Advertisement

ಬ್ಯೂಟಿ ಪಾರ್ಲರ್‌ಗಳಿನ್ನು ಬ್ಯೂಟಿ ಕ್ಲಿನಿಕ್‌!

03:00 AM Dec 18, 2018 | Karthik A |

ವಿಶೇಷ ವರದಿ : ಕುಂದಾಪುರ: ಕೈಗೆ ಮದುರಂಗಿ ಹಾಕಿಸಲು, ಕೂದಲಿಗೆ ಬಣ್ಣ ಹಾಕಿಸಲು, ಮುಖದ ಅಂದ ಹೆಚ್ಚಿಸಲು ಬ್ಯೂಟಿಪಾರ್ಲರ್‌ಗೆ ಬರುವವರಿಗೆ ಇನ್ನು ಆರೋಗ್ಯ ಮಾಹಿತಿಯೂ ದೊರೆಯಲಿದೆ. ತಾಲೂಕಿನ ಬ್ಯೂಟಿ ಪಾರ್ಲರ್‌ಗಳು ಇನ್ನು ಬ್ಯೂಟಿ ಕ್ಲಿನಿಕ್‌ಗಳಾಗಲಿವೆ.

Advertisement

ಅಂದದ ನಂಟು
ಬ್ಯೂಟಿ ಪಾರ್ಲರ್‌ಗಳಿಗೆ ಭೇಟಿ ನೀಡದ ಮಹಿಳೆಯರು ಕಡಿಮೆ. ಯಾವುದಾದರೊಂದು ಕಾರಣಕ್ಕೆ ಬ್ಯೂಟಿಪಾರ್ಲರ್‌ಗೆ ಬರುತ್ತಾರೆ. ಅವು ನೂರಾರು ಜನರಿಗೆ ಉದ್ಯೋಗ ಕಲ್ಪಿಸಿವೆ. ಜನರಲ್ಲಿ ಸೌಂದರ್ಯ ಪ್ರಜ್ಞೆಯನ್ನು ಹೆಚ್ಚಿಸಿವೆ. ಪಾರ್ಲರ್‌ಗಳು ಬದುಕಿನ ಭಾಗವೇ ಆಗಿವೆ. ಅವಿನಾಭಾವ ಅಂಗವಾಗುತ್ತಿವೆ.

ಏನಿದು ಕ್ಲಿನಿಕ್‌
ಬ್ಯೂಟಿಪಾರ್ಲರ್‌ಗಳಿಗೆ ಬರುವ ಮಹಿಳೆಯರಿಗೆ ಆರೋಗ್ಯದ ಕುರಿತು ಮಾಹಿತಿ ನೀಡುವುದೇ ಬ್ಯೂಟಿ ಕ್ಲಿನಿಕ್‌. ಚರ್ಮರೋಗ, ಚರ್ಮದ ಆರೋಗ್ಯ, ವೈಯಕ್ತಿಕ ಸ್ವಚ್ಛತೆ, ಮಹಿಳಾ ಆರೋಗ್ಯ, ದೇಹದ ವಿವಿಧ ಭಾಗಗಳಲ್ಲಿ ಬರುವ ಕ್ಯಾನ್ಸರ್‌ (ಹೆಚ್ಚಾಗಿ ಮಹಿಳೆಯರಲ್ಲಿ ಬರುವ ಸ್ತನ ಕ್ಯಾನ್ಸರ್‌, ಗರ್ಭಕೋಶ ಕ್ಯಾನ್ಸರ್‌) ಮೊದಲಾದವುಗಳ ಕುರಿತು ಸ್ಥೂಲ ಮಾಹಿತಿ ನೀಡಲಾಗುತ್ತದೆ. ಯಾವುದೇ ಆರೋಗ್ಯ ಸಂಬಂಧಿ ಮಾಹಿತಿ, ಚಿಕಿತ್ಸೆ ಅವಶ್ಯವಿದ್ದಲ್ಲಿ ಅದೇ ಬ್ಯೂಟಿ ಪಾರ್ಲರ್‌ನಲ್ಲಿ ನೀಡುವ (ಪಿಂಕ್‌ ಸ್ಲಿಪ್‌) ಗುಲಾಬಿ ಬಣ್ಣದ ಚೀಟಿಯನ್ನು ಸರಕಾರಿ ಆಸ್ಪತ್ರೆಗೆ ಕೊಂಡೊಯ್ದರೆ ಅಲ್ಲಿ ಸೂಕ್ತ ಚಿಕಿತ್ಸೆ, ಸಲಹೆ ನೀಡುತ್ತಾರೆ. ಬ್ಯೂಟಿಪಾರ್ಲರ್‌ ಮೂಲಕ ಬಂದವರು ಎಂದು ವೈದ್ಯರಿಗೂ ಸುಲಭದಲ್ಲಿ ಅರಿವಾಗುತ್ತದೆ.

ತರಬೇತಿ
ಬ್ಯೂಟಿಪಾರ್ಲರ್‌ಗಳಲ್ಲಿ ಸೇವೆ ಸಲ್ಲಿಸುವವರಿಗೆ ಆರೋಗ್ಯದ ಕುರಿತಾಗಿ, ಯಾವ ವಿಚಾರದ ಕುರಿತು  ಹೇಗೆ ಮಾಹಿತಿ ನೀಡಬೇಕೆಂದು ಆರೋಗ್ಯ ಇಲಾಖೆ ವತಿಯಿಂದ ವಿಶೇಷ ತರಬೇತಿ, ಮಾಹಿತಿ ನೀಡಲಾಗುತ್ತದೆ. ಕರಪತ್ರಗಳನ್ನು, ಪೋಸ್ಟರ್‌ಗಳನ್ನು ನೀಡಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ಆಸ್ಪತ್ರೆಗೆ ಕಳುಹಿಸುವ ಬ್ಯೂಟಿಪಾರ್ಲರ್‌ಗಳನ್ನು ಮೂರು ತಿಂಗಳಿಗೊಮ್ಮೆ ಆರೋಗ್ಯ ಇಲಾಖೆಯಿಂದ ಗುರುತಿಸಿ ಪ್ರಶಂಸಾ ಪತ್ರ ನೀಡಲಾಗುತ್ತದೆ. 

ಎಲ್ಲೆಡೆ ಯತ್ನ
ಕುಂದಾಪುರ, ಬೈಂದೂರಿನಲ್ಲಿ ಸುಮಾರು 100 ಬ್ಯೂಟಿ ಪಾರ್ಲರ್‌ಗಳಿವೆ. 23 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 1 ಸಮುದಾಯ ಆರೋಗ್ಯ ಕೇಂದ್ರ, 1 ತಾಲೂಕು ಆಸ್ಪತ್ರೆಯಿದೆ. 356 ಆಶಾ ಕಾರ್ಯಕರ್ತೆಯರಿದ್ದಾರೆ. 8 ಮಂದಿ ಪುರಸಭೆ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತೆಯರಿದ್ದಾರೆ. ಇವರೆಲ್ಲರೂ ಇಲಾಖೆಯ ಎಷ್ಟೇ ಮಾಹಿತಿಯನ್ನೂ ಕೊಟ್ಟರೂ ಸಾಲುತ್ತಿಲ್ಲ. ಇಲಾಖೆಯ ಬೇರೆ ಬೇರೆ ಕೆಲಸಗಳೂ ಇವರ ಪಾಲಿಗಿವೆ. ಆದ್ದರಿಂದ ಬ್ಯೂಟಿಪಾರ್ಲರ್‌ ಮೂಲಕ ಹೆಚ್ಚುವರಿಯಾಗಿ ಮಾಹಿತಿ, ಜಾಗೃತಿ ನೀಡುವ ಕೆಲಸವನ್ನು ಕೈಗೆತ್ತಿಕೊಳ್ಳಲು ಇಲಾಖೆ ನಿರ್ಧರಿಸಿದೆ. 

Advertisement

ಯೋಜನೆಯಿದೆ
ಬಹುತೇಕ ಮಹಿಳೆಯರು ಈಗ ಬ್ಯೂಟಿಪಾರ್ಲರ್‌ಗಳಿಗೆ ಹೋಗುವ ಕಾರಣ ಅವರಲ್ಲಿ ಆರೋಗ್ಯದ ಕುರಿತು ಅರಿವು ಮೂಡಿಸಲು ಬ್ಯೂಟೀಶಿಯನ್‌ಗಳ ಮೂಲಕ ಯತ್ನಿಸಬೇಕೆಂದು ಇಂತಹ ಯೋಜನೆ ಹಾಕಿಕೊಳ್ಳಲಾಗಿದೆ. ಜನವರಿಯಲ್ಲಿ ಈ ಕುರಿತು ಕಾರ್ಯಾಗಾರ ನಡೆಸಿ ತರಬೇತಿ ನೀಡಿ ಯೋಜನೆಗೆ ಚಾಲನೆ ನೀಡಲಾಗುವುದು. 
– ಡಾ| ನಾಗಭೂಷಣ್‌ ಉಡುಪ, ತಾಲೂಕು ಆರೋಗ್ಯಾಧಿಕಾರಿ, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next