Advertisement

ಸಾಂಕ್ರಾಮಿಕ ರೋಗ ಬರಬಹುದು ಎಚ್ಚರ!

05:16 PM May 30, 2018 | Team Udayavani |

ಧಾರವಾಡ: ಬೇಸಿಗೆ ಮುಗಿದು ಮಳೆಗಾಲ ಆರಂಭಗೊಂಡಿದ್ದು, ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಹೆಚ್ಚುವಂತೆ ಮಾಡಿದೆ. 2018ರ ಜನವರಿ ತಿಂಗಳಿನಿಂದ ಮೇ 23ರವರೆಗಿನ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ 19 ಜನರಲ್ಲಿ ಡೆಂಘೀ ಪತ್ತೆಯಾಗಿದ್ದು, ಐದು ಜನರಲ್ಲಿ ಚಿಕೂನ್‌ ಗುನ್ಯಾ ಕಾಣಿಸಿಕೊಂಡಿದೆ. 2013ರಿಂದ 2017ರವರೆಗೆ ಮೆದುಳು ಜ್ವರ ಜಿಲ್ಲೆಯಲ್ಲಿ ಕಾಣಿಸಿಕೊಂಡಿರಲಿಲ್ಲ ಆದರೀಗ ಹುಬ್ಬಳ್ಳಿಯಲ್ಲಿ ಮೆದುಳು ಜ್ವರಕ್ಕೆ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ.

Advertisement

2017ರಲ್ಲಿ ಜಿಲ್ಲೆಯಲ್ಲಿ 172 ಜನರಲ್ಲಿ ಡೆಂಘೀ ರೋಗ ಪತ್ತೆ ಆಗಿತ್ತು. ಈ ಪೈಕಿ ಕುಂದಗೋಳದಲ್ಲಿ 1 ಹಾಗೂ ಧಾರವಾಡ ನಗರದಲ್ಲಿ ಇಬ್ಬರು ಬಲಿಯಾಗಿದ್ದರು. ಈ ಸಲ 2018ರಲ್ಲಿ ಮೇ ತಿಂಗಳೊಳಗೆ 19 ಜನರಲ್ಲಿ ಡೆಂಘೀ ಪತ್ತೆ ಆಗಿದ್ದು, ಇವರೆಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಹುಬ್ಬಳ್ಳಿ ನಗರದಲ್ಲಿ 8, ಕುಂದಗೋಳದಲ್ಲಿ 1, ಧಾರವಾಡ,
ಹುಬ್ಬಳ್ಳಿ, ಕಲಘಟಗಿ, ನವಲಗುಂದ, ಧಾರವಾಡ ಗ್ರಾಮೀಣದಲ್ಲಿ ತಲಾ 2 ಜನರಲ್ಲಿ ಡೆಂಘೀ ಪತ್ತೆಯಾಗಿದೆ.

ನಗರದಲ್ಲೇ ಹೆಚ್ಚು: 2017ರಲ್ಲಿ ಧಾರವಾಡದಲ್ಲಿ 2, ಹುಬ್ಬಳ್ಳಿ ನಗರದಲ್ಲಿ 9 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 11 ಜನರಲ್ಲಿ ಚಿಕೂನ್‌ ಗುನ್ಯಾ ಕಾಣಸಿಕೊಂಡಿತ್ತು. ಈಗ 2018 ರ ಮೇ ತಿಂಗಳೊಳಗೆ ಧಾರವಾಡ ಗ್ರಾಮೀಣದಲ್ಲಿ 2, ಧಾರವಾಡ ನಗರದಲ್ಲಿ 2, ಹುಬ್ಬಳ್ಳಿ ನಗರದಲ್ಲಿ 1 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 5 ಜನರಲ್ಲಿ ಚಿಕೂನ್‌ ಗುನ್ಯಾ ಕಾಣಸಿಕೊಂಡಿದೆ. ಇದೆಲ್ಲ ಅಂಕಿ ಅಂಶಗಳನ್ನು ಗಮನಿಸಿದಾಗ ಗ್ರಾಮೀಣಕ್ಕಿಂತ ನಗರ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಕಂಡು ಬಂದಿದೆ. ಮಹಾನಗರ ಪಾಲಿಕೆಯ ದಿವ್ಯ ನಿರ್ಲಕ್ಷ್ಯವೇ ಇದಕ್ಕೆ ಕಾರಣವೆನ್ನಬಹುದು.

