ಟೆಲಿಗ್ರಾಂ ಸಾಮಾಜಿಕ ಜಾಲತಾಣದ ಮೂಲಕ ದೇಶದ ಕೆಲವು ರಾಜಕಾರಣಿಗಳು, ಪತ್ರಕರ್ತರ ಖಾಸಗಿ ಮಾಹಿತಿಗಳು ಸೋರಿಕೆಯಾಗಿದ್ದು, ಇದು ಜನರ ಖಾಸಗಿತನದ ಬಗ್ಗೆ ಆತಂಕ ಮೂಡಿಸಿದ್ದವು. ಅದರಲ್ಲೂ ಕೊವಿನ್ ಮೂಲಕ ಯಾರ್ಯಾರು ಲಸಿಕೆ ಪಡೆದಿರುವ ಎಲ್ಲರ ಮಾಹಿತಿಗಳು ಇದೇ ರೀತಿ ಜಾಹೀರು ಆಗಬಹುದು ಎಂಬ ಆತಂಕವೂ ಸೃಷ್ಟಿಯಾಗಿತ್ತು.
ಅಂದರೆ ಸೋಮವಾರ ಬೆಳಗ್ಗೆ ರಾಜ್ಯಸಭಾ ಉಪ ಸಭಾಪತಿ ಹರಿವಂಶ ನಾರಾಯಣ್ ಸಿಂಗ್, ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಕಾಂಗ್ರೆಸ್ ನಾಯಕರಾದ ಪಿ.ಚಿದಂಬರಂ, ಜೈರಾಮ್ ರಮೇಶ್, ಅಭಿಷೇಕ್ ಮನು ಸಿಂಘ್ವಿ, ಕೆ.ಸಿ.ವೇಣುಗೋಪಾಲ್, ತೃಣಮೂಲ ಕಾಂಗ್ರೆಸ್‌ನ ಡೆರೇಕ್ ಓಬ್ರಿಯಾನ್, ಸುಷ್ಮಿತಾ ದೇವ್, ಶಿವಸೇನೆ ಉದ್ಧವ್ ಬಣದ ಸಂಜಯ್ ರೌತ್, ಬಿಜೆಪಿಯ ಅಣ್ಣಾಮಲೈ, ಕೇಂದ್ರ ಸಚಿವೆ ಮೀನಾಕ್ಷಿ ಲೇಖೀ, ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸಹಿತ ಹಲವರ ಮಾಹಿತಿಗಳು ಸೋರಿಕೆಯಾಗಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿತ್ತು.
ಇದರ ಬೆನ್ನಲ್ಲೇ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದ್ದು, ಕೊವಿನ್‌ನ ಎಲ್ಲ ಮಾಹಿತಿ ಸುಭದ್ರವಾಗಿದ್ದು, ಅದರಿಂದ ಮಾಹಿತಿ ಕದಿಯಲು ಸಾಧ್ಯವೇ ಇಲ್ಲ ಎಂದು ಹೇಳಿದೆ. ಅಲ್ಲದೇ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯವೂ ಸ್ಪಷ್ಟನೆ ನೀಡಿದ್ದು, ಇದು ಕೊವಿನ್ ಕಡೆಯಿಂದ ಆಗಿರುವ ಮಾಹಿತಿ ಸೋರಿಕೆಯಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಹೀಗಾಗಿ ಮೂರನೇ ವೇದಿಕೆ ಮೂಲಕ ಈ ಮಾಹಿತಿ ಹಂಚಿಕೆಯಾಗಿರಬಹುದು ಎಂಬ ಅನುಮಾನದ ಹಿನ್ನೆಲೆಯಲ್ಲಿ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ತನಿಖೆಗೆ ಆದೇಶ ನೀಡಿದೆ.
