Advertisement
ಸಂಪುಟ ವಿಸ್ತರಣೆಯಾದರೂ ಖಾತೆ ಹಂಚಿಕೆ ಸಿಎಂ ಯಡಿಯೂರಪ್ಪ ಅವರಿಗೆ ತಲೆನೋವಾಗಿ ಪರಿಣಮಿಸಿತ್ತು. ತಮಗೆ ಗೊತ್ತುಪಡಿಸಿದ ಖಾತೆ ಗಳನ್ನು ಮುಖ್ಯಮಂತ್ರಿಗಳು ತಮ್ಮ ಬಳಿಯೇ ಇಟ್ಟು ಕೊಳ್ಳಬೇಕು ಎಂಬುದು ಅನರ್ಹತೆಗೊಂಡ ಶಾಸಕರ ಒತ್ತಾಯವಾಗಿತ್ತು. ಆದರೆ ಪ್ರಭಾವಿ ಖಾತೆಗಳನ್ನು ತಮಗೇ ನೀಡಬೇಕು ಎಂದು ಹಿರಿಯ ಶಾಸಕರು ಒತ್ತಡ ಹೇರಿದ್ದರು. ಯಡಿಯೂರಪ್ಪ ಅವರು ವರಿಷ್ಠರ ಸಲಹೆಯನ್ನೂ ಪಡೆದು ಕೊನೆಗೂ ಖಾತೆ ಹಂಚಿಕೆ ಮಾಡಿದ್ದಾರೆ.
Related Articles
Advertisement
ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯದ ವಿಶ್ವಾಸವನ್ನು ಗಳಿಸಿ ಪಕ್ಷ ಬಲವರ್ಧನೆ ಮಾಡಿಕೊಳ್ಳುವ ಉದ್ದೇಶದಿಂದ ಒಕ್ಕಲಿಗ ಸಮುದಾಯದ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರನ್ನು ಉಪಮುಖ್ಯಮಂತ್ರಿ ಮಾಡಲಾಗಿದೆ. ಜತೆಗೆ ಒಕ್ಕಲಿಗ ಸಮುದಾಯದ ಆರ್.ಅಶೋಕ್ ಅವರಿಗೆ ಕಂದಾಯ ಖಾತೆ ನೀಡಿ ಹಿರಿತನವನ್ನು ಸಮತೋಲನ ಮಾಡುವ ಕಸರತ್ತು ನಡೆಸಿದಂತಿದೆ. ಒಟ್ಟಾರೆ ಪಕ್ಷವನ್ನು ಬೆಂಬಲಿಸುತ್ತಾ ಬಂದಿರುವ ಸಮುದಾಯಗಳಿಗೆ ವಿಶೇಷ ಆದ್ಯತೆ ನೀಡುವ ಜತೆಗೆ ಪಕ್ಷ ಸಂಘಟನೆ ದೃಷ್ಟಿಯಿಂದಲೂ ಒಂದಿಷ್ಟು ಸಮತೋಲನ ಸಾಧಿಸುವ ಪ್ರಯತ್ನ ನಡೆಸಿದಂತಿದೆ.
ಅನರ್ಹಗೊಂಡ ಶಾಸಕರ “ವಿಶ್ವಾಸ’: ಇನ್ನೊಂದೆಡೆ ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ ಅನರ್ಹತೆಗೊಂಡಿರುವ ಶಾಸಕರ ವಿಶ್ವಾಸವನ್ನು ಉಳಿಸಿಕೊಳ್ಳುವ ಪ್ರಯತ್ನವೂ ಮೇಲ್ನೋಟಕ್ಕೆ ಕಾಣುತ್ತದೆ. ಪ್ರಮುಖ ಖಾತೆಗಳನ್ನು ಹಿರಿಯ ಶಾಸಕರಿಗೆ ಹಂಚಿಕೆ ಮಾಡಿದರೂ ಉಳಿಕೆ ಪ್ರಮುಖ ಖಾತೆಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಬಳಿಯೇ ಇಟ್ಟುಕೊಳ್ಳುವ ಮೂಲಕ ಅನರ್ಹತೆಗೊಂಡಿರುವ ಶಾಸಕರ “ವಿಶ್ವಾಸ’ ಗಳಿಸುವ ಪ್ರಯತ್ನ ಮಾಡಿದಂತಿದೆ. ಪಕ್ಷೇತರ ಶಾಸಕರಾದ ಎಚ್.ನಾಗೇಶ್ ಅವರಿಗೆ ಮೈತ್ರಿ ಸರ್ಕಾರ ಸಣ್ಣ ಕೈಗಾರಿಕೆ ಖಾತೆ ನೀಡಿತ್ತು.
ಆದರೆ ಬಿಜೆಪಿ ಸರ್ಕಾರ ಅಬಕಾರಿ ಖಾತೆ ನೀಡುವ ಮೂಲಕ ಪಕ್ಷದ ಕೈಹಿಡಿದವರ ಹಿತ ಕಾಪಾಡುವ ಭರವಸೆ ನೀಡಿದಂತಿದೆ. ಒಂದೊಮ್ಮೆ ಅನಿರೀಕ್ಷಿತವಾಗಿ ಮಧ್ಯಂತರ ಚುನಾವಣೆ ಎದುರಾದರೆ ಇಲ್ಲವೇ ಸಾರ್ವತ್ರಿಕ ವಿಧಾನಸಭಾ ಚುನಾವಣೆಯನ್ನೂ ಗಮನದಲ್ಲಿಟ್ಟುಕೊಂಡು ಖಾತೆ ಹಂಚಿಕೆ ಮಾಡಿದಂತಾಗಿದೆ. ಜತೆಗೆ ರಾಜ್ಯದಲ್ಲಿ ಸಂಘಟನೆಯನ್ನು ಇನ್ನಷ್ಟು ಬಲವರ್ಧನೆಗೊಳಿಸಿ ಇನ್ನಷ್ಟು ಗಟ್ಟಿಗೊಳಿಸಿಕೊಳ್ಳುವ ದೃಷ್ಟಿಯಿಂದಲೂ ಅಳೆದು ತೂಗಿ ಖಾತೆ ಹಂಚಿಕೆಯಲ್ಲಿ ಪಕ್ಷ ಜಾಣ ಹೆಜ್ಜೆ ಇಟ್ಟಂತಿದ್ದು, ಎಷ್ಟರ ಮಟ್ಟಿಗೆ ಫಲ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
* ಎಂ. ಕೀರ್ತಿಪ್ರಸಾದ್