ಕಲಬುರಗಿ: ಅಭಿನಯ ಕಲೆ ಜೀವನ ಕಲೆಗೆ ಬೇಕಾಗಿದೆ. ಅದು ಬದುಕಿನ ಸಮಸ್ಯೆಗಳನ್ನು ಎದುರಿಸುವ ಶಕ್ತಿ ನೀಡುತ್ತದೆ. ನಾಟಕಾಭಿನಯ ಶೈಕ್ಷಣಿಕ ಕ್ಷೇತ್ರದ ಭಾಗವಾಗಬೇಕು. ಪಠ್ಯಪುಸ್ತಕ ಹೊರತುಪಡಿಸಿ ಜ್ಞಾನ ಹೆಚ್ಚಿಸುವ ಪುಸ್ತಕ ಹಾಗೂ ಕಲೆ ಕಲಿಯಬೇಕು. ಅವಮಾನಗಳನ್ನು ಮೀರಿ ಗುರಿ ಮುಟ್ಟಲು ಯತ್ನಿಸಬೇಕು. ಗುರಿ ಮುಟ್ಟಿದಾಗ ಸನ್ಮಾನಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ ಎಂದು ಹಾಸ್ಯ ನಟ ರಂಗಭೂಮಿ ಕಲಾವಿದ ಮಂಡ್ಯ ರಮೇಶ ಹೇಳಿದರು.
ಎಕೆಆರ್ ದೇವಿ ವಿಜ್ಞಾನ ಪಿಯು ಕಾಲೇಜಿನಲ್ಲಿ ಸಮೃದ್ಧಿ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ಆರೋಗ್ಯ ಸಮೃದ್ಧಿ ಶಿಬಿರ ಹಾಗೂ ಪ್ರತಿಭಾವಂತ ಮಕ್ಕಳಿಗೆ “ಕಲೆ ಸಮೃದ್ಧಿ’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಎಲುಬು ಹಾಗೂ ಕೀಲು ತಜ್ಞ ಡಾ| ಆಲೋಕ ಸಿ. ಪಾಟೀಲ ರೇವೂರ ಮಾತನಾಡಿ, ಎಲ್ಲ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಶ್ರೇಷ್ಠ. ಯುವಕರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು. ಆರೋಗ್ಯ ಸರಿಯಿದ್ದಾಗ ಮಾತ್ರ ಬದುಕಲ್ಲಿ ಯಶಸ್ಸು ಸಾಧ್ಯ. ವೈಯಕ್ತಿಕ ಆರೋಗ್ಯದೊಂದಿಗೆ ಸಾಮಾಜಿಕ ಆರೋಗ್ಯ ಕೂಡ ನಮ್ಮ ಜವಾಬ್ದಾರಿ ಎಂದರು.
ಆರೋಗ್ಯದ ಅರಿವು ಅಪಾರ ನೆರವು ವಿಷಯದ ಬಗ್ಗೆ ಎಂಆರ್‌ಎಂಸಿ ವೈದ್ಯಾಧಿಕಾರಿ ಡಾ| ಮನ್ನೇ ನಾಗರಾಜ ಮಾತನಾಡಿ, ಆರೋಗ್ಯ ಹಾಳಾದ ನಂತರ ಅರಿವಾಗುವುದಕ್ಕಿಂತ ಮೊದಲು ಎಚ್ಚರವಾಗಿರುವುದು ಒಳ್ಳೆಯದು ಎಂದು ತಿಳಿಸಿದರು.
ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ಪ್ರತಿಭೆ ಹೊಂದಿದ ನಗರದ ಕೆಜಿಪಿ ಶಾಲೆಯ ಆಕಾಂಕ್ಷಾ ಪ್ರಮೋದ ಪುರಾಣಿ, ಉಪಳಾಂವನ ಶ್ರೀರಾಮ ಕನ್ನಡ
ಕಾನ್ವೆಂಟ್ ಶಾಲೆಯ ಸ್ನೇಹಾ ಅರುಣಕುಮಾರ ನಿಪ್ಪಾಣಿ, ಕಿರಣ ಮಹಾಂತೇಶ ಆಲಗೂಡರಿಗೆ “ಕಲೆ ಸಮೃದ್ಧಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನ್ಯಾಯವಾದಿ ಹಣಮಂತರಾಯ ಅಟ್ಟೂರ, ಡಾ| ಬಸವರಾಜ ಜಿ.ಟಿ., ಚಿಂತಕಿ ಪರವೀನ್ ಸುಲ್ತಾನಾ ಮಾತನಾಡಿದರು. ಕೆ.ಗಿರಿಮಲ್ಲ, ಪರಮೇಶ್ವರ ಶಟಕಾರ, ಸುಭಾಷ ಚಕ್ರವರ್ತಿ, ಶ್ರೀಕಾಂತ ಪಾಟೀಲ ತಿಳಗೂಳ, ಪಿಡಿಎ ಕಾಲೇಜಿನ ಪ್ರಾಧ್ಯಾಪಕ ಡಾ| ಬಾಬುರಾವ್ ಶೇರಿಕಾರ, ಬಸವರಾಜ ಮೊರಬದ, ಜಗನ್ನಾಥ ತರನಳ್ಳಿ, ನೀಲಾಂಬಿಕಾ ಚೌಕಿಮಠ, ಸಂದೀಪ ಭರಣಿ, ಶಿವಾನಂದ ಮಠಪತಿ, ನಾಗರಾಜ ಹೆಬ್ಟಾಳ, ಶ್ರೀದೇವಿ ಶಟಕಾರ, ಗೀತಾ ಚಕ್ರವರ್ತಿ ಹಾಗೂ ಇತರರಿದ್ದರು.