ನಿರ್ಲಕ್ಷ್ಯವೇ ಕಾರಣ: ಇದೀಗ ಜಿಲ್ಲೆಯಲ್ಲಿ ಉತ್ತಮ ಮಳೆ ಆಗುತ್ತಿದ್ದು, ಈ ಸಮಯದಲ್ಲಿ ಸಾಂಕ್ರಾಮಿಕ ರೋಗಗಳ ಹರಡುವಿಕೆಯ ಭೀತಿಯೇ ಜಾಸ್ತಿ. ಕುಡಿಯುವ ನೀರಿನ ಪೈಪ್‌ ಲೈನ್‌ ಒಡೆದು ಚರಂಡಿ ನೀರು ಸೇರುವುದು, ಕಸ, ತಾಜ್ಯ ವಸ್ತುಗಳ ನಿರ್ವಹಣೆ ಕೊರತೆ, ಗ್ರಾಮೀಣ ಪ್ರದೇಶದಲ್ಲಿ ಬಯಲು ಶೌಚಾಲಯ ಸೇರಿದಂತೆ ನಾನಾ ಕಾರಣಗಳಿಂದ
ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕಾದ ಜಿಲ್ಲಾಡಳಿತ ಹಾಗೂ ಪಾಲಿಕೆ ಕಳೆದ ಒಂದೂವರೆ ತಿಂಗಳಿಂದ ಚುನಾವಣಾ ಕಾರ್ಯದಲ್ಲಿ ಮಗ್ನಗೊಂಡಿತ್ತು. ಈ ಸಲ ಅವಳಿ ನಗರದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿ ಕಂಡು ಬಂದರೂ ಸಹ ಚುನಾವಣೆಯ ನೆಪ ಹೇಳಿ ಫಾಗಿಂಗ್‌ ಮಾಡುವ ಕಾರ್ಯಕ್ಕೂ ಪಾಲಿಕೆ ಕೊಕ್ಕೆ ಹಾಕಿತ್ತು. ಈಗ ಚುನಾವಣೆ ಕಾರ್ಯ ಮುಗಿದಿದ್ದು, ಇನ್ನಾದರೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂಬುದು ಜನರ ಆಗ್ರಹವಾಗಿದೆ.

ಕಂತ್ರಿ ಕಜ್ಜಿಯ ಕಿರಿಕಿರಿ: ಚರ್ಮ ರೋಗಿಗಳೇ ಹೆಚ್ಚು..
ಜಿಲ್ಲಾಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಚರ್ಮ ರೋಗಿಗಳ ಸಂಖ್ಯೆಯೇ ಹೆಚ್ಚಾಗಿದೆ. ಈ ಪೈಕಿ ಕಜ್ಜಿ ರೋಗಕ್ಕೆ ತುತ್ತಾದ ಜನರೇ ಹೆಚ್ಚು. ತುರಿಕೆಯ ಉಪಶಮನಕ್ಕಾಗಿ ಆಸ್ಪತ್ರೆಗಳ ಬಾಗಿಲು ತಟ್ಟುವಂತಾಗಿದೆ. ಸ್ವಚ್ಚತೆ ಕೊರತೆಯೇ ಕಜ್ಜಿ ರೋಗಕ್ಕೆ ಮೂಲ ಕಾರಣ ಆಗಿದ್ದು, ಇದು ಕುಟುಂಬ ಸದಸ್ಯರಿಗೆ ಒಬ್ಬರಿಗೆ ಬಂದರೆ ಸಾಕು ಕ್ಷಣ ಮಾತ್ರದಲ್ಲಿ ಇಡೀ ಕುಟುಂಬವನ್ನೇ ಆವರಿಸಿಕೊಳ್ಳುತ್ತದೆ. ಹೀಗಾಗಿ ಒಬ್ಬರಿಗೆ ಇದು ಕಾಣಿಸಿಕೊಂಡರೂ ಇಡೀ ಕುಟುಂಬ ವರ್ಗವೇ ಚಿಕಿತ್ಸೆಗೆ ಒಳಗಾಗಬೇಕು. ಇನ್ನೂ ಇದಕ್ಕೆ ಈಗ ನೀಡುತ್ತಿರುವ ಔಷಧಿಯೂ ಸಹ ಕೆಲ ರೋಗಿಗಳಿಗೆ ನಾಟುತ್ತಿಲ್ಲ. ಹೀಗಾಗಿ ಔಷಧಿಗಳ ನಿಯಂತ್ರಣಕ್ಕೂ ಬಾರದ ಕಜ್ಜಿ ವೈರಾಣು ತನ್ನ ಹರಡುವಿಕೆಯ ಸಾಮರ್ಥಯ ಹೆಚ್ಚಿಸಿಕೊಂಡಿರುವ ಕಾರಣದಿಂದ ರೋಗಿಗಳು ಪರದಾಡುವಂತಾಗಿದೆ.

Advertisement

ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮಾಡಲು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಇನ್ನೂ ಜಿಲ್ಲೆಯಲ್ಲಿ ಕಜ್ಜಿ ರೋಗ ಹೆಚ್ಚಾಗಿ ಕಂಡು ಬರುತ್ತಿದ್ದು, ಸ್ವಚ್ಛತೆಯೇ ಇದಕ್ಕೆ ರಾಮಬಾಣವಾಗಿದೆ. ತುರಿಕೆ ಕಂಡು ಬಂದ ತಕ್ಷಣವೇ ನಿರ್ಲಕ್ಷ್ಯ ಮಾಡದೇ ವೈದ್ಯರ ಸಂಪರ್ಕಿಸುವುದು ಒಳಿತು.
ಆರ್‌.ಎಮ್‌.ದೊಡಮನಿ,
ಜಿಲ್ಲಾ ಆರೋಗ್ಯಾಧಿಕಾರಿ, ಧಾರವಾಡ 

ಶಶಿಧರ್‌ ಬುದ್ನಿ 

Advertisement

Udayavani is now on Telegram. Click here to join our channel and stay updated with the latest news.

Next