ಏನೇ ಆಗಲಿ ಇದು ಕೊವಿನ್ ಮೂಲಕ ಆಗದೇ, ಬೇರೊಂದು ವೇದಿಕೆ ಮೂಲಕವೇ ಆಗಿದೆ ಎಂದು ಅಂದುಕೊಂಡರೂ, ಖಾಸಗಿತನದ ವಿಚಾರದಲ್ಲಿ ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಸದ್ಯದ ಪರಿಸ್ಥಿತಿಯಲ್ಲಿ ಸೈಬರ್ ಅಪರಾಧಗಳು ಎಗ್ಗಿಲ್ಲದೇ ಬೆಳೆಯುತ್ತಿವೆ. ಅಮಾಯಕ ಜನರು, ತಮ್ಮ ಖಾತೆಯಿಂದ ಲಕ್ಷಾಂತರ ಹಣವನ್ನೂ ಕಳೆದುಕೊಳ್ಳುತ್ತಿದ್ದಾರೆ. ಇಂಥ ಹೊತ್ತಿನಲ್ಲಿ ಅತ್ಯಂತ ಸುರಕ್ಷಿತವಾಗಿ ಇರಬೇಕಾದ ಆಧಾರ್ ಸಂಖ್ಯೆಯಂಥ ಮಾಹಿತಿ ಸೋರಿಕೆಯಾಗುವುದು ಎಂದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದೇ ಅರ್ಥ.
ಅದಲ್ಲದೇ ಕೊವಿನ್‌ನಲ್ಲಿ ಸದ್ಯ ಭಾರತದ 100 ಕೋಟಿಗೂ ಹೆಚ್ಚು ಮಂದಿಯ ಆಧಾರ್ ಸಂಖ್ಯೆ ಸೇರಿದಂತೆ ಖಾಸಗಿ ಮಾಹಿತಿ ಸಂಗ್ರಹವಾಗಿದೆ. ಒಂದೇ ಕಡೆಯಿಂದ ಈ ಪ್ರಮಾಣದ ಮಾಹಿತಿ ಇರುವುದು ಕೊವಿನ್‌ನಲ್ಲಿ ಮಾತ್ರ. ಇಂಥ ವೇದಿಕೆಗೆ ಹೆಚ್ಚಿನ ಸುರಕ್ಷತೆ ನೀಡುವುದು ಕೇಂದ್ರ ಸರಕಾರದ ಆದ್ಯ ಕರ್ತವ್ಯವಾಗಿದೆ.
ಅಲ್ಲದೆ ಪಾಸ್‌ಪೋರ್ಟ್ ಸಂಖ್ಯೆ, ಜನನ ದಿನಾಂಕ, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆಯಂಥ ಮಾಹಿತಿ ಒಟ್ಟಾಗಿ ಸಿಕ್ಕರೆ ಸೈಬರ್ ಕಳ್ಳರಿಗೆ ಕಳ್ಳತನ ಮಾಡಲು ಸುಲಭದಾರಿ ಸಿಕ್ಕಂತಾಗುತ್ತದೆ. ಈ ನಿಟ್ಟಿನಲ್ಲಿ ಸದ್ಯ ಟೆಲಿಗ್ರಾಂ ಬಾಟ್ ಮೂಲಕ ಸೋರಿಕೆ ಹೇಗಾಯ್ತು? ಇದರ ಹಿಂದಿರುವ ಹ್ಯಾಕರ್ ಯಾರು? ಯಾವ ವೇದಿಕೆಯಿಂದ ಈ ಮಾಹಿತಿಗಳು ಕಳವಾಗಿವೆ ಎಂಬ ಬಗ್ಗೆ ಕೇಂದ್ರ ಸರಕಾರ ಆದಷ್ಟು ಬೇಗ ತನಿಖೆ ನಡೆಸಬೇಕು. ಅಲ್ಲದೆ ಎಲ್ಲರ ಮಾಹಿತಿಗಳ ಭದ್ರತೆಗೂ ಪರಮೋತ್ಛ ಆದ್ಯತೆ ನೀಡಬೇಕು.