Advertisement

ಇಂಡಿ ಕ್ಷೇತ್ರಕ್ಕೆ ಅಧ್ಯಕ್ಷಗಿರಿ ಖಚಿತ

01:08 PM Dec 20, 2018 | |

ಇಂಡಿ: ಜಿಲ್ಲಾ ಪಂಚಾಯತ್‌ ಎರಡನೇ ಅವಧಿ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಪ್ರಾರಂಭಗೊಂಡು ಕೊನೆಗೂ ಕಾಂಗ್ರೆಸ್‌ನ ಇಂಡಿ ಕ್ಷೇತ್ರದ ಸಾಲೋಟಗಿ ಜಿಪಂ ಸದಸ್ಯ ಶಿವಯೋಗೆಪ್ಪ ನೇದಲಗಿ ಹಾಗೂ ಬಬಲೇಶ್ವರ ಕ್ಷೇತ್ರದ ಸುಜಾತಾ ಕಳ್ಳಿಮನಿ ಅವರಿಗೆ ಅರ್ಧ-ಅರ್ಧ ಅಧಿಕಾರ ಹಂಚಿಕೊಳ್ಳಲು ಕಾಂಗ್ರೆಸ್‌ ಹೈ ಕಮಾಂಡ್‌ ತಿಳಿಸಿದೆ.

Advertisement

ಬುಧವಾರ ಕಾಂಗ್ರೆಸ್‌ನ 13 ಜಿಪಂ ಸದಸ್ಯರು ಬೆಳಗಾವಿಗೆ ತೆರಳಿ ಪಕ್ಷದ ಪ್ರಮುಖರಾದ ಈಶ್ವರ ಖಂಡ್ರೆ, ಶಿವಾನಂದ ಪಾಟೀಲ, ಎಸ್‌.ಆರ್‌. ಪಾಟೀಲ ಹಾಗೂ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರನ್ನು ಭೇಟಿಯಾಗಿದ್ದಾರೆ. 

ಮುಖಂಡರು ತಮ್ಮ ಸಮ್ಮುಖದಲ್ಲಿ ಇಬ್ಬರನ್ನೂ ಕರೆಸಿ ಅರ್ಧ-ಅರ್ಧ ಅವಧಿಗೆ ಅಧಿಕಾರ ಹಂಚಿಕೊಳ್ಳಲು ತಿಳಿಸಿದ್ದಾರೆ ಎಂದು ತಿಳಿದು ಬಂದಿದ್ದು ಪ್ರಥಮವಾಗಿ ಇಂಡಿ ಕ್ಷೇತ್ರದ ಶಿವಯೋಗೆಪ್ಪ ನೇದಲಗಿ ಅವರನ್ನು ಅಧ್ಯಕ್ಷ ಸ್ಥಾನಕ್ಕೇರಿಸಲು ಮುಖಂಡರು ಸೈ ಎಂದಿದ್ದಾರೆ ಎನ್ನಲಾಗಿದೆ.

ಬಹು ವರ್ಷಗಳಿಂದ ಇಂಡಿ ಕ್ಷೇತ್ರಕ್ಕೆ ಅಧ್ಯಕ್ಷಗಿರಿ ಸಿಕ್ಕಿಲ್ಲ ಮತ್ತು ನೀಲಮ್ಮ ಮೇಟಿ ಹಾಗೂ ಸುಜಾತಾ ಕಳ್ಳಿಮನಿ ಒಂದೇ ಸಮಾಜದವರಾಗಿದ್ದು ಈಗಾಗಲೆ ನೀಲಮ್ಮ ಮೇಟಿ ಪ್ರಥಮವಾಗಿ ಅಧಿಕಾರ ಅನುಭವಿಸಿದ್ದಾರೆ. ಹೀಗಾಗಿ ನೇದಲಗಿ ಅವರಿಗೆ ಮೊದಲ ಆದ್ಯತೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಎರಡನೇ ಅವಧಿಗೆ ಇಂಡಿ ಕ್ಷೇತ್ರಕ್ಕೆ ಜಿಪಂ
ಅಧ್ಯಕ್ಷಗಿರಿ ಒಲಿಯಬೇಕಿದೆ.

