ಇಲಾಖೆ ಒಂದಿಷ್ಟು ಎಚ್ಚರ ವಹಿಸಿದರೆ ಈ ಬೀಚ್‌ಗಳ ತೀರವನ್ನು ಇನ್ನಷ್ಟು ಸುರಕ್ಷಿಗೊಳ್ಳಬಹುದು. ಜೀವರಕ್ಷಕರ ಕೊರತೆಯಿಂದ ಹಿಡಿದು ಎಲ್ಲ ಬಗೆಯ ಕೊರತೆ ಈ ಸಮುದ್ರ ತೀರದಲ್ಲಿದೆ.
Advertisement
ಉಳ್ಳಾಲ ಬೀಚ್, ಸೋಮೇಶ್ವರ ದೇಗುಲ ಸಮುದ್ರ ತೀರಪ್ರವಾಸಿಗರ ರಕ್ಷಣೆಗೆ ವ್ಯವಸ್ಥೆಯೇ ಇಲ್ಲ
ಉಳ್ಳಾಲ: ಉಳ್ಳಾಲ ಬೀಚ್, ಸೋಮೇಶ್ವರ ದೇವಸ್ಥಾನ ಬಳಿಯ ಸಮುದ್ರ ತೀರ ಮತ್ತು ಉಚ್ಚಿಲ ಎಂಡ್ ಪಾಯಿಂಟ್‌ಗಳಲ್ಲಿ ಅಳಿವೆ ಬಾಗಿಲು ಮತ್ತು ಸಮುದ್ರ ಕೊರೆತದಿಂದ ಅತ್ಯಂತ ಅಪಾಯಕಾರಿ ಸಮುದ್ರ ತೀರಗಳಾಗಿವೆ. ವಾರಾಂತ್ಯ ಮತ್ತು ರಜಾ ದಿನಗಳಲ್ಲಿ ಪ್ರವಾಸಿಗರ ದಂಡೇ ಆಗಮಿಸಿದರೂ ಪ್ರವಾಸೋದ್ಯಮದ ನಿರ್ಲಕ್ಷéದಿಂದ ಇಲ್ಲಿ ಪ್ರವಾಸಿಗರ ರಕ್ಷಣೆಗೆ ಯಾವುದೇ ವ್ಯವಸ್ಥೆ ಇಲ್ಲ.
ಸುವ ಕಾರ್ಯ ಮಾಡಿದರೆ, ಮೊಗವೀರ ಪಟ್ಣದ ಮೀನುಗಾರರು ಮತ್ತು ಶಿವಾಜಿ ಜೀವರಕ್ಷಕದಳ ಮತ್ತು ಜೀವರಕ್ಷಕ ಈಜುಗಾರರ ಸಂಘದ ಸದಸ್ಯರೇ ಪ್ರವಾಸಿಗರ ರಕ್ಷಣೆಯ ಕಾರ್ಯ ನಿರ್ವಹಿಸುತ್ತಾರೆ. ಉಳ್ಳಾಲದಲ್ಲಿ ಎಚ್ಚರಿಕೆಯ ಫಲಕವೊಂದು ಬಿಟ್ಟರೆ ಬೇರೆ ರಕ್ಷಣಾ ವ್ಯವಸ್ಥೆಗಳಿಲ್ಲ. ತುರ್ತು ಸಂದರ್ಭ 300 ಮೀಟರ್ ದೂರ ದಲ್ಲಿರುವ ಆಸ್ಪತ್ರೆ ಮತ್ತು 108 ಆ್ಯಂಬುಲೆನ್ಸ್‌ನು° ಬಳಸಿಕೊಳ್ಳಬೇಕು. ಪ್ರತೀ ದಿನ ಪೊಲೀಸ್ ಗಸ್ತು ವಾಹನ ಹೊಯ್ಸಳ ಪ್ರವಾಸಿಗರನ್ನು ಎಚ್ಚರಿಸುವ ಕಾರ್ಯ ನಡೆಸುತ್ತಿದೆ. ಇಲ್ಲಿರುವ ಸಿಸಿ ಕೆಮರಾಗಳು ಹಾಳಾಗಿವೆ.
