Advertisement

ಕಾರ್ಕಳ ಉತ್ಸವ ಮಾದರಿಯಲ್ಲಿ ‘ಬೀಚ್‌ ಕರಾವಳಿ ಉತ್ಸವ’!

11:15 AM Mar 24, 2022 | Team Udayavani |

ಮಹಾನಗರ : ಯಶಸ್ವಿಯಾಗಿ ಆಯೋಜನೆಗೊಂಡ ‘ಕಾರ್ಕಳ ಉತ್ಸವ ‘ದ ಮಾದರಿಯಲ್ಲಿ ಮಂಗಳೂರಿನಲ್ಲಿ ಮುಂದಿನ ತಿಂಗಳು ‘ಬೀಚ್‌ ಕರಾವಳಿ ಉತ್ಸವ’ ಆಯೋಜನೆಗೆ ದ.ಕ. ಜಿಲ್ಲಾಡಳಿತ ಸಿದ್ಧತೆ ಆರಂಭಿಸಿದೆ.

Advertisement

ಪ್ರತೀ ವರ್ಷ ಸಾರ್ವ ಜನಿಕರು ಸಂಭ್ರಮದಿಂದ ಪಾಲ್ಗೊಳ್ಳುವ ಕರಾವಳಿ ಉತ್ಸವವನ್ನು ಈ ಬಾರಿ ಬೀಚ್‌ ಕರಾವಳಿ ಉತ್ಸವ ಮಾದರಿ ಯಲ್ಲಿ ನಡೆಸಲು ಸಿದ್ಧತೆ ನಡೆಸಲಾಗಿದೆ. ಬೀಚ್‌ ಕೇಂದ್ರಿತವಾಗಿಯೇ ನಡೆಯಲಿರುವ ಉತ್ಸವವು ಕರಾವಳಿ ಪ್ರವಾಸೋದ್ಯದಲ್ಲಿ ಆಶಾಭಾವ ಮೂಡಿಸಿದೆ. ಜತೆಗೆ ಸ್ಥಳೀಯ ಆರ್ಥಿಕ ಚಟುವಟಿಕೆಗೆ ಇದರಿಂದಾಗಿ ಬಹು ಆಯಾಮದಲ್ಲಿ ಲಾಭ ತರುವ ನಿರೀಕ್ಷೆ ಹುಟ್ಟಿಸಿದೆ. ಕಲಾವಿದರು ಸೇರಿದಂತೆ ವ್ಯಾಪಾರ ವಹಿವಾಟಿಗೆ ಹೆಚ್ಚು ಅವಕಾಶ ಲಭಿಸುವ ಸಾಧ್ಯತೆಯಿದೆ.

ಮುಂದಿನ ತಿಂಗಳು ಬೀಚ್‌ ಕರಾವಳಿ ಉತ್ಸವ ಆಯೋಜನೆಯಾಗಲಿದೆ. ಯಾವ ಬೀಚ್‌, ದಿನಾಂಕ, ಉತ್ಸವದಲ್ಲಿ ಏನಿರ ಬೇಕು? ಇತ್ಯಾದಿ ವಿಚಾರದ ಬಗ್ಗೆ ಮುಂದಿನ ವಾರ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಹತ್ವದ ಸಭೆ ಆಯೋಜಿಸಲಾಗಿದೆ. ಉತ್ಸವದ ರೂಪರೇಖೆಗಳನ್ನು ಈಗಾಗಲೇ ತಜ್ಞರು ನಡೆಸುತ್ತಿದ್ದಾರೆ. ಕರಾವಳಿ ಉತ್ಸವ, ಬೀಚ್‌ ಅನ್ನು ಜತೆಯಾಗಿಸಿಕೊಂಡು ವಿಭಿನ್ನ ನೆಲೆಯಲ್ಲಿ ಉತ್ಸವ ಆಯೋಜನೆಗೆ ಈ ಬಾರಿ ನಿರ್ಧರಿಸಲಾಗಿದೆ. ಬೀಚ್‌ ಗಳನ್ನು ಕೇಂದ್ರೀಕರಿಸಿಕೊಂಡು ಉತ್ಸವ ನಡೆಯಲಿದೆ.