ಆದರೆ ಬಬಲೇಶ್ವರ ಕ್ಷೇತ್ರದ ಸುಜಾತಾ ಕಳ್ಳಿಮನಿ ಹಾಗೂ ಇಂಡಿ ಕ್ಷೇತ್ರದ ನೇದಲಗಿ ಪೈಪೋಟಿ ಒಡ್ಡಿದ್ದರಿಂದ ಇಬ್ಬರಿಗೂ ಸಮಾಧಾನ ಮಾಡಲು 14-14 ತಿಂಗಳು ಅಧಿಕಾರ ಹಂಚಿಕೊಳ್ಳಲು ಮುಖಂಡರು ತಿಳಿಸಿದ್ದರಿಂದ ನೇದಲಗಿ ಅವರಿಗೆ ಅಧಿಕಾರ ಸಿಕ್ಕರೆ ಕೇವಲ 14 ತಿಂಗಳು ಅಧ್ಯಕ್ಷರಾಗಲಿದ್ದಾರೆ. 

Advertisement

ಈ ಮೊದಲೇ ಇಂಡಿ ಕ್ಷೇತ್ರದ ಸಾಲೋಟಗಿ ಜಿಪಂ ಸದಸ್ಯ ಶಿವಯೋಗೆಪ್ಪ ನೇದಲಗಿ ಅವರನ್ನು ಅಧ್ಯಕ್ಷ ಮಾಡುವುದಕ್ಕಾಗಿ ಶಾಸಕ ಯಶವಂತರಾಯಗೌಡ ಪ್ರಯತ್ನಿಸಿದ್ದರು. ಈಗ ಎರಡನೇ ಅವಧಿಗಾದರೂ ಅಧ್ಯಕ್ಷರನ್ನಾಗಿ ಮಾಡಲು ಶಾಸಕರು ಪಣ ತೊಟ್ಟಿದ್ದರು. ಕೊಟ್ಟ ಮಾತಿನಂತೆ ಶಾಸಕ ಯಶವಂತರಾಯಗೌಡ ಬುಧವಾರ ಬೆಳಗಾವಿಯಲ್ಲಿ ಕಾಂಗ್ರೆಸ್‌ ಮುಖಂಡರ ಸಮ್ಮುಖದಲ್ಲಿ ನೇದಲಗಿ ಅವರನ್ನು ಅಧ್ಯಕ್ಷ ಮಾಡುವ ತಮ್ಮ ಮಾತು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಬಹು ವರ್ಷಗಳ ಹಿಂದೆ ತಾಲೂಕಿನ ಅಗರಖೇಡದ ಅನಿತಾ ಪಾಂಡ್ರೆ ಅಧ್ಯಕ್ಷರಾಗಿದ್ದರು. ತದ ನಂತರ 2004ರಲ್ಲಿ ಹತ್ತು ತಿಂಗಳ ಅವಧಿಗೆ ಈಗಿನ ಶಾಸಕ ಯಶವಂತರಾಯಗೌಡ ಪಾಟೀಲರು ಅಧ್ಯಕ್ಷರಾಗಿದ್ದರು. 14 ವರ್ಷಗಳ ನಂತರ ಕ್ಷೇತ್ರಕ್ಕೆ ಮತ್ತೆ ಜಿಪಂ ಅಧ್ಯಕ್ಷಗಿರಿ ಒಲಿಯಲಿದೆ.

42 ಸಂಖ್ಯಾಬಲ ಹೊಂದಿದ ಜಿಪಂನಲ್ಲಿ 20 ಬಿಜೆಪಿ, 18 ಕಾಂಗ್ರೆಸ್‌, 3 ಜೆಡಿಎಸ್‌ ಹಾಗೂ ಒರ್ವ ಪಕ್ಷೇತರ ಸದಸ್ಯರಿದ್ದು ನೇದಲಗಿ ಅವರಿಗೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷೇತರ ಸದಸ್ಯರೆಲ್ಲರೂ ಬೆಂಬಲಿಸಲಿದ್ದು ತಾವೇ ಅಧ್ಯಕ್ಷರಾಗುತ್ತೇವೆ ಎಂದು ನೇದಲಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

„ಉಮೇಶ ಬಳಬಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next