ರಾಣಿಬೆನ್ನೂರ: ವಿದ್ಯಾರ್ಥಿಗಳು ಜೀವನದಲ್ಲಿ ಸಾಧನೆ ಮಾಡಬೇಕಾದರೆ ಕಠಿಣ ಪರಿಶ್ರಮ ಹಾಗೂ ಶೈಕ್ಷಣಿಕ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡರೆ ಪ್ರಜ್ಞಾಪೂರ್ವಕ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಹುಬ್ಬಳ್ಳಿ ತಾಲೂಕಿನ ಮಂಟೂರು ಸರಕಾರಿ ಸ್ವತಂತ್ರ ಪಪೂ ಕಾಲೇಜಿನ ಪ್ರಾಚಾರ್ಯ ಫಕ್ಕೀರಪ್ಪ ಸೊರಟೂರ ಹೇಳಿದರು.
ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಶ್ರೀಸದ್ಗುರು ಶಿವಾನಂದ ಸಂಯುಕ್ತ ಪಪೂ ಮಹಾವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನ ಪಠ್ಯಪೂರಕ ಚಟುವಟಿಕೆಗಳು, ಪ್ರತಿಭಾ ಪುರಸ್ಕಾರ
ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಆದರ್ಶಗಳಿಲ್ಲದೆ ಮೌಲ್ಯಗಳು ಕುಸಿಯುತ್ತವೆ. ವಿದ್ಯಾರ್ಥಿಗಳು, ಯುವಕರು ದೇಶದ ಅಮೂಲ್ಯ ಸಂಪತ್ತು. ನೀವೇ ದಾರಿ ತಪ್ಪಿದರೆ ಸಮಾಜದ ಅಭಿವೃದ್ಧಿಯಾಗುವುದಾದರೂ ಹೇಗೆ? ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ರೂಪುಗೊಳ್ಳಬೇಕಾದರೆ ಅವಿರತವಾಗಿ ಶ್ರಮಿಸಬೇಕು. ನುಡಿದಂತೆ ನಡೆಯಬೇಕು, ಆಡುವ ನಾಲಿಗೆ ಸರಿಯಾಗಿರಬೇಕು, ವಿದ್ಯೆ, ಕಲಿಕೆಗೆ ಬಡತನ ಸಿರಿತನ ಮುಖ್ಯವಲ್ಲ ಏಕಾಗ್ರತೆ ಹಾಗೂ ಶ್ರದ್ಧೆ ಮುಖ್ಯ ಎಂದರು.
ಕಲಿಕೆ ಸಂದರ್ಭದಲ್ಲಿ ಟಿವಿ, ಮೊಬೈಲ್‌ದಿಂದ ದೂರವಿದ್ದು ಶೈಕ್ಷಣಿಕ ರಂಗದಲ್ಲಿ ಸಾಧನೆ ಮೆಟ್ಟಿಲೇರಬೇಕು. ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು, ಎನ್ ಎಸ್‌ಎಸ್‌ದಿಂದ ಶಿಸ್ತು, ಸಂಯಮ ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಇರುವ ಅವಕಾಶವನ್ನು ಬಳಸಿಕೊಂಡು ಸಾಧನೆ ಮಾಡಬೇಕೆಂದು ಸಲಹೆ ನೀಡಿದರು.
ಈಸ್ಟ್‌ವೆಸ್ಟ್ ಸೀಡ್ಸ್ ಕಂಪನಿ ವಲಯ ವ್ಯವಸ್ಥಾಪಕ ಸ್ವರನ್ನ ಮಾತನಾಡಿ, ವಿದ್ಯಾರ್ಥಿಗಳು ವಿಶಿಷ್ಟ ಸಾಧನೆ ಮಾಡಲು ಪ್ರಯತ್ನಶೀಲರಾಗಬೇಕು. ಶಿಕ್ಷಣದಿಂದ ಬುದ್ದಿವಂತಿಕೆ ಹೆಚ್ಚಾದಂತೆ ನೀವು ದೈಹಿಕ, ಮಾನಸಿಕವಾಗಿ ಪ್ರಭಲರಾಗುತ್ತೀರಿ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡರೆ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ 2017-18ನೇ ಸಾಲಿನ ಎಸ್‌ಎಸ್ ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮಹೇಶ ದೇವರಗಿರಿಮಠ ಹಾಗೂ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ ರೋಹಿಣಿ ಕುಸಗೂರ ಮತ್ತು ಭೂಗೋಳ ಶಾಸ್ತ್ರ ವಿಷಯದಲ್ಲಿ 100ಕ್ಕೆ 100ಅಂಕ ಗಳಿಸಿದ ರೇಣುಕಾ ಎಚ್.ಬಿ. ವಿರೂಪಾಕ್ಷಪ್ಪ ಗೌಳೇರ ಅವರನ್ನು ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಪ್ರಾಂಶುಪಾಲ ಪಿ. ಮುನಿಯಪ್ಪ, ಸ್ಥಳೀಯ ಸಲಹಾ ಸಮೀತಿಯ ಅಧ್ಯಕ್ಷ ಬಿ.ವಿ. ಕುಡುಪಲಿ, ಉಪಾಧ್ಯಕ್ಷ ಆರ್ .ಬಿ. ತೊಟಗೇರ, ಆರ್.ಬಿ. ದೊಡ್ಡನಾಗಳ್ಳಿ, ಭರಮಗೌಡ ಹುಲ್ಲತ್ತಿ, ಮಲ್ಲಿಕಾರ್ಜುನ ಅರಳಿ, ಪಕ್ಷಪ್ಪ ಸಾವಜ್ಜಿ, ಮಂಜಣ್ಣ ಲಿಂಗದಹಳ್ಳಿ, ಪಿ.ಎಸ್. ತೆಂಬದ, ಎಸ್.ಟಿ.ಮೂಲಿಮನಿ. ಉಪನ್ಯಾಸಕರಾದ ಎಂ.ಶಿವಕುಮಾರ, ಎಚ್. ಶಿವಾನಂದ, ಎಚ್.ಪ್ರಶಾಂತ, ಶಿಕ್ಷಕರಾದ ಕೆ.ಜೆ.ಆಶಾ, ಉಮೇಅಬೀಬಾ,
ಎಸ್.ಎಸ್.ಬಡ್ನಿ, ಜಿ.ಸುಚಿತ್ರಾ, ಜಿ. ಸುಮಾ, ಜೈ ಪ್ರಕಾಶ ಇದ್ದರು.