ಮುಂಬೈ: ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ನಿಗದಿತ ಓವರ್ ಮಾದರಿ ಕ್ರಿಕೆಟ್ ನ ನಾಯಕತ್ವದಿಂದ ಕೆಳಗಿಳಿಯುತ್ತಾರೆ ಎಂಬ ಮಾತುಗಳು ಇಂದು ಸಂಚಲನ ಸುದ್ದಿ ಮಾಡಿತ್ತು. ಐಸಿಸಿ ಟಿ20 ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ ಅವರು ಟೆಸ್ಟ್ ತಂಡದ ನಾಯಕರಾಗಿ ಮಾತ್ರ ಮುಂದುವರಿಯಲಿದ್ದಾರೆ ಎಂದು ವರದಿಯಾಗಿತ್ತು.
ಆದರೆ ಈ ಸುದ್ದಿಗಳಿಗೆ ಬಿಸಿಸಿಐ ಪೂರ್ಣವಿರಾಮ ನೀಡಿದೆ. ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಅವರು ಪ್ರತಿಕ್ರಿಯೆ ನೀಡಿದ್ದು, ಇದು ತಪ್ಪು ಸುದ್ದಿ. ಇಂತಹ ಚರ್ಚೆಯೇ ನಡೆದಿಲ್ಲ. ಬಹು ನಾಯಕತ್ವದ ಬಗ್ಗೆ ಬಿಸಿಸಿಐ ಯೋಚಿಸಿಲ್ಲ. ವಿರಾಟ್ ಕೊಹ್ಲಿ ಅವರು ಮೂರು ಮಾದರಿಯ ಕ್ರಿಕೆಟ್ ತಂಡದ ನಾಯಕರಾಗಿ ಮುಂದುವರಿಯಲಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ:ಟೀಂ ಇಂಡಿಯಾದ ಏಕದಿನ, ಟಿ20 ನಾಯಕತ್ವಕ್ಕೆ ವಿರಾಟ್ ಕೊಹ್ಲಿ ಗುಡ್ ಬೈ?
ವಿರಾಟ್ ಕೊಹ್ಲಿ ಅವರು ತನ್ನ ಬ್ಯಾಟಿಂಗ್ ಗೆ ಹೆಚ್ಚಿನ ಮಹತ್ವ ನೀಡುವ ಕಾರಣಕ್ಕಾಗಿ ನಾಯಕತ್ವದ ಜವಾಬ್ದಾರಿಯಿಂದ ಹೊರಬರಲಿದ್ದಾರೆ. ಅವರ ಬದಲಿಗೆ ಏಕದಿನ ಮತ್ತು ಟಿ20 ತಂಡದ ನಾಯಕತ್ವವನ್ನು ರೋಹಿತ್ ಶರ್ಮಾ ವಹಿಸಲಿದ್ದಾರೆ ಎಂದು ವರದಿಯಾಗಿತ್ತು.
ಅಕ್ಟೋಬರ್ ನಲ್ಲಿ ಟಿ20 ವಿಶ್ವಕಪ್ ಕೂಟ ನಡೆಯಲಿದೆ. ಬಿಸಿಸಿಐ ಆಯೋಜನೆಯಲ್ಲಿ ಯುಎಇ ನಲ್ಲಿ ಈ ವಿಶ್ವಕಪ್ ನಡೆಯಲಿದೆ.