– ಕರ್ನಾಟಕ ಈಗ ಸಿಲಿಕಾನ್ ವ್ಯಾಲಿ ಅಲ್ಲ, ಸಿಲಿಕಾನ್ ಹಿಲ್
– ಹೂಡಿಕೆಗೆ ಅತ್ಯಂತ ಪ್ರಶಸ್ತ ತಾಣ: ಸಚಿವ ದೇಶಪಾಂಡೆ
ಬೆಂಗಳೂರು: ಉದ್ಯಮಿಗಳು ಕರ್ನಾಟಕದಲ್ಲಿ ಹೂಡಿಕೆ ಮಾಡಿದರೆ ಲಾಭ ಖಚಿತವಾಗಿದ್ದು, ರಾಜ್ಯವು ಹೂಡಿಕೆಗೆ ಪ್ರಶಸ್ತ ತಾಣವಾಗಿದೆ ಎಂದು ಕೈಗಾರಿಕೆ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.
ಪ್ರವಾಸಿ ಭಾರತೀಯ ದಿವಸ್ ಸಮಾವೇಶದ ಕೊನೆಯ ದಿನವಾದ ಸೋಮವಾರ ಆಯೋಜಿಸಿದ ಇನ್ವೆಸ್ಟ್ ಕರ್ನಾಟಕ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹೂಡಿಕೆ ಮಾಡಿದ ಕೈಗಾರಿಕೋದ್ಯಮಿಗಳು ಲಾಭದತ್ತ ಮುನ್ನುಗ್ಗುತ್ತಿದ್ದಾರೆ. ಅಲ್ಲದೇ, ರಾಜ್ಯವು ಸುಭಿಕ್ಷವಾಗಿದೆ. ಉದ್ಯಮಿಗಳು ಬಂಡವಾಳ ಹೂಡಲು ರಾಜ್ಯವು ಸೂಕ್ತ ಸ್ಥಳವಾಗಿದೆ. ಹಲವು ಸಮೀಕ್ಷೆಗಳಿಂದ ಇದು ಸಾಬೀತಾಗಿದೆ ಎಂದು ಹೇಳಿದರು.
250 ಕೋಟಿ ರೂ.ಗಿಂತ ಹೆಚ್ಚು ಹೂಡಿಕೆ ಮಾಡುವ ಉದ್ಯಮಿಗಳಿಗೆ ವಿಶೇಷ ಸವಲತ್ತುಗಳನ್ನು ನೀಡಲಾಗುತ್ತಿದೆ. ಒಂದು ವೇಳೆ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಸಾಧ್ಯವಾಗದಿದ್ದರೆ ಪರವಾಗಿಲ್ಲ. ವಿದೇಶಗಳಲ್ಲಿ ರಾಜ್ಯದ ಪ್ರತಿನಿಧಿಯಾಗಿ ಹೂಡಿಕೆ ಹರಿದು ಬರುವಂತೆ ಕಾರ್ಯನಿರ್ವಹಿಸಿ ಎಂದು ಕರ್ನಾಟಕ ಮೂಲದ ಅನಿವಾಸಿ ಭಾರತೀಯರಿಗೆ ಕರೆ ನೀಡಿದರು.
ಉದ್ದಿಮೆಗಳ ಸ್ಥಾಪನೆಗೆ ರಾಜ್ಯವು ಸದಾ ಬೆಂಬಲ ನೀಡಲಿದೆ. ಹಲವು ವರ್ಷಗಳ ಹಿಂದೆಯೇ ಐಟಿ ನೀತಿಯನ್ನು ರೂಪಿಸಲಾಗಿದೆ. ಹಲವು ಸೌಕರ್ಯಗಳನ್ನು ನೀಡಿದ್ದರಿಂದ ರಾಜ್ಯದಲ್ಲಿ ಐಟಿ ಕ್ಷೇತ್ರ ತಲೆ ಎತ್ತಿದ್ದು, ವಿಶ್ವ ಖ್ಯಾತಿ ಪಡೆದುಕೊಂಡಿದೆ. ರಾಜ್ಯದಲ್ಲಿ 15 ಲಕ್ಷಕ್ಕಿಂತ ಹೆಚ್ಚು ಮಂದಿ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. 15 ವರ್ಷಗಳಲ್ಲಿ 1.25 ಲಕ್ಷ ಕೋಟಿ ರೂ. ಮೊತ್ತದ ಐಟಿ ಉತ್ಪನ್ನಗಳನ್ನು ಕರ್ನಾಟಕ ರಫ್ತು ಮಾಡುತ್ತಿದೆ. ಕರ್ನಾಟಕವನ್ನು ದೇಶದ ಸಿಲಿಕಾನ್ ವ್ಯಾಲಿ ಎಂದು ಕರೆಯಲಾಗುತ್ತಿದ್ದು, ಇದೀಗ ಸಿಲಿಕಾನ್ ಹಿಲ್ ಆಗಿ ಪರಿವರ್ತನೆಯಾಗಿದೆ ಎಂದರು.