ ಮಾಹಿತಿ ನೀಡಿ ಪ್ರೇರಣೆ ನೀಡಬೇಕು ಎಂದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಸವರಾಜ ಯಂಕಂಚಿ ಮಾತನಾಡಿ, ಗ್ರಾಮೀಣ ಪ್ರದೇಶದ ಯುವಕರಿಗೆ ಆರ್ಥಿಕ ದೃಷ್ಟಿ ಹೆಚ್ಚಿಸುವ ಉದ್ದೇಶವೇ ಈ ಯೋಜನೆಯ ಮುಖ್ಯ ಗುರಿಯಾಗಿದೆ. ಕೈಗಾರಿಕಾ ಉದ್ದಿಮೆಗಳನ್ನು ಮಾಡಬೇಕೆಂದಲ್ಲಿ ನೇರವಾಗಿ ನಮ್ಮ ಕಚೇರಿಗೆ ಬಂದು ಸೂಕ್ತ ಮಾಹಿತಿ ಪಡೆಯಿರಿ ಎಂದರು.
ಎಸ್‌ಬಿಐನ ಪ್ರಾದೇಶಿಕ ವ್ಯವಸ್ಥಾಪಕ ಕೆ.ರಘುನಂದನ್ ಮಾತನಾಡಿ, ಉದ್ದಿಮೆದಾರನಾಗಿ ಉದ್ಯೋಗ ನೀಡಬೇಕು, ಯಾರಿಗೆ ಯಾವ ಉದ್ದೇಶಕ್ಕಾಗಿ ಸಾಲಕ್ಕೆ ಅರ್ಜಿ ಹಾಕಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಒಂದೇ ರೀತಿಯ ಉದ್ದಿಮೆ ಎಲ್ಲರೂ ಮಾಡಬಾರದು ಎಂದರು.
ಮಲ್ಲಿಕಾರ್ಜುನ ನಾಗಪ್ಪ ಹೊಸಮನಿ, ಅಶೋಕ ಕುಮಾರ್ ರಾಮನಾಳ, ಕೆ.ರಾಯಣ್ಣ, ಬಾಬು ಬಳಗಾನೂರು, ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಮಂಜುನಾಥ ಬಿ. ಸಿಂಗೈ, ನೂಡಲ್ ಅಧಿಕಾರಿ ರಾಮದಾಸ್ ಸೇರಿ ಇತರರಿದ್ದರು.