ಸೋಮೇಶ್ವರ ಸಂಪೂರ್ಣ ನಿರ್ಲಕ್ಷ್ಯ
ಸೋಮೇಶ್ವರ ಸಮುದ್ರ ತೀರ ಪ್ರವಾಸೋದ್ಯಮ ಇಲಾಖೆಯಿಂದ ಸಂಪೂರ್ಣ ನಿರ್ಲಕ್ಷ್ಯಕ್ಕೀಡಾಗಿದೆ. ಇಲ್ಲಿ ಕರಾವಳಿ ಕಾವಲು ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ಥಳೀಯರಾದ ಆಶೋಕ್ ಸ್ವ ಇಚ್ಚೆಯಿಂದ ಪ್ರವಾಸಿಗರನ್ನು ರಕ್ಷಿಸುವ ಕಾರ್ಯ ನಡೆಸುತ್ತಿದ್ದಾರೆ. ಅವರು ಹಲವು ವರ್ಷಗಳಿಂದ 100ಕ್ಕೂ ಹೆಚ್ಚು ಪ್ರವಾಸಿಗರ ರಕ್ಷಣೆ ಮಾಡಿದರೂ ಈವರೆಗೆ ಅವರಿಗೆ ಯಾವುದೇ ಸವ ಲತ್ತನ್ನು ಪ್ರವಾಸೋದ್ಯಮ ಇಲಾಖೆ ಒದಗಿಸಿಲ್ಲ. ಜೀವರಕ್ಷಣೆಗೆ ಬೇಕಾದ ಮೂಲಸೌಕರ್ಯವೂ ಇಲ್ಲಿಲ್ಲ. ಎಚ್ಚರಿಕೆ ಫಲಕ ಗಳೂ ಸರಿಯಾಗಿಲ್ಲ. ಅವಘಡ ನಡೆದಾಗ ಆ್ಯಂಬುಲೆನ್ಸ್ ಸೇವೆ ಸೇರಿದಂತೆ ತುರ್ತು ಚಿಕಿತ್ಸೆಗೆ ಬೇಕಾದ ವ್ಯವಸ್ಥೆಗಳಿಲ್ಲ. ಸಿಸಿ ಕೆಮರಾ ಅಳವಡಿಸಿಲ್ಲ. ಉಚ್ಚಿಲದಲ್ಲಿಯೂ ಖಾಸಗಿ ಪ್ರವಾ ಸೋದ್ಯಮದ ಹೆಸರಿನಲ್ಲಿ ಬೋಟ್ ಆರಂಭಗೊಂಡಿದ್ದರೂ ಸ್ಥಳೀಯರ ಪ್ರತಿ
ಭಟನೆಯಿಂದ ಸ್ಥಗಿತಗೊಂಡಿದೆ. ಇಲ್ಲಿಯೂ ರಕ್ಷಣಾ ವ್ಯವಸ್ಥೆಗಳಿಲ್ಲ.
Related Articles
ಉಳ್ಳಾಲ ಮತ್ತು ಸೋಮೇಶ್ವರದಲ್ಲಿ ಪ್ರವಾಸಿಗರ ಪಾಲಿಗೆ ಜೀವರಕ್ಷಕರೇ ಆಧಾರವಾಗಿದ್ದು, ಪ್ರವಾಸೋದ್ಯಮ ಇಲಾಖೆ ಇಲ್ಲಿನ ಜೀವರಕ್ಷರಿಗೆ ರಕ್ಷಣಾ ಸಾಮಗ್ರಿ, ಗೌರವಧನ ನೀಡ ಬೇಕಿದೆ. ಮಳೆಗಾಲ ಮತ್ತು ಬೇಸಗೆ ಕಾಲದಲ್ಲಿ ಬೀಚ್‌ನಲ್ಲಿ ವಿಶ್ರಾಂತಿ ಪಡೆಯಲು ಆಶ್ರಯತಾಣ ಕಲ್ಪಿಸಬೇಕಿದೆ.
Advertisement
-ವಸಂತ ಕೊಣಾಜೆ
ಪಣಂಬೂರು-ಸುರತ್ಕಲ್ : ಸುಂದರ, ಆದರೆ ಅಪಾಯಕಾರಿ!ಪಣಂಬೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾದ ಬೀಚ್ ಪಣಂಬೂರು ಬೀಚ್.. ಸರ್ಫಿಂಗ್, ಬೀಚ್ ಫೆಸ್ಟ್ ಇತ್ಯಾದಿ ನಡೆಯುತ್ತದೆ. ಇದರ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ವಹಿಸಲಾಗಿತ್ತು. ಈಗ ಪ್ರವಾಸೋದ್ಯಮ ಇಲಾಖೆಯೇ ನಿರ್ವಹಿಸುತ್ತಿದೆ. ಬೀಚ್ ಬಳಿ ಒಂದೆಡೆ ಬ್ರೇಕ್ ವಾಟರ್ ಇದ್ದರೂ ಕೆಲವೆಡೆೆ ಸುರಕ್ಷಿತ. ಆದರೆ ಹವಾಮಾನ ವೈಪರೀತ್ಯದ ವೇಳೆ ಅಪಾಯಕಾರಿ. ಭಾರೀ ಗಾತ್ರದ ತೆರೆಗಳು ಅಪ್ಪಳಿಸುತ್ತವೆ. ಬೀಚ್‌ನಲ್ಲಿ ಅಪಾಯಕಾರಿ ಎಂಬ ಮುನ್ನೆಚ್ಚರಿಕೆ ಫಲಕವನ್ನು ಅಳವಡಿಸಲಾಗಿದೆ. ಕೋಸ್ಟ್‌ಗಾರ್ಡ್‌ನ 2 ಪೊಲೀಸರು ಹಾಗೂ ಸ್ಥಳೀಯ ಜೀವರಕ್ಷಕ ತಂಡದ 3-4 ಮಂದಿ ಸಿಬಂದಿ ಕಣ್ಗಾವಲು ನಡೆಸುತ್ತಾರೆ. ಮಳೆಗಾಲದಲ್ಲಿ ಮಾತ್ರ ಜಿಲ್ಲಾಡಳಿತದ ಆದೇಶದಂತೆ ಇಲ್ಲಿ ಯಾರೂ ಕೂಡ ಸಮುದ್ರಕ್ಕಿಳಿಯದಂತೆ ಗೃಹರಕ್ಷಕ ಸಿಬಂದಿ ಕಾವಲು ಕಾಯುತ್ತಾರೆ. ಅವರಿಗೆ ಸುರಕ್ಷಾ ಜಾಕೆಟ್ ಹಾಗೂ ಎಚ್ಚರಿಕೆ ಸಂದೇಶ ನೀಡುವ ಧ್ವನಿ ವರ್ಧಕ ಒದಗಿಸಲಾಗುತ್ತದೆ. ಉಳಿದಂತೆ ತುರ್ತು ಬಳಕೆಗೆ ಆ್ಯಂಬುಲೆನ್ಸ್ ಇತರ ರಕ್ಷಣಾ ವ್ಯವಸ್ಥೆ ಇಲ್ಲ. ಸ್ಥಳೀಯ ಪೊಲೀಸ್ ಠಾಣೆಯ ಆಧಿಕಾರಿಗಳು ಆಗಾಗ ಭೇಟಿ ನೀಡುತ್ತಿರುತ್ತಾರೆ.
ಸುರತ್ಕಲ್ ಬೀಚ್ ನಲ್ಲಿ ವ್ಯವಸ್ಥೆಯಿಲ್ಲ. ಸ್ಥಳೀಯರು ಪ್ರವಾಸಿಗರಿಗೆ ಸಮುದ್ರದ ಏರಿಳಿತದ ಕುರಿತು ಎಚ್ಚರಿಸುತ್ತಾರೆ. ಇಲಾಖೆಯಿಂದ ಯಾವುದೇ ಮುನ್ನೆಚ್ಚರಿಕೆ ಫಲಕ ಅಳವಡಿಸಿಲ್ಲ. ವಾರದ ರಜಾ ದಿನಗಳಲ್ಲಿ ಕೋಸ್ಟ್ ಗಾರ್ಡ್‌ನ ಓರ್ವ ಪೊಲೀಸ್ ಕಣ್ಗಾವಲು ನಡೆಸುತ್ತಾರೆ.ಅಪಾಯಕಾಲದಲ್ಲಿ ಸ್ಥಳೀಯರೇ ಆಶ್ರಯ. ಸರಿಯಾದ ಸುರಕ್ಷಾ ಕಿಟ್ ನೀಡಿಲ್ಲ. ತುರ್ತು ವ್ಯವಸ್ಥೆ ಇಲ್ಲ. ಸಮೀಪದಲ್ಲಿ ಎರಡು ಎಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳಿದ್ದು, ವಿದ್ಯಾರ್ಥಿಗಳಿಗೆ ಅವುಗಳೇ ಎಚ್ಚರಿಸಿ ಮುಂಜಾಗ್ರತೆ ವಹಿಸುತ್ತಿವೆ. ಸುರತ್ಕಲ್ ಬೀಚ್‌ನಲ್ಲಿ ಕೆಲ ದಿನಗಳ ಹಿಂದೆ ಜೀವಹಾನಿಯಾಗಿದ್ದು ಪೊಲೀಸ್ ವಾಹನದಲ್ಲೇ ಚಿಕಿತ್ಸೆಗಾಗಿ ಕೊಂಡೊಯ್ಯಲಾಗಿತ್ತು. ಸಿಸಿ ಕೆಮರಾ, ತುರ್ತು ಸಹಾಯವಾಣಿ ಫಲಕ, ಬೀಚ್ ಅಪಾಯದ ಬಗ್ಗೆ ಫಲಕ ವ್ಯವಸ್ಥೆ ಅಳವಡಿಸಬೇಕಿದೆ. -ಲಕ್ಷ್ಮೀನಾರಾಯಣ ರಾವ್ ಜೀವ ರಕ್ಷಕರ ಸೂಚನೆ ಪಾಲಿಸಿದರೆ ಸುರಕ್ಷಿತ
ತಣ್ಣೀರುಬಾವಿ ಬೀಚ್
ಮಂಗಳೂರು: ನಗರಕ್ಕೆ ಅತ್ಯಂತ ಸಮೀಪವಾಗಿರುವ ಬೀಚ್ ತಣ್ಣೀರು ಬಾವಿ. ಇದು ಬ್ಲೂ ಫ್ಲ್ಯಾಗ್ ಮಾನ್ಯತೆ ಪಡೆಯುವ ನಿರೀಕ್ಷೆಯಲ್ಲಿದೆ. ಇದು ಬೀಚ್ -1 ಮತ್ತು ಬೀಚ್-2 (ಫಾತಿಮಾ ಬೀಚ್) ಎಂಬ ಎರಡು ಭಾಗಗಳನ್ನು ಹೊಂದಿದೆ. ಸುಂದರ ಬೀಚ್‌ಗಳಲ್ಲಿ ಒಂದಾಗಿದ್ದು ಶನಿವಾರ ಮತ್ತು ರವಿವಾರ ಕನಿಷ್ಠ 10,000 ಮಂದಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಉಳಿದ ದಿನಗಳಲ್ಲಿ ಸುಮಾರು 3,000 ಮಂದಿ ಆಗಮಿಸುತ್ತಾರೆ. ಈ ಬೀಚ್‌ನ ಜಿಎಂಆರ್‌ನಿಂದ ಫಾತಿಮಾ ಚರ್ಚ್‌ವರೆಗಿನ ಎರಡು ಕಿ.ಮೀ. ವ್ಯಾಪ್ತಿಯನ್ನು ಖಾಸಗಿ ಸಂಸ್ಥೆ ನಿರ್ವಹಿಸುತ್ತಿದೆ. ಇಲ್ಲಿ ಇತ್ತೀಚಿನ ವರ್ಷಗಳಲ್ಲಿ ಅವಘಡಗಳು ಸಂಭವಿಸಿಲ್ಲ. ಬೀಚ್-1 ಸ್ವಲ್ಪ ಆಳವಿದೆ. ಬೀಚ್-2 ಬಹುತೇಕ ಸಮತಟ್ಟಾಗಿದೆ. ಈಜು ತಿಳಿದಿರುವ ಕೆಲವರು ನೀರಿನಲ್ಲಿ ಸ್ವಲ್ಪ ಮುಂದೆ ಹೋದರೆ ಈಜು ಬಾರದವರು ಅವರ ಹಿಂದೆ ಹೋದಾಗ ಸಮಸ್ಯೆಯಾಗುತ್ತದೆ. ಕೆಲವರು ಮದ್ಯ ಸೇವಿಸಿ ನೀರಿಗಿಳಿದು ಅಪಾಯವನ್ನು ತಂದೊಡ್ಡಿಕೊಳ್ಳುತ್ತಾರೆ.
ಬೀಚ್-1ರಲ್ಲಿ ವಿದ್ಯುತ್ ಕಂಪೆನಿಯೊಂದರ ಕಬ್ಬಿಣದ ಅವ ಶೇಷ ನೀರಿನಡಿ ಇದ್ದು, ಸುಮಾರು 50 ಮೀಟ ರ್ ಪ್ರದೇಶ ಅಪಾಯಕಾರಿ. ಇಲ್ಲಿ ನೀರಿಗೆ ಇಳಿಯುವುದನ್ನು ನಿರ್ಬಂಧಿಸಿ ಹಗ್ಗ ಕಟ್ಟಲಾಗಿದೆ. ಕೆಂಪು ಬಾವುಟ ಅಳವಡಿಸಲಾಗಿದೆ. ಜೀವರಕ್ಷಕರು ಯಾರೂ ನೀರಿಗೆ ಇಳಿಯದಂತೆ ನೋಡಿಕೊಳ್ಳುತ್ತಾರೆ. ಇಲ್ಲಿನ ಅಪಾಯಕಾರಿ ಅವ ಶೇಷ ತೆರವುಗೊಳಿಸಿದರೆ ಇನ್ನಷ್ಟು ಸುರಕ್ಷಿತ. 10 ಮಂದಿ ಜೀವ ರಕ್ಷಕರು
ಎರಡೂ ಕಡೆಗಳಲ್ಲಿ ಒಟ್ಟು 10 ಮಂದಿ ಜೀವ ರಕ್ಷಕರಿದ್ದಾರೆ. ಶನಿವಾರ ಮತ್ತು ರವಿವಾರ ಹೆಚ್ಚು ವರಿಯಾಗಿ ಇಬ್ಬರು ಇರುತ್ತಾರೆ. ಅವರೊಂದಿಗೆ ಸ್ಥಳೀಯ ಪೊಲೀಸರು, ಇಬ್ಬರು ಗೃಹರಕ್ಷಕ ದಳ ಸಿಬಂದಿ ಕೂಡ ನಿಗಾ ವಹಿಸುತ್ತಿದ್ದಾರೆ. ನಿರ್ವಹಣ ಸಂಸ್ಥೆ, ಕರಾವಳಿ ಕಾವಲು ಪೊಲೀಸರು, ಪ್ರವಾಸೋದ್ಯಮ ಇಲಾಖೆಯವರು ಮುನ್ನೆಚ್ಚರಿಕೆ ಫಲಕಗಳನ್ನು ಅಳವಡಿಸಿದ್ದಾರೆ. ಪದೇ ಪದೆ ಮೈಕ್‌ನಲ್ಲಿ ಎಚ್ಚರಿಕೆಗಳನ್ನು ನೀಡಲಾಗುತ್ತದೆ. ಬೀಚ್‌ಗೆ ಪ್ರವೇಶ ಪಡೆಯುವ ಸ್ಥಳಗಳಲ್ಲಿ ಸಿಸಿ ಕೆಮರಾ ಇದೆ. ಇದು ಸುಮಾರು 150 ಮೀಟರ್ ವ್ಯಾಪ್ತಿಯ ಕಣ್ಗಾವಲು ಹೊಂದಿದೆ. ಬೀಚ್-1ರಲ್ಲಿ ಈಜು ನಿಷೇಧಿಸಿ ಪ್ರವಾಸೋದ್ಯಮ ಇಲಾಖೆ ಫಲಕ ಹಾಕಿದೆ. ಮದ್ಯ, ಮಾದಕ ಪದಾರ್ಥ ಸೇವಿಸುವವರಿಗೆ ಇರುವ ಶಿಕ್ಷೆಯ ಪ್ರಮಾಣ ವನ್ನೂ ಫಲಕದಲ್ಲಿ ಉಲ್ಲೇಖೀಸಲಾಗಿದೆ. “ಸಮುದ್ರಕ್ಕೆಇಳಿಯುವಾಗ ಜೀವರಕ್ಷಕ ಪಡೆಯಸಲಹೆ ಪಡೆಯಬೇಕು’ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಮುನ್ನೆಚ್ಚರಿಕೆ, ರಕ್ಷಣ ಕ್ರಮ
ಲೈಫ್ ಜಾಕೆಟ್, ರೋಪ್, ಬೋಟ್, ಸ್ಟ್ರೆಚರ್ ಮೊದಲಾದ ಉಪಕರಣಗಳಿದ್ದು ತರಬೇತಿ ಹೊಂದಿದ ಸಿಬಂದಿ ತಯಾರಾಗಿರುವುದು, ಪ್ರವಾಸಿಗಳಿಗೆ ಸಲಹೆ ನೀಡುತ್ತಿರುವುದು ಕಂಡುಬರುತ್ತದೆ. ಇಲ್ಲಿನ ಬೀಚ್‌ಗೆ ಬೆಳಗ್ಗೆ 8.30ರಿಂದ ಸೂರ್ಯಾಸ್ತದವರೆಗೂ ಪ್ರವೇಶ ಅವಕಾಶವಿದೆ. ಈ ಅವಧಿಯಲ್ಲಿ ಲೈಫ್ಗಾರ್ಡ್‌ಗಳು ನಿರಂತರ ಸೇವೆಗೆ ಸಿದ್ಧರಾಗಿರುತ್ತಾರೆ. ಲೈಫ್ಗಾರ್ಡ್‌ಗಳ ಸೂಚನೆ ಪಾಲಿಸಿದರೆ ತಣ್ಣೀರುಬಾವಿ ಅತ್ಯಂತ ಸುರಕ್ಷಿತವೆನ್ನಬಹುದು. -ಸಂತೋಷ್ ಬೊಳ್ಳೆಟ್ಟು ಅಂತಾರಾಷ್ಟ್ರೀಯವಾಗಿ ಗುರುತಿಸಿಕೊಂಡ ಸಸಿಹಿತ್ಲು ಬೀಚ್
ಮೂಲ ಸೌಕರ್ಯ ಇಲ್ಲದೇ ನಲುಗುತ್ತಿದೆ
ಹಳೆಯಂಗಡಿ: ಸರ್ಫಿಂಗ್ ಮೂಲಕ ಏಕಾಏಕಿ ಅಂತಾರಾಷ್ಟ್ರೀಯ ವಾಗಿ ಗುರುತಿಸಿಕೊಂಡ ಸಸಿಹಿತ್ಲು ಮುಂಚ ಬೀಚ್‌ನಲ್ಲಿ ಮೂಲ ಸೌಕರ್ಯಗಳಿಲ್ಲ. ಸುತ್ತಮುತ್ತಲಿನ ಮರಗಳ ಸಹಿತ ಬೀಚ್‌ನ ಮರಳು ಪ್ರದೇಶವು ಸಮುದ್ರಕ್ಕೆ ಸೇರಿರುವುದರಿಂದ ಪ್ರವಾಸಿ
ಗರಿಗೆ ಸುರಕ್ಷಿತವಲ್ಲ ಎನ್ನುತ್ತಾರೆ ಸ್ಥಳೀಯರು. ಒಂದು ಭಾಗದಲ್ಲಿ ಮಾತ್ರ ಶಾಶ್ವತ ತಡೆಗೋಡೆ ಇದ್ದರೂ ಅದರ ಮೇಲೆ ನಿಂತರೆ ಅಲೆಯಾರ್ಭಟಕ್ಕೆ ಕಾಲು ಜಾರಿ ಬೀಳುವ ಅಪಾಯ ಹೆಚ್ಚು. ಒಂದು ಭಾಗದಲ್ಲಿ ಅಲೆಗಳ ತೀವ್ರತೆ ಹೆಚ್ಚಿದ್ದರೆ ಮತ್ತೂಂದು ಕಡೆ ನದಿಯ ಸಂಗಮ ಪ್ರದೇಶವಾಗಿರುವುದರಿಂದ ಸುಳಿಯಲ್ಲಿ ಸಿಲುಕುವ ಅಪಾಯ ಇದೆ.
ಇಲ್ಲಿ ಯಾವುದೇ ಸುರಕ್ಷಾ ವ್ಯವಸ್ಥೆ ಇಲ್ಲ. ಜೀವರಕ್ಷಕ ದಳದ ಕೊಠಡಿಯ ಅವಶೇಷಗಳು ಎದ್ದು ಕಾಣಿಸುತ್ತಿವೆ. ಕರಾವಳಿ ಕಾವಲು ಪಡೆಗೆ ಇಲ್ಲಿನ ಸುರಕ್ಷೆಯ ಹೊಣೆ ನೀಡಲಾಗಿದೆ. ಆಗಾಗ್ಗೆ ಗೃಹರಕ್ಷಕ ದಳದವರು ಭೇಟಿ ನೀಡುವುದುಂಟು. ಶನಿವಾರ, ರವಿವಾರ ಸ್ಥಳದಲ್ಲೇ ಮೊಕ್ಕಾಂ ಹೂಡುತ್ತಾರೆ. ಪ್ರವಾಸಿಗರು ಅಪಾಯದಲ್ಲಿ ಸಿಲುಕಿದರೆ ರಕ್ಷಿಸುವ ಜೀವ ರಕ್ಷಕ ಪಡೆ ಇಲ್ಲಿಲ್ಲ. ಸ್ಥಳೀಯ ಮೀನುಗಾರರೇ ಸ್ಪಂದಿಸುತ್ತಿದ್ದಾರೆ.
ಬೀಚ್‌ನ ಅಭಿವೃದ್ಧಿಯ ಆರಂಭ ದಿಂದಲೂ ಶುಚಿತ್ವದ ಹೊಣೆ ಹೊತ್ತ ವರು ಮಾಜಿ ಪಂಚಾಯತ್ ಸದಸ್ಯೆ ದೇವಕಿ ಮೆಂಡನ್. ಪ್ರವಾಸಿಗರಿಗೆ ಎಚ್ಚರಿಕೆ ನೀಡುವುದು, ತ್ಯಾಜ್ಯ ಸಂಗ್ರಹ ಇತ್ಯಾದಿ ನಿರ್ವಹಿಸುತ್ತಾರೆ. ಈ ಹಿಂದೆ ಪಂಚಾಯತ್‌ನಿಂದ ಸಿಗುತ್ತಿದ್ದ ಸಂಬಳ ನಿಂತಿದ್ದರೂ ಚುರುಮುರಿ, ಶರಬತ್ ಮಾರಿ ಬದುಕುತ್ತಿದ್ದಾರೆ. ದುರ್ಘಟನೆ ಸಂಭವಿಸಿದರೆ ತತ್‌ಕ್ಷಣ ಸ್ಥಳೀಯ ಮೀನುಗಾರರನ್ನು ಸಂಪರ್ಕಿಸುತ್ತಾರೆ. ಪ್ರವಾಸೋದ್ಯಮ ಇಲಾಖೆಗೆ ಒತ್ತಡ
ಬೀಚ್ ಅಭಿವೃದ್ಧಿಗೆ ಗ್ರಾ.ಪಂ.ಗೆ ಯಾವುದೇ ಅಧಿ ಕಾರ ಇಲ್ಲ.ಎಲ್ಲವೂ ಪ್ರವಾಸೋದ್ಯಮ ಇಲಾಖೆಯ ಮೂಲಕ ನಡೆಯಬೇಕು. ಇಲ್ಲಿನ ಪರಿಸ್ಥಿತಿಯನ್ನು ಈಗಾಗಲೇ ಇಲಾಖೆಯ ಗಮನಕ್ಕೆ ತಂದಿದ್ದೇವೆ. ಇಲಾಖೆ ಸ್ಪಂದಿಸಬೇಕಾಗಿದೆ.
-ಪೂರ್ಣಿಮಾ, ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷೆ - ನರೇಂದ್ರ ಕೆರೆಕಾಡು