ಈ ಮಧ್ಯೆ ಈ ಹಿಂದೆ ಕರಾವಳಿ ಉತ್ಸವ ಸಂದರ್ಭ ನಡೆಯುತ್ತಿದ್ದ ಕದ್ರಿ ಪಾರ್ಕ್‌ ನ ಸಾಂಸ್ಕೃತಿಕ ಕಾರ್ಯಕ್ರಮ, ಉತ್ಸವ ಮೈದಾನದ ಸಾಂಸ್ಕೃತಿಕ ಉತ್ಸವ, ವಸ್ತು ಪ್ರದರ್ಶನ ಸಹಿತ ಎಲ್ಲ ಪ್ರಕಾರವನ್ನು ಬೀಚ್‌ನಲ್ಲಿಯೇ ನಡೆಸುವ ಬಗ್ಗೆ ಸದ್ಯ ಮಾತುಕತೆ ನಡೆಯುತ್ತಿದೆ. ಆದರೆ ಈ ಬಗ್ಗೆ ಅಂತಿಮ ತೀರ್ಮಾನ ಮುಂದಿನ ವಾರ ನಡೆಯುವ ಸಭೆಯಲ್ಲಿ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಒಂದೇ ಕಡೆ ಉತ್ಸವ?

Advertisement

2019ರಲ್ಲಿ ಜ. 10ರಿಂದ ಕರಾವಳಿ ಉತ್ಸವ ಆರಂಭವಾಗಿ, 9 ದಿನಗಳ ಕಾಲ ನಡೆದಿತ್ತು. ಉತ್ಸವದುದ್ದಕ್ಕೂ ರಾಜ್ಯದ ವಿವಿಧ ಜಿಲ್ಲೆಗಳ ಕಲಾ ತಂಡಗಳಿಂದ ವೈವಿದ್ಯಮಯ ಕಲಾ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ನಡೆದಿತ್ತು. ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ, ಯುವ ಉತ್ಸವ ಕದ್ರಿ ಪಾರ್ಕ್‌ನಲ್ಲಿ, ಪಣಂಬೂರಿನಲ್ಲಿ ಗಾಳಿಪಟ ಉತ್ಸವ ನಡೆದಿತ್ತು. ಬಳಿಕ ಲಾಲ್‌ಬಾಗ್‌ ಬಳಿ ಇರುವ ಕರಾವಳಿ ಉತ್ಸವ ಮೈದಾನದಲ್ಲಿ ವಸ್ತು ಪ್ರದರ್ಶನ ಮುಂದುವರಿದಿತ್ತು. ಆದರೆ ಈ ಬಾರಿ ಈ ಎಲ್ಲವನ್ನೂ ಸೇರಿಸಿಕೊಂಡು ಕಾರ್ಕಳದಲ್ಲಿ ಇತ್ತೀಚೆಗೆ ನಡೆದ ಕಾರ್ಕಳ ಉತ್ಸವ ಸ್ವರೂಪದಂತೆಯೇ ಬೀಚ್‌ ಕರಾವಳಿ ಉತ್ಸವವನ್ನು ಬೀಚ್‌ನಲ್ಲೇ ಆಯೋಜಿಸಲು ಚಿಂತನೆ ನಡೆಸಲಾಗಿದೆ.

ಮುಂದಿನ ತಿಂಗಳು ಬೀಚ್‌ ಕರಾವಳಿ ಉತ್ಸವ

ಜಿಲ್ಲೆಯಲ್ಲಿ ಬೀಚ್‌ ಕರಾವಳಿ ಉತ್ಸವ ವನ್ನು ಎಪ್ರಿಲ್‌ನಲ್ಲಿ ನಡೆಸಲು ಸಿದ್ಧತೆ ನಡೆಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್‌ ಕುಮಾರ್‌, ಸಂಸದ ನಳಿನ್‌ ಕುಮಾರ್‌ ಕಟೀಲು ಸಹಿತ ಪ್ರಮುಖರು ಜತೆಯಾಗಿ ಮುಂದಿನ ವಾರ ಸಿದ್ಧತೆಯ ಕುರಿತ ಮಹತ್ವದ ಸಭೆ ನಡೆಸಲಿದ್ದೇವೆ. ಬೀಚ್‌ ಕರಾವಳಿ ಉತ್ಸವದ ಸ್ವರೂಪ, ದಿನಾಂಕವನ್ನು ಸಭೆಯಲ್ಲಿ ಕೈಗೊಳ್ಳಲಾಗುವುದು. – ಡಾ| ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ, ದ.ಕ

Advertisement

Udayavani is now on Telegram. Click here to join our channel and stay updated with the latest news.

Next