ಮಲ್ಪೆ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆ – ಗಾಳಿಗೆ ಸಮುದ್ರ ಪ್ರಕ್ಷುಬ್ಧಗೊಂಡಿದ್ದು ಅಲೆಗಳ ಅಬ್ಬರಕ್ಕೆ ಕುತ್ಪಾಡಿ ಪಡುಕರೆ, ಉದ್ಯಾವರ ಕನಕೋಡಗಳಲ್ಲಿ ಕಡಲ್ಕೊರೆತ ಕಾಣಿಸಿಕೊಂಡಿದೆ.
ಸುಮಾರು 5-6 ವರ್ಷಗಳ ಹಿಂದೆ ಈ ಭಾಗದಲ್ಲಿ ಕೊರೆತ ತಡೆಯಲು ಹಾಕಲಾದ ಕಲ್ಲುಗಳು ಅಲೆಯ ಹೊಡೆತಕ್ಕೆ ಈಗಾಗಲೇ ಸಮುದ್ರ ಸೇರಿವೆ. ಕಾಂಕ್ರೀಟ್ ರಸ್ತೆಯ ಸಮೀಪದ ವರೆಗೆ ಕೊರೆಯುತ್ತ ಬಂದಿದ್ದು ಮೀನುಗಾರಿಕಾ ರಸ್ತೆ ಅಪಾಯದ ಭೀತಿ ಎದುರಿಸುತ್ತಿದೆ.
ಕುತ್ಪಾಡಿ ಪಡುಕರೆಯಿಂದ ಕನಕೋಡ ಪಂಢರೀನಾಥ ಭಜನಾ ಮಂದಿರದ ಮುಂದಕ್ಕೆ ಹಲವಾರು ಕಡೆಗಳಲ್ಲಿ ತಡೆಗೋಡೆ ಮೇಲೇರಿ ಬರುತ್ತಿರುವ ಅಲೆಗಳು ಕಾಂಕ್ರೀಟ್ ರಸ್ತೆಗೆ ಅಪ್ಪಳಿಸುತ್ತಿವೆ. ಅಲೆಯ ಹೊಡೆತಕ್ಕೆ ತಡೆಗೋಡೆ ಕುಸಿಯಲಾರಂಭಿಸಿದೆ.
ಕುತ್ಪಾಡಿ ಉದ್ಯಾವರ ಗಡಿ ಪ್ರದೇಶವಾದ ಈ ಭಾಗದಲ್ಲಿ ಕಳೆದ 5-6 ವರ್ಷಗಳಿಂದ ಯಾವುದೇ ಕೊರೆತ ಉಂಟಾಗಿಲ್ಲ. ಸಮುದ್ರದಲ್ಲಿ ಕೆಲವೊಂದು ಭಾಗದಲ್ಲಿ ಸುಳಿ ಏಳುತ್ತದೆ. ಸುಳಿ ಬಂದ ಜಾಗದಲ್ಲಿ ಕೊರೆತ ಉಂಟಾಗುತ್ತದೆ. ಇದು ಮರಳನ್ನು ಕೊರೆಯುತ್ತಾ ಹೋಗುತ್ತದೆ ಎನ್ನುತ್ತಾರೆ ಸ್ಥಳೀಯರಾದ ಶಿವರಾಮ ಪುತ್ರನ್ ಅವರು.
ಸಂಭಾವ್ಯ ಅಪಾಯದ ಬಗ್ಗೆ ಸ್ಥಳೀಯರು ಜನಪ್ರತಿನಿಧಿಗಳ ಗಮನ ಸೆಳೆದಿದ್ದಾರೆ. ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ಕಾಪು ಶಾಸಕ ವಿನಯ ಕುಮಾರ ಸೊರಕೆ ಅವರು ಅತೀ ಅಪಾಯ ಉಂಟಾಗುವ ಕಡೆಗಳಲ್ಲಿ ತಾತ್ಕಾಲಿಕ ಕಲ್ಲು ಹಾಕಿ ಭದ್ರಪಡಿಸಲು ಬಂದರು ಇಲಾಖೆಯ ಎಂಜಿನಿಯರ್ ನಾಗರಾಜ್ ಅವರಿಗೆ ಸೂಚನೆ ನೀಡಿದ್ದಾರೆ. ಕೊರೆತ ತೀವ್ರಗೊಂಡ ಪ್ರದೇಶಕ್ಕೆ ಕಲ್ಲು ಹಾಕುವ ಕಾರ್ಯ ಆರಂಭಗೊಂಡಿದೆ. ಎಂಜಿನಿಯರ್ ನಾಗರಾಜ್ ಅವರು ಬೆಳಗ್ಗಿನಿಂದ ರಾತ್ರಿವರೆಗೂ ಪಡುಕರೆಯಲ್ಲಿ ಮೊಕ್ಕಾಂ ಹೂಡಿದ್ದಾರೆ.
ಚಿತ್ರ: ನಟರಾಜ್ ಮಲ್ಪೆ