Advertisement

ಜ್ವಾಲಾಮುಖಿ ಸ್ಫೋಟದಿಂದ ಉಂಟಾದ ಸುಂದರ ಪ್ರವಾಸಿ ತಾಣ, ಇಲ್ಲಿದೆ ಎಮರಾಲ್ಡ್ ಐಲ್ಯಾಂಡ್ ಪರಿಚಯ !

12:17 PM Sep 27, 2020 | Mithun PG |

ಬೆಂಗಳೂರು: ಮೂರು ತಿಂಗಳ ವೀಸಾ ಪಡೆದು ಐರ್ಲೆಂಡ್ ನ ಡಬ್ಲಿನ್ ವಿಮಾನ ನಿಲ್ದಾಣದಲ್ಲಿ ಇಳಿದಾಗ  ರಾತ್ರಿ ಏಳರ ಸಮಯ. ಸಣ್ಣಗೆ ಮಂಜಿನ ಮಳೆಯಿಂದಾಗಿ  ಛಳಿಗಾಳಿ ಬೀಸುತ್ತಿತ್ತು. ಎಮರಾಲ್ಡ್ ಐಲ್ಯಾಂಡ್ ಎಂದು ಕರೆಯಲ್ಪಡುವ ಈ ದೇಶ ನಿಜಕ್ಕೂ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ.

Advertisement

ಪ್ರತಿ ಶನಿವಾರ ಅಥವಾ ಭಾನುವಾರ ಇಲ್ಲಿ ಪ್ರವಾಸ ಆರಂಭವಾಗುತ್ತದೆ. ಉತ್ತರ ಐರ್ಲೆಂಡ್ ಬ್ರಿಟಿಷ್‌ ಆಳ್ವಿಕೆಯಲ್ಲಿದ್ದು, ಇಲ್ಲಿಯ ಕ್ಯಾರಿಕ್-ಒ-ರೀಡ್ (Carrik O reed) Gaints causeway, ಸುಂದರವಾದ ಪ್ರವಾಸ ತಾಣ. ಅರವತ್ತು ಸಾವಿರ ವರ್ಷಗಳ ಹಿಂದೆ ಜ್ವಾಲಾಮುಖಿಯ ಸ್ಫೋಟದಿಂದ ಉಂಟಾದ ಸುಮಾರು ನಲವತ್ತು ಸಾವಿರ ಬೆಸಾಲ್ಟ್‌ ಕಂಬಗಳು ಧೀಮಂತವಾಗಿ ನಿಂತಿರುವ ಕಡಲ ತೀರ. ಕೆಲವು ಕಂಬಗಳಿಗೆ 4, 5, 7 ಹಾಗು 8 ಬದಿಗಳಿವೆ. 6 ಬದಿಗಳ (hexagon)  ಕಂಬಗಳೇ ಜಾಸ್ತಿಯಾಗಿ ಕಾಣಸಿಗುತ್ತದೆ.

ಘನೀಭೂತ ಲಾವಾದ ಈ ಕಲ್ಲುಗಂಬಗಳ ಗರಿಷ್ಟ ಎತ್ತರ 12 ಮೀಟರ್ ಅಂದರೆ 39 ಅಡಿಗಳು. ಕೆಲವು ಕಡೆ ಕ್ಲಿಫ್ ಗಳಲ್ಲಿ 28 ಮೀಟರ್ ಇದ್ದು ಮಜಬೂತಾಗಿ ಇವೆ. ಶತಮಾನಗಳ ಇತಿಹಾಸ ಹೊಂದಿರುವ ಈ ಕಲ್ಲು ಕಂಬಗಳು ಕಾಲನ ಹೊಡೆತ ಎದುರಿಸಿ ನಿಂತಿರುವ ಉದಾಹರಣೆಗಳು. ಇದೆಲ್ಲವನ್ನೂ ದಾಟಿ ಮುಂದೆ ಸಿಗುವುದೇ ಕ್ಯಾರಿಕ್-ಒ-ರೀಡ್. ಬ್ಯಾಲಿಂಟಾಯ್, ಅಂಟ್ರಿಮ್ ಕೌಂಟಿಯಲ್ಲಿ ಪವಡಿಸಿರುವ ಈ ಸುಂದರ ಸಮುದ್ರತೀರ ನಯನ ಮನೋಹರ.

ಇಲ್ಲಿ ಅನತಿ ದೂರದಲ್ಲಿ ಇರುವ ಒಂದು ದ್ವೀಪಕ್ಕೆ ಹೋಗಲು ವೈರಿನ ರೋಪ್ ಸೇತುವೆಯನ್ನು ನಿರ್ಮಿಸಿದ್ದಾರೆ. 20 ಮೀಟರ್ ಉದ್ದ ಇರುವ ಈ ಸೇತುವೆ ಭೋರ್ಗರೆಯುವ ಸಮುದ್ರದ ಮೇಲೆ 30 ಮೀಟರ್ ( 98 ಅಡಿಗಳು) ಎತ್ತರದಲ್ಲಿ ಇದೆ. ಬೆಟ್ಟದಿಂದ ದೂರದಲ್ಲಿ ಸ್ಕಾಟ್ಲೆಂಡ್‌ ಹಾಗು ಲಾತ್ಲಿನ್ ದ್ವೀಪವನ್ನು ನೋಡಬಹುದು. ಹದಿನಾರು ಸಾವಿರ ಪೌಂಡು ವೆಚ್ಚದಲ್ಲಿ ಕಟ್ಟಿರುವ ಈ ಹಗ್ಗದ ತೂಗು ಸೇತುವೆಯ ಮೇಲೆ ಒಂದು ಸಲಕ್ಕೆ ಎಂಟು ಮಂದಿ ನಡೆದು ಹೋಗಬಹುದು. ಇದೊಂದು ಅದ್ಭುತವಾದ ಅನುಭವ.

Advertisement

ಸಸ್ಯಾಹಾರ ಸಿಗದೆ ಇರುವುದರಿಂದ ನಾವು ಮನೆಯಿಂದ ಕೊಂಡು ಹೋದ ಆಹಾರವನ್ನು ಸೇವಿಸುತ್ತಾ ನಯನ ಮನೋಹರ ಪ್ರಕೃತಿಯ ಮಡಿಲಲ್ಲಿ ಒಂದಾದೆವು.  ಈ ಪ್ರದೇಶ ನ್ಯಾಷನಲ್ ಟ್ರಸ್ಟ್ ಅಡಿ ಇದ್ದು  ಯುನೆಸ್ಕೋ ನಿಂದ World Heritage ಎಂದು ಘೋಷಿಸಲ್ಪಟ್ಟಿದೆ.

-ನಾಗಮಣಿ ನಾರಾಯಣ